
ಕರ್ನಾಟಕ ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳ ವರ್ಗಾವಣೆಗೆ ಬೆಂಗಳೂರು ವಕೀಲರ ಸಂಘವು (ಎಎಬಿ) ತೀವ್ರ ವಿರೋಧ ದಾಖಲಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದು, ರಾಜ್ಯದ ವಕೀಲರ ಭಾವನೆಗಳನ್ನು ತಮಗೆ ವೈಯಕ್ತಿಕವಾಗಿ ತಿಳಿಸಲು ಸಮಯ ನೀಡುವಂತೆ ಮನವಿ ಮಾಡಲಾಗಿದೆ.
ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವ ಸುದ್ದಿಯ ಬಗ್ಗೆ ಎಎಬಿಯು ಕಳವಳಗೊಂಡಿದ್ದು, ಬೇರೆ ಹೈಕೋರ್ಟ್‌ಗೆ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನ್ಯಾಯಮೂರ್ತಿಗಳಿಂದ ಒಪ್ಪಿಗೆ ಕೋರಲಾಗಿದೆ ಎನ್ನಲಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಪದಾಧಿಕಾರಿಗಳು ಸಹಿ ಮಾಡಿರುವ ಪತ್ರದಲ್ಲಿ ವಿವರಿಸಲಾಗಿದೆ.
ಪ್ರಸ್ತಾಪಿತ ಹಲವು ನ್ಯಾಯಮೂರ್ತಿಗಳ ವರ್ಗಾವಣೆಗೆ ಕರ್ನಾಟಕ ಮತ್ತು ಬೆಂಗಳೂರು ವಕೀಲರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ದಾವೆದಾರರು, ವಕೀಲರಿಗೆ ತಕ್ಷಣ ಸ್ಪಂದಿಸುವ ಮತ್ತು ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡುವ ನ್ಯಾಯಮೂರ್ತಿಗಳನ್ನು ವರ್ಗಾವಣೆಯ ಪ್ರಸ್ತಾವದಲ್ಲಿ ಭಾಗವಾಗಿಸಲಾಗಿದೆ. ಇಂಥ ಒಳ್ಳೆಯ ಮತ್ತು ಕಠಿಣ ಪರಿಶ್ರಮಿ ನ್ಯಾಯಮೂರ್ತಿಗಳನ್ನು ವರ್ಗಾಯಿಸುವುದು ಅನ್ಯಾಯವಾಗಲಿದೆ ಎಂದು ಆಕ್ಷೇಪಿಸಲಾಗಿದೆ.
ಸಮಯ ಲೆಕ್ಕಿಸದೇ ಕೆಲಸ ಮಾಡುವು ಮೂಲಕ ತಕ್ಷಣ ಮತ್ತು ಸಮರ್ಥವಾಗಿ ನ್ಯಾಯದಾನ ಮಾಡುವ ನ್ಯಾಯಮೂರ್ತಿಗಳನ್ನು ಈ ರೀತಿಯಲ್ಲಿ ವರ್ಗಾಯಿಸುವುದು ಸರಿಯಲ್ಲ. ವಕೀಲರ ಸಮುದಾಯದ ಒಕ್ಕೊರಲ ಅಭಿಪ್ರಾಯದ ಭಾಗವಾಗಿ ಪ್ರಸ್ತಾವಿತ ವರ್ಗಾವಣೆಯನ್ನು ಬೆಂಗಳೂರು ವಕೀಲರ ಸಂಘದ ವಿರೋಧದ ಹಿನ್ನೆಲೆಯಲ್ಲಿ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಅಲ್ಲದೇ, ರಾಜ್ಯ ಮತ್ತು ಬೆಂಗಳೂರು ವಕೀಲರ ಭಾವನೆಗಳನ್ನು ತಮಗೆ ತಿಳಿಸಿಲು ಎಎಬಿ ಪದಾಧಿಕಾರಿಗಳು ಮತ್ತು ಕೆಲವು ಹಿರಿಯ ವಕೀಲರಿಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದೆಲ್ಲದರ ನಡುವೆ ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧಿಸಿ ಹಿರಿಯ ಮತ್ತು ಕಿರಿಯ ವಕೀಲರು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ. ಈಚೆಗೆ ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘವು ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧಿಸಿ ಸಿಜೆಐಗೆ ಪತ್ರ ಬರೆದಿದೆ.