ಪುದುಚೆರಿ ಬಿಜೆಪಿ ಪ್ರಚಾರ: ಆಧಾರ್‌ ಮಾಹಿತಿ ಸೋರಿಕೆ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯ; ತನಿಖೆಗೆ ಹೈಕೋರ್ಟ್ ಆದೇಶ

“ಆಧಾರ್ ಕಾರ್ಡ್‌ಗಳಿಗೆ ಸಂಪರ್ಕ ಹೊಂದಿದ ಮೊಬೈಲ್ ಫೋನ್‌ಗಳಿಗೆ ಮಾತ್ರ ಎಸ್ಎಂಎಸ್ ಸಂದೇಶ ರವಾನೆಯಾಗಿದೆ ಎಂಬುದಾಗಿ ನಂಬಲರ್ಹ ಆರೋಪ ಇದೆ. ಯುಐಡಿಎಐ ಇದಕ್ಕೆ ಸಮರ್ಪಕ ಉತ್ತರ ನೀಡಬೇಕಿದೆ” ಎಂದು ನ್ಯಾಯಾಲಯ ತಿಳಿಸಿದೆ.
Aadhaar
Aadhaar
Published on

ಚುನಾವಣಾ ಪ್ರಚಾರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಎಸ್‌ಎಂಎಸ್‌ ಕಳಿಸಲು ಆಧಾರ್‌ ದತ್ತಾಂಶವನ್ನು ಬಿಜೆಪಿಯ ಪುದುಚೆರಿ ಘಟಕ ದುರುಪಯೋಗಪಡಿಸಿಕೊಂಡಿದೆ ಎಂಬ ವಿಶ್ವಸನೀಯ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ತನ್ನ ಬಳಿ ಇದ್ದ ಗೌಪ್ಯ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬ ಕುರಿತು ತನಿಖೆ ನಡೆಸುವಂತೆ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಎಐ) ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ.

ಪಕ್ಷದ ಕಾರ್ಯಕರ್ತರು ಮನೆ- ಮನೆ ಪ್ರಚಾರದ ಮೂಲಕ ಮೊಬೈಲ್‌ ಸಂಖ್ಯೆ ಸಂಗ್ರಹಿಸಿದ್ದರು ಎಂಬ ಬಿಜೆಪಿ ಸಮಜಾಯಿಷಿಗೆ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್‌ ರಾಮಮೂರ್ತಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ಆಧಾರ್‌ ಕಾರ್ಡ್‌ಗಳಿಗೆ ಸಂಪರ್ಕ ಹೊಂದಿದ ಮೊಬೈಲ್‌ ಫೋನ್‌ಗಳಿಗೆ ಮಾತ್ರ ಎಸ್‌ಎಂಎಸ್‌ ಸಂದೇಶ ರವಾನೆಯಾಗಿದೆ ಎಂಬ ನಂಬಲರ್ಹ ಆರೋಪ ಇದೆ. ಯುಐಡಿಎಐ ಇದಕ್ಕೆ ಸಮರ್ಪಕ ಉತ್ತರ ನೀಡಬೇಕಿದೆ. ನಾಗರಿಕರ ಕುರಿತ ಮಾಹಿತಿಯನ್ನು ಹೆಚ್ಚು ಹೊಣೆಗಾರಿಕೆಯಿಂದ ರಕ್ಷಿಸುವ ಇಂತಹ ಸಂಸ್ಥೆ ಏನಾದರೂ ಸೋರಿಕೆ ನಡೆದಿದ್ದರೆ ಅದರ ಕುರಿತು ತನಿಖೆ ನಡೆಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ದತ್ತಾಂಶವನ್ನು ಕಾರ್ಯಕರ್ತರಿಂದ ಪಡೆಯಲಾಗಿತ್ತು ಎಂದು ಆರನೇ ಪ್ರತಿವಾದಿಯಾದ ರಾಜಕೀಯ ಪಕ್ಷ ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ,” ಎಂದು ಆದೇಶದಲ್ಲಿ ತಿಳಿಸಲಾಗಿದೆ.

Also Read
ಕೋವಿಡ್ ಮಾರ್ಗಸೂಚಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗದು: ಬಿಜೆಪಿ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ

ಆಧಾರ್‌ ಕಾರ್ಡ್‌ ಜೊತೆ ಸಂಪರ್ಕ ಹೊಂದಿದ ಪುದುಚೆರಿ ಮತದಾರರ ದೂರವಾಣಿ ಸಂಖ್ಯೆಗಳನ್ನು ಬಿಜೆಪಿಯ ವಾಟ್ಸಾಪ್‌ ಗ್ರೂಪ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಅಂತಹ 952 ಗುಂಪುಗಳಿವೆ ಎಂದು ಪುದುಚೆರಿಯ ಯುವಜನ ಸಂಘಟನೆ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಅಧ್ಯಕ್ಷ ಎ ಆನಂದ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಈ ಆದೇಶ ಜಾರಿಗೊಳಿಸಿತು.

ನಾಗರಿಕರ ಗೌಪ್ಯತೆ ಉಲ್ಲಂಘನೆ ಗಂಭೀರ ವಿಚಾರವಾಗಿದೆ, ಈ ಮಹತ್ವದ ಸಂಗತಿ ರಾಜಕೀಯ ಆಟದಲ್ಲಿ ಅಥವಾ ಪ್ರಚಾರದ ಉನ್ಮಾದದಲ್ಲಿ ಕಳೆದುಹೋಗಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಬಿಜೆಪಿ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ವಿ ಕಾರ್ತಿಕ್‌ ಸಂಗ್ರಹಿಸಲಾದ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿರುವಂತಹದ್ದು, ಇಲ್ಲವೇ ಕಾರ್ಯಕರ್ತರು ಮನೆ- ಮನೆ ಪ್ರಚಾರದ ಮೂಲಕ ಸಂಗ್ರಹಿಸಿದ್ದು. ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ ಎಂಬುದು ಯುಐಡಿಎಐ ನಿಲುವು ಕೂಡ ಆಗಿದೆ ನ್ಯಾಯಾಲಯಕ್ಕೆ ಸಮಜಾಯಿಷಿ ನೀಡಲು ಯತ್ನಿಸಿದರು.

ಇನ್ನು ಪ್ರಚಾರದ ಕುರಿತಾಗಿ ಎಸ್‌ಎಂಎಸ್‌ ಮೂಲಕ ಕಳುಹಿಸಲಾಗಿರುವ ಸಂದೇಶಗಳ ಕುರಿತು ವಿವರಿಸಿದ ಅವರು, ಅಂತಹ ಯಾವುದೇ ಅನುಮತಿ ಪಡೆದಿಲ್ಲ ಎನ್ನುವ ಚುನಾವಣಾ ಆಯೋಗದ ಹೇಳಿಕೆಯನ್ನು ಅಲ್ಲಗಳೆದರು. ಅಲ್ಲದೆ, ಎರಡು ಬಾರಿ ಎಸ್‌ಎಂಎಸ್‌ ಸಂದೇಶ ಕಳುಹಿಸಲು ಪುದುಚೆರಿಯ ಬಿಜೆಪಿಯು ಅನುಮತಿ ಪಡೆದಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಆರ್.ವೈಗೈ ಅವರು ಪುದುಚೆರಿಯ ಎಲ್ಲಾ ನಾಗರಿಕರ ಮನೆಗೆ ತೆರಳಿ ವೈಯಕ್ತಿಕ ವಿವವರ ಸಂಗ್ರಹಿಸಿರುವುದು ಅಸಂಭವನೀಯ ಎಂದರು. ಅಲ್ಲದೆ ಆಧಾರ್‌ ಜೊತೆ ಸಂಪರ್ಕ ಹೊಂದಿರುವ ದೂರವಾಣಿ ಸಂಖ್ಯೆಗಳಿಗೆ ಮಾತ್ರ ಎಸ್‌ಎಂಎಸ್‌ ಕಳುಹಿಸಿರುವುದನ್ನು ದಾಖಲೆಗಳ ಸಹಿತ ವಿವರಿಸಿದರು. ʼತಮ್ಮ ಮನೆ ಬಾಗಿಲಿಗೆ ಬಂದವರೆಲ್ಲರಿಗೂ ಯಾರೂ ಮೊಬೈಲ್‌ ಸಂಖ್ಯೆಯನ್ನು ನೀಡುವುದಿಲ್ಲ. ಹಾಗಾಗಲು ಸಾಧ್ಯವಿಲ್ಲʼ ಎಂಬುದು ಅವರ ವಾದವಾಗಿತ್ತು. ಅಲ್ಲದೆ, ಎರಡು ಮೊಬೈಲ್‌ ಸಂಖ್ಯೆ ಇರುವ ಪ್ರತ್ಯೇಕ ಆರು ಮಂದಿಯ ವಿಷಯದಲ್ಲಿ ಆಧಾರ್‌ ಜೊತೆ ಲಿಂಕ್‌ ಮಾಡಿರುವ ಮೊಬೈಲ್‌ ಸಂಖ್ಯೆಗೆ ಮಾತ್ರವೇ ಸಂದೇಶ ಬಂದಿರುವುದನ್ನೂ ಕೂಡ ಅವರು ನ್ಯಾಯಾಲಯದ ಮುಂದೆ ದಾಖಲೆಯಾಗಿ ಮಂಡಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಬಿಜೆಪಿ ಪುದುಚೆರಿ ಘಟಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆಯೇ ಎಂಬುದನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ಮತ್ತೊಂದೆಡೆ ಮುಖ್ಯವಾಗಿ ತಾನು ಮಾಹಿತಿ ಸೋರಿಕೆಯಾಗದಂತೆ ತಡೆಯಲು ವಿಫಲವಾಗಿದ್ದು ಹೇಗೆ ಎಂಬುದನ್ನು ವಿವರಿಸುವಂತೆ ನ್ಯಾಯಾಲಯ ಯುಐಡಿಎಐಯನ್ನು ಕೇಳಿದೆ. ಪ್ರತಿವಾದಿಗಳು ಉತ್ತರ ಸಲ್ಲಿಸಲು ಆರು ವಾರಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ.

Kannada Bar & Bench
kannada.barandbench.com