ಆರ್ಯನ್ ಖಾನ್, ಅರ್ಬಾಜ್‌ಗೆ ಮಾದಕವಸ್ತು ಸರಬರಾಜು ಮಾಡಿದ್ದ ಅಚಿತ್: ಮುಂಬೈ ನ್ಯಾಯಾಲಯಕ್ಕೆ ಎನ್‌ಸಿಬಿ

ಅಚಿತ್‌ ಕುಮಾರ್‌ ಹಾಗೂ ಇತರ ಆರೋಪಿಗಳಾದ ಮನೀಶ್ ಗರ್ಹಿಯಾನ್, ಅವಿನ್ ಸಾಹು ಸಲ್ಲಿಸಿದ ಜಾಮೀನು ಅರ್ಜಿಗೆ ಎನ್‌ಸಿಬಿ ವಿರೋಧ ವ್ಯಕ್ತಪಡಿಸಿತು.
ಆರ್ಯನ್ ಖಾನ್, ಅರ್ಬಾಜ್‌ಗೆ ಮಾದಕವಸ್ತು ಸರಬರಾಜು ಮಾಡಿದ್ದ ಅಚಿತ್: ಮುಂಬೈ ನ್ಯಾಯಾಲಯಕ್ಕೆ ಎನ್‌ಸಿಬಿ
Aryan Khan and Mumbai Sessions Court

ವಿಲಾಸಿ ಹಡಗು ಮಾದಕವಸ್ತು ಪ್ರಕರಣದ ಪ್ರಮುಖ ಆರೋಪಿ ಬಾಲಿವುಡ್‌ ನಟ ಶಾರೂಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಹಾಗೂ ಮತ್ತೊಬ್ಬ ಆರೋಪಿ ಅರ್ಬಾಜ್‌ ಮರ್ಚೆಂಟ್‌ಗೆ ಸಹ ಆರೋಪಿಗಳಲ್ಲಿ ಒಬ್ಬನಾದ ಅಚಿತ್‌ ಕುಮಾರ್‌ ಮಾದಕ ವಸ್ತು ಪೂರೈಸುತ್ತಿದ್ದ ಎಂದು ಮಾದಕದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ಶುಕ್ರವಾರ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದೆ.

ಅಚಿತ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಎನ್‌ಸಿಬಿ ಈ ವಾದ ಮಂಡಿಸಿತು. ಅಕ್ರಮ ಬಂಧನ ಹಾಗೂ ಹುಸಿ ಪಂಚನಾಮೆ ಹಿನ್ನೆಲೆಯಲ್ಲಿ ತನ್ನನ್ನು ಬಿಡುಗಡೆ ಮಾಡುವಂತೆ ಆತ ಕೋರಿದ್ದು ತಮ್ಮ ಬಳಿ ಯಾವುದೇ ಅಕ್ರಮ ವಸ್ತು ಪತ್ತೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

Also Read
ಡ್ರಗ್ಸ್ ಪ್ರಕರಣ: ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಹಾಗೂ‌ ಮತ್ತಿತರರು ಅಕ್ಟೋಬರ್‌ 4ರವರೆಗೆ ಎನ್‌ಸಿಬಿ ವಶಕ್ಕೆ

ಯಾವುದೇ ಪುರಾವೆಗಳಿಲ್ಲದೆ 22 ವರ್ಷದ ಹುಡುಗನನ್ನು ʼಪೆಡ್ಲರ್ʼ (ಮಾದಕವಸ್ತು ಮಾರಾಟಗಾರ) ಎಂದು ಕರೆಯುವುದು ಅವನ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಅಚಿತ್‌ ಪರ ವಕೀಲರಾದ ಅಶ್ವಿನ್ ಥೂಲ್ ವಾದಿಸಿದರು.

ಥೂಲ್ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅದ್ವೈತ್ ಸೇತ್ನಾ, ತನಿಖೆಯಲ್ಲಿ ಅಚಿತ್‌ ವೈಯಕ್ತಿಕ ಬಳಕೆಗಿಂತಲೂ ಹೆಚ್ಚು ಪ್ರಮಾಣದ ನಿಷೇಧಿತ ಪದಾರ್ಥ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಖಾನ್‌ ಮತ್ತು ಮರ್ಚೆಂಟ್‌ಗೆ ಅದನ್ನು ಪೂರೈಸುವ ಹೊಣೆಯೂ ಅಚಿತ್‌ ಮೇಲಿತ್ತು ಎಂದರು.

ಎನ್‌ಸಿಬಿ ವಾದದ ಪ್ರಮುಖಾಂಶಗಳು

  • ವೈಯಕ್ತಿಕ ಬಳಕೆಗೂ ಅಧಿಕವಾದ ನಿಷೇಧಿತ ಪದಾರ್ಥ ಅಚಿತ್‌ ಬಳಿ ಇತ್ತು ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ಅದು ತನ್ನ ವೈಯಕ್ತಿಕ ಬಳಕೆಗೆ ಇರಿಸಿಕೊಂಡಿರುವುದು ಎನ್ನುವುದನ್ನು ಆತ ನಿರೂಪಿಸಬೇಕಾಗಿದ್ದು ಅದನ್ನು ಆತ ಮಾಡಿಲ್ಲ.

  • ಈ ನ್ಯಾಯಾಲಯ ಜಾಮೀನು ತಿರಸ್ಕರಿಸಿರುವ ಖಾನ್‌ ಮತ್ತು ಮರ್ಚೆಂಟ್‌ ಬಳಕೆಗೆಂದು 2.6 ಗ್ರಾಂ ಮಾದಕ ವಸ್ತುವನ್ನು ಅಚಿತ್ ಪೂರೈಕೆ ಮಾಡಿದ್ದಾನೆ. ಹಾಗಾಗಿ ಅಚಿತ್‌ನನ್ನು ʼಮಾದಕವಸ್ತು ಮಾರಾಟಗಾರʼ ಎಂದು ಹೆಸರಿಸುವುದರಲ್ಲಿ ಯಾವುದೇ ತೊಂದರೆ ಕಾಣುತ್ತಿಲ್ಲ.

  • ಖಾನ್‌ ಮತ್ತು ಅಚಿತ್‌ ಜೊತೆ ನಂಟು ಇತ್ತು ಎಂದು ದೃಢೀಕರಿಸುವ ಸಾಕ್ಷ್ಯಗಳಿವೆ.

  • ಸಾಕ್ಷ್ಯವಾಗಿ ಲಭ್ಯ ಇರುವ ಸಂಭಾಷಣೆಗಳು ಅಪರಾಧ ಸಾಬೀತುಪಡಿಸುತ್ತವೆಯೇ ಇಲ್ಲವೇ ಎಂಬುದು ವಿಚಾರಣೆಯ ವಿಷಯವಾಗಿದೆ, ಆದರೆ ಈ ಹಂತದಲ್ಲಿ ಇವು ಪೂರಕ ಸಾಕ್ಷ್ಯಗಳಾಗಿವೆ. ಈ ಸರಣಿ ಸಂಭಾಷಣೆಗಳನ್ನು ಸದ್ಯಕ್ಕೆ ಲಘುವಾಗಿ ಪರಿಗಣಿಸಲಾಗದು.

  • ಆರೋಪಿಗಳ ಸಂಭಾಷಣೆಯ ಸರಣಿಯನ್ನು ಲಘುವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

  • ಪಿತೂರಿಯೊಂದರಲ್ಲಿ ಬೇರೆ ಬೇರೆ ಜನರು ಕೂಡಿರುವಾಗ, ಪ್ರಾಥಮಿಕ ಹಂತದಲ್ಲಿ, ಪ್ರತಿ ಸಂಚುಗಾರನ ಪಾತ್ರ ಏನೆಂದು ಗುರುತಿಸಲು ತನಿಖಾ ಸಂಸ್ಥೆಗೆ ಸಾಧ್ಯವಾಗುತ್ತದೆಯೇ? ಯಾರ ಪಾತ್ರ ಹೆಚ್ಚು ಎಂದು ಈಗ ಹೇಳಲು ಸಾಧ್ಯವಿಲ್ಲ. ಅವರ ಕೃತ್ಯಗಳನ್ನು ಪ್ರತ್ಯೇಕಿಸುವುದು ಅವ್ಯವಸ್ಥೆ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ.

ಮನೀಶ್ ಗರ್ಹಿಯಾನ್ ಮತ್ತು ಅವಿನ್ ಸಾಹು ಸಲ್ಲಿಸಿದ ಜಾಮೀನು ಅರ್ಜಿಗಳಿಗೆ ಕೂಡ ನ್ಯಾಯವಾದಿ ಸೇಠ್ನಾ ವಿರೋಧ ವ್ಯಕ್ತಪಡಿಸಿದರು. “ಈ ಹಂತದಲ್ಲಿ ಆರೋಪಿಗಳ ಕೃತ್ಯಗಳು ಪರಸ್ಪರ ಸಂಬಂಧ ಹೊಂದಿದ್ದು ಸಂಚಿನಲ್ಲಿ ಭಾಗಿಯಾಗಿದ್ದಾರೆ” ಎಂದು ಅವರು ವಾದಿಸಿದರು.

Related Stories

No stories found.
Kannada Bar & Bench
kannada.barandbench.com