ಯುಎಪಿಎ ಕಾಯಿದೆ ರದ್ದುಗೊಳಿಸುವಂತೆ ಕೋರಿ ನಡೆಯುತ್ತಿದೆ ಪತ್ರ ಚಳವಳಿ

ಯುಎಪಿಎ ತಿದ್ದುಪಡಿ ಕಾಯಿದೆಗೆ ಅಪಸ್ವರ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಮಸೂದೆ ಅಂಗೀಕಾರವಾಗುವಾಗಲೇ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಕಾಯಿದೆ ವಿರುದ್ಧ ಪಿಐಎಲ್‌ ಕೂಡ ದಾಖಲಾಗಿತ್ತು.
ಯುಎಪಿಎ ಕಾಯಿದೆ ರದ್ದುಗೊಳಿಸುವಂತೆ ಕೋರಿ ನಡೆಯುತ್ತಿದೆ ಪತ್ರ ಚಳವಳಿ

ವಿವಾದಾತ್ಮಕ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ (ಯುಎಪಿಎ) ವಿರುದ್ಧ ದೇಶದೆಲ್ಲೆಡೆ ಅಪಸ್ವರ ಕೇಳಿಬರುತ್ತಿದೆ. 'ಜನರ ಧ್ವನಿಯನ್ನು ದಮನಗೊಳಿಸುವ ಕಾರ್ಯ ಕಾಯಿದೆಯಿಂದ ನಡೆದಿದೆ'. 'ಅಸಂವಿಧಾನಾತ್ಮಕವಾಗಿರುವ ಕಾನೂನನ್ನು ಕೂಡಲೇ ಹಿಂಪಡೆಯಬೇಕು' ಎಂದು ಕೋರಿ ಪತ್ರ ಚಳವಳಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತಿತರರಿಗೆ ದೇಶದ ಪ್ರಗತಿಪರ ಚಿಂತಕರು, ಲೇಖಕರು, ಸಾಮಾಜಿಕ ಕಾರ್ಯಕರ್ತರು, ವಕೀಲರು ನಾಗರಿಕ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪತ್ರ ಬರೆದಿದ್ದು ಕಾಯಿದೆಯಡಿ ಅಕ್ರಮ ಬಂಧನಕ್ಕೊಳಗಾಗಿರುವವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದಿವಾಸಿ ಹಕ್ಕುಗಳ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರನ್ನು ಬಂಧಿಸಿದ ತರುವಾಯ ಪತ್ರ ಚಳವಳಿ ಬಿರುಸುಗೊಂಡಿದೆ. ರೈತ ಚಳವಳಿಯಲ್ಲಿ ತೊಡಗಿರುವವರನ್ನೂ ಇದೇ ಕಾಯಿದೆಯಡಿ ಬಂಧಿಸುವ ಆತಂಕ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದಿರುವ ಪತ್ರಗಳಲ್ಲಿ ʼಮುಗ್ಧರನ್ನು, ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರನ್ನು ಬಂಧಿಸುವುದನ್ನು ನಿಲ್ಲಿಸಿ‌ʼ, ʼರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿʼ, ʼಮುಸ್ಲಿಮರನ್ನು ಶೋಷಿತ ಸಮುದಾಯಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಿʼ, ʼವಿವಿಧತೆಯನ್ನು ಗೌರವಿಸಿʼ, ʼಯುಎಪಿಎ ಅಡಿ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಿʼ, ʼಜನರನ್ನು ಶೋಷಿಸಲು ಪೊಲೀಸರ ಕೈಗೆ ಹೆಚ್ಚಿನ ಅಧಿಕಾರ ಕೊಡದಿರಿ” ಇತ್ಯಾದಿ ಮನವಿ ಮಾಡಲಾಗಿದೆ.

ಸಮಾಜದ ವಿವಿಧ ವರ್ಗದ ಜನ, ತಾವು ಬರೆದ ಪತ್ರಗಳನ್ನು ಹಿಡಿದಿರುವ ಛಾಯಾಚಿತ್ರಗಳು ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಪ್ರಕಟಗೊಂಡಿವೆ. #repealuapa #standwithstan #stopopppressivelaws #stoppolicebrutality #standwithfarmers ಎಂಬ ವಿವಿಧ ಹ್ಯಾಶ್‌ಟ್ಯಾಗ್‌ಗಳೊಡನೆ ಪತ್ರ ಚಳವಳಿ ಕುರಿತು ಪೋಸ್ಟ್‌ ಮಾಡಲಾಗಿದೆ.

1967ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಗೆ (ಯುಎಪಿಎ) 2019ರಲ್ಲಿ ತಿದ್ದುಪಡಿ ಮಾಡಲಾಯಿತು. ಅದೇ ವರ್ಷ ಪೌರತ್ವ ತಿದ್ದುಪಡಿ ಕಾಯಿದೆಯನ್ನೂ ಜಾರಿಗೆ ತರಲಾಯಿತು. ಸಿಎಎ- ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಾಗ ಕೇಂದ್ರ ಸರ್ಕಾರ ಹೋರಾಟಗಾರರನ್ನು ಹತ್ತಿಕ್ಕಲು ಇದೇ ಯುಎಪಿಎ ಕಾಯಿದೆಯನ್ನು ಬಳಸಿಕೊಂಡಿತು. ಯುವ ಹೋರಾಟಗಾರರಾದ ಉಮರ್‌ ಖಾಲಿದ್‌, ಗುಲ್ಫಿಶಾ ಫಾತಿಮಾ, ಜೊತೆಗೆ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪ ಹೊತ್ತ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ಆನಂದ್‌ ತೇಲ್ತುಂಬ್ಡೆ, ಪತ್ರಕರ್ತ ಆಸಿಫ್‌ ಸುಲ್ತಾನ್‌, ಪ್ರಾಧ್ಯಾಪಕ ಜಿ ಎನ್‌ ಸಾಯಿಬಾಬಾ, ಆರ್‌ಟಿಐ ಕಾರ್ಯಕರ್ತ ಅಖಿಲ್‌ ಗೊಗೋಯ್‌ ರೀತಿಯ ವ್ಯಕ್ತಿಗಳು ಹಾಗೂ ಪಂಜಾಬ್‌ನ ವಿವಿಧ ಸಂಘಟನೆಗಳ ಸದಸ್ಯರ ವಿರುದ್ಧವೂ ಇದೇ ಪ್ರಕರಣ ದಾಖಲಾಗಿದೆ.

ಯುಎಪಿಎ ತಿದ್ದುಪಡಿ ಕಾಯಿದೆಗೆ ಅಪಸ್ವರ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಮಸೂದೆ ಅಂಗೀಕಾರವಾಗುವಾಗಲೇ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮಸೂದೆಗೆ ಅಂಗೀಕಾರ ದೊರೆತ ಬೆನ್ನಲ್ಲೆ ದೆಹಲಿಯ ನಿವಾಸಿ ಸಾಜಲ್‌ ಅವಸ್ತಿ ಎಂಬುವವರು ಕಾಯಿದೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಗುರುತಿಸುವುದು ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ತಕರಾರು ಎತ್ತಿದ್ದರು. ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ‌ ಸರ್ಕಾರದಿಂದ ವಿವರಣೆ ಕೋರಿ ನೊಟೀಸ್‌ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Also Read
ʼನನಗೂ ಬೇಕು ವ್ಯಕ್ತಿ ಸ್ವಾತಂತ್ರ್ಯʼ: ಯಾರೆಲ್ಲರ ಬಿಡುಗಡೆಗಾಗಿ ಕೇಳಿ ಬರುತ್ತಿದೆ ಆಗ್ರಹ?

Related Stories

No stories found.
Kannada Bar & Bench
kannada.barandbench.com