ಎಎಬಿ ಚುನಾವಣೆಗೆ ಮೂರು ದಿನಾಂಕ ಒಳಗೊಂಡ ಪ್ರಸ್ತಾವನೆ ಸಲ್ಲಿಕೆ

ಈ ವರ್ಷದ ಡಿಸೆಂಬರ್‌ 21, 2025ರ ಜನವರಿ 19 ಮತ್ತು ಫೆಬ್ರವರಿ 2ರಂದು ಚುನಾವಣೆ ನಡೆಸಬಹುದು ಎಂದು ಉನ್ನತಾಧಿಕಾರ ಸಮಿತಿಗೆ ಎಎಬಿ ಆಡಳಿತ ಮಂಡಳಿಯು ಪ್ರಸ್ತಾವ ಸಲ್ಲಿಸಿದೆ.
Election to AAB
Election to AAB
Published on

ಬೆಂಗಳೂರು ವಕೀಲರ ಸಂಘದ ಚುನಾವಣೆ ನಡೆಸುವ ಸಂಬಂಧ ಮೂರು ದಿನಾಂಕಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಹಾಲಿ ಎಎಬಿ ಆಡಳಿತ ಮಂಡಳಿಯು ಕರ್ನಾಟಕ ಹೈಕೋರ್ಟ್‌ ನೇಮಿಸಿರುವ ಉನ್ನತಾಧಿಕಾರ ಸಮಿತಿಗೆ (ಎಚ್‌ಪಿಸಿ) ನವೆಂಬರ್‌ 11ರಂದು ಸಲ್ಲಿಸಿದೆ. ಎಎಬಿ ಚುನಾಯಿತ ಕಾರ್ಯಕಾರಿ ಸಮಿತಿಯ ಮೂರು ವರ್ಷಗಳ ಅವಧಿಯು ಡಿಸೆಂಬರ್‌ 19ಕ್ಕೆ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.

ಡಿಸೆಂಬರ್‌ 21, 2025ರ ಜನವರಿ 19 ಮತ್ತು ಫೆಬ್ರವರಿ 2ರಂದು ಚುನಾವಣೆ ನಡೆಸಬಹುದು ಎಂದು ಕಾರ್ಯಕಾರಿ ಸಮಿತಿಯು ಪ್ರಸ್ತಾವ ಸಲ್ಲಿಸಿದೆ. ಆದರೆ, ವಿದ್ಯುನ್ಮಾನ ಮತಯಂತ್ರಗಳ ಲಭ್ಯತೆ, ಸಹಕಾರ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿಯ ಲಭ್ಯತೆ ಆಧರಿಸಿ ಚುನಾವಣೆ ನಡೆಸಲಾಗುತ್ತದೆ ಎನ್ನಲಾಗಿದೆ.

ಕಳೆದ ಬಾರಿ 21 ಸಾವಿರ ವಕೀಲರು ಮತದಾನದ ಅವಕಾಶ ಪಡೆದಿದ್ದರು. ಪ್ರಸಕ್ತ ವರ್ಷ ಸುಮಾರು 25 ಸಾವಿರ ವಕೀಲರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಆಡಳಿತ ಮಂಡಳಿಯ ಅವಧಿ ಮುಗಿಯುವುದಕ್ಕೆ ಒಂದು ವರ್ಷ ಮುಂಚಿತವಾಗಿ ಸದಸ್ಯತ್ವ ಸ್ವೀಕರಿಸುವವರು ಮಾತ್ರ ಮತದಾನ ಮಾಡಲು ಅವಕಾಶ ಹೊಂದಿರುತ್ತಾರೆ ಎಂದು ಬೈಲಾದಲ್ಲಿ ಹೇಳಲಾಗಿದೆ. ಹೀಗಾಗಿ, 2023ರ ಡಿಸೆಂಬರ್‌ ನಂತರ ನೋಂದಣಿ ಮಾಡಿಸಿರುವ ವಕೀಲರಿಗೆ ಮತದಾನದ ಅವಕಾಶ ಕಲ್ಪಿಸಲಾಗಿಲ್ಲ.

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಸದಸ್ಯತ್ವ ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಬೆಂಗಳೂರು ವಕೀಲ ಸಂಘದ ಆಡಳಿತ ಮಂಡಳಿಗೆ ಹೈಕೋರ್ಟ್‌ ಘಟಕದಿಂದ ಏಳು ಮಂದಿ ಸದಸ್ಯರು ಆಯ್ಕೆಯಾಗಲಿದ್ದಾರೆ. ಸಿಟಿ ಸಿವಿಲ್‌ ಕೋರ್ಟ್‌ನ 12 ಸದಸ್ಯರು ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಮ್ಯಾಜಿಸ್ಟ್ರೇಟ್‌ ಮತ್ತು ಮೆಯೊ ಹಾಲ್‌ ಕೋರ್ಟ್‌ನಿಂದ ತಲಾ 5 ಸದಸ್ಯರು ಆಡಳಿತ ಮಂಡಳಿಗೆ ಪ್ರವೇಶ ಪಡೆಯಲಿದ್ದಾರೆ.

ವಕೀಲರ ಸಂಘದ ಬೈಲಾದ ಪ್ರಕಾರ ಒಂದು ಸ್ಥಾನಕ್ಕೆ ಒಬ್ಬರು ಮಾತ್ರ ಸ್ಪರ್ಧಿಸಬಹುದಾಗಿದ್ದು, ಸತತ ಎರಡು ಬಾರಿ ಆಯ್ಕೆಯಾಗಿರುವವರು ಮತ್ತೆ ಕಣಕ್ಕಿಳಿಯುವಂತಿಲ್ಲ. ಇನ್ನು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಘದ ಸದಸ್ಯರಾಗಿರಬೇಕು.

“ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಕಾಲಿಕವಾಗಿ ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು, ಉನ್ನತಾಧಿಕಾರ ಸಮಿತಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅಗತ್ಯವೆನಿಸಿದ ಎಲ್ಲಾ ಮಾಹಿತಿಗಳನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೀಗೆ ಮಾಡಲಾಗಿದೆ” ಎಂದು ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದ್ದಾರೆ.

“ಉನ್ನತಾಧಿಕಾರ ಸಮಿತಿಯ ನೇತೃತ್ವ ವಹಿಸಿದ್ದ ಹಿರಿಯ ವಕೀಲರಾದ ಸತ್ಯನಾರಾಯಣ ಗುಪ್ತಾ ಮತ್ತು ಎ ಜಿ ಶಿವಣ್ಣ ನಿಧನರಾಗಿದ್ದಾರೆ. ಇವರ ಸ್ಥಾನಕ್ಕೆ ಬೇರೆ ಇಬ್ಬರನ್ನು ಆಯ್ಕೆ ಮಾಡಲು ವಕೀಲರಾದ ಸದಾಶಿವರೆಡ್ಡಿ, ಕಲ್ಯಾಣ ಬಸವರಾಜು ಮತ್ತು ಗೋಪಾಲಸ್ವಾಮಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಅವರು ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಲಿದ್ದಾರೆ” ಎಂದು ರೆಡ್ಡಿ ತಿಳಿಸಿದ್ದಾರೆ.

ಉನ್ನತಾಧಿಕಾರ ಸಮಿತಿಯ ಭಾಗವಾಗಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ನಿನ್ನೆಯಷ್ಟೇ ಎಎಬಿ ಪತ್ರ ಕಳುಹಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಏನೆಲ್ಲಾ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಎಂಬುದು ತಿಳಿದಿಲ್ಲ. ಈಗಾಗಲೇ ನವೆಂಬರ್‌ ಅರ್ಧ ತಿಂಗಳು ಮುಗಿದಿದೆ. ಡಿಸೆಂಬರ್‌ನಲ್ಲಿ ಚುನಾವಣೆ ಅಸಾಧ್ಯ ಎನಿಸುತ್ತದೆ. ಎಲ್ಲವನ್ನೂ ಪರಿಶೀಲಿಸಲಾಗುವುದು” ಎಂದು ತಿಳಿಸಿದ್ದಾರೆ.

ಚುನಾವಣೆ ನಡೆಸುವ ಸಂಬಂಧ ಉನ್ನತಾಧಿಕಾರ ಸಮಿತಿಗೆ ಪ್ರಸ್ತಾವ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು “ಕಳೆದ ಬಾರಿ ಚುನಾವಣೆಯ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಉನ್ನತಾಧಿಕಾರ ಸಮಿತಿ ರಚನೆಯಾಗಿತ್ತು. ಈಗ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು ನಿಧನರಾಗಿದ್ದಾರೆ. ಕಳೆದ ಬಾರಿಯ ಚುನಾವಣೆ ಪ್ರಕ್ರಿಯೆಯೊಂದಿಗೆ ಉನ್ನತಾಧಿಕಾರ ಸಮಿತಿಯ ಕೆಲಸ ಮುಗಿದಿದೆ ಎಂದು ಭಾವಿಸಿದ್ದೇನೆ. ಎಎಬಿ ಬೈಲಾದ ಪ್ರಕಾರ ಚುನಾವಣೆ ನಡೆಯಬೇಕು. ಮುಂದಿನ ಬೆಳವಣಿಗೆಗಳನ್ನು ಕಾದು ನೋಡುತ್ತೇವೆ” ಎಂದಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷರಾದ ಎ ಪಿ ರಂಗನಾಥ್‌ ಮತ್ತು ಎಚ್‌ ಸಿ ಶಿವರಾಮು, ಎಎಬಿ ಹಾಲಿ ಕಾರ್ಯದರ್ಶಿ ಟಿ ಜಿ ರವಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಆರ್‌ ರಾಜಣ್ಣ, ನಂಜಪ್ಪ ಕಾಳೇಗೌಡ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

Also Read
ಬೆಂಗಳೂರು ವಕೀಲರ ಸಂಘದ ಚುನಾವಣೆ: ಹಿರಿಯ ವಕೀಲ ವಿವೇಕ್ ರೆಡ್ಡಿ ನೂತನ ಅಧ್ಯಕ್ಷ

ಹೈಕೋರ್ಟ್‌ನಿಂದ ಉನ್ನತಾಧಿಕಾರ ಸಮಿತಿ ರಚನೆ

ಕಳೆದ ಚುನಾವಣೆಯಲ್ಲಿ ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತ ನೇತೃತ್ವದ ಉನ್ನತಾಧಿಕಾರ ಸಮಿತಿಯು (ಎಚ್‌ಪಿಸಿ) ಚುನಾವಣೆ ನಡೆಸಲಿದ್ದು, ಒಟ್ಟು ಎಂಟು ಮಂದಿ ವಕೀಲ ಸದಸ್ಯರು ಎಚ್‌ಪಿಸಿಯಲ್ಲಿ ಇರಲಿದ್ದಾರೆ ಎಂದು ಹೈಕೋರ್ಟ್‌ ಹೇಳಿತ್ತು. ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದರು. ವಕೀಲರಾದ ಜಿ ಚಂದ್ರಶೇಖರಯ್ಯ, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಟಿ ಎನ್‌ ಶಿವ ರೆಡ್ಡಿ, ಎಸ್‌ ಎನ್‌ ಪ್ರಶಾಂತ್‌ ಚಂದ್ರ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದಿಂದ ವಕೀಲ ಎಂ ಆರ್‌ ವೇಣುಗೋಪಾಲ್‌, ಮಹಿಳಾ ವಿಭಾಗದಲ್ಲಿ ವಕೀಲೆ ಅನು ಚೆಂಗಪ್ಪ ಎಚ್‌ಪಿಸಿ ಸದಸ್ಯರಾಗಿದ್ದು, ಚುನಾವಣಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಿದ್ದರು.

Kannada Bar & Bench
kannada.barandbench.com