ಎಸ್ಐಆರ್‌ನಿಂದಾಗಿ ಬಿಹಾರದಲ್ಲಿ ಮತದಾರರ ಹಕ್ಕುಗಳ ನಿರಾಕರಣೆ: ಸುಪ್ರೀಂ ಕೋರ್ಟ್‌ ಮುಂದೆ ಎಡಿಆರ್ ವಾದ

ಆಧಾರ್ ಮತ್ತು ಪಡಿತರ ಚೀಟಿಗಳಂತೆಯೇ ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾದ 11 ದಾಖಲೆಗಳನ್ನು ಕೂಡ ನಕಲಿ ದಾಖಲೆ ಸೃಷ್ಟಿಸಿ ಪಡೆಯುವ ಸಾಧ್ಯತೆ ಇದೆ ಎಂದು ಸರ್ಕಾರೇತರ ಸಂಸ್ಥೆ ಎಡಿಆರ್‌ ಹೇಳಿದೆ.
Bihar SIR Plea
Bihar SIR Plea
Published on

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಹೊರಗಿಡುತ್ತಿರುವುದಕ್ಕೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಯಾವುದೇ ಸಮಂಜಸ ಕಾರಣ ನೀಡಿಲ್ಲ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದ ಅರ್ಜಿಗಳಿಗೆ ಇಸಿಐ ವಿರೋಧ ವ್ಯಕ್ತಪಡಿಸಿತ್ತು. ಆಧಾರ್ ಮತ್ತು ಪಡಿತರ ಚೀಟಿಗಳನ್ನು ಮೋಸದ ಅಥವಾ ಸುಳ್ಳು ದಾಖಲೆಗಳ ಮೂಲಕ ಪಡೆಯಬಹುದು ಎಂದು ಇಸಿಐ ಈ ಹಿಂದೆ ಹೇಳಿತ್ತು.

Also Read
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಜು.10ರಂದು ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್

ಈ ಸಂಬಂಧ ಎಡಿಆರ್‌ ಸಲ್ಲಿಸಿರುವ ಪ್ರತ್ಯುತ್ತರ ಅರ್ಜಿಯಲ್ಲಿ ಆಧಾರ್ ಮತ್ತು ಪಡಿತರ ಚೀಟಿಗಳಂತೆಯೇ ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾದ 11 ದಾಖಲೆಗಳನ್ನು ಕೂಡ ನಕಲಿ ದಾಖಲೆ ಸೃಷ್ಟಿಸಿ ಪಡೆಯುವ ಸಾಧ್ಯತೆ ಇದೆ ಎಂದು ಸರ್ಕಾರೇತರ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಶಾಶ್ವತ ನಿವಾಸ ಪ್ರಮಾಣಪತ್ರ, ಒಬಿಸಿ/ಎಸ್ಸಿ/ಎಸ್ಟಿ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸ್ವೀಕಾರಾರ್ಹ ದಾಖಲೆಯಾಗಿ ಆಧಾರ್‌ ಬಳಕೆಯಲ್ಲಿರುವಾಗ ಎಸ್‌ಐಆರ್‌ ಆದೇಶದಡಿ ಆಯೋಗವು ಆಧಾರ್‌ಅನ್ನು ಸ್ವೀಕಾರಾರ್ಹ ದಾಖಲೆಯಾಗಿ ಪರಿಗಣಿಸದೆ ಇರುವುದು ಅಸಂಬದ್ಧವಾಗಿದೆ ಎಂದು ಅದು ಹೇಳಿದೆ.

ಗಣತಿ ನಮೂನೆಗಳ ಪರಿಶೀಲನೆ ಅಥವಾ ಪೂರಕ ದಾಖಲೆಗಳ ಪರಿಶೀಲನೆಗೆ ಎಸ್‌ಐಆರ್ ಯಾವುದೇ ನಿರ್ದಿಷ್ಟ ಕಾರ್ಯವಿಧಾನ ಅಳವಡಿಸಿಕೊಂಡಿಲ್ಲ ಎಂದು ಎಡಿಆರ್ ಆರೋಪಿಸಿದೆ.

Also Read
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂಗೆ ಎನ್‌ಜಿಒ ಅರ್ಜಿ

ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಇಆರ್‌ಒ) ವಿಸ್ತಾರವೂ ಮತ್ತು ಅನಿಯಂತ್ರಿತವೂ ಆದ ವಿವೇಚನಾಧಿಕಾರ ನೀಡಲಾಗಿದ್ದು ಇದರಿಂದ ಬಿಹಾರದಲ್ಲಿ ಗಣನೀಯ ಪ್ರಮಾಣದ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕಿನಿಂದ ವಂಚಿತವಾಗಬಹುದು. 3 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳ ಗಣತಿ ನಮೂನೆಗಳನ್ನು ನಿರ್ವಹಿಸುವ ಕಾರ್ಯವನ್ನು ಒಬ್ಬ ಇಆರ್‌ಒಗೆ ವಹಿಸಲಾಗಿದೆ. ಮತದಾರರ ಅನುಪಸ್ಥಿತಿಯಲ್ಲಿ ಗಣತಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ ಎಂದು ಸಂಸ್ಥೆ ದೂರಿದೆ.

ಅಲ್ಲದೆ, ಬಾಧಿತ ಮತದಾರರರು ತಮ್ಮ ಮೇಲ್ಮನವಿಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಿಲ್ಲ. ಬಿಹಾರಕ್ಕೆ ಸಂಬಂಧಿಸಿದಂತೆ, ಎಸ್ಐಆರ್ ಅನ್ನು ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿರುವುದು ಮತದಾರರು ಮತದಾನದಿಂದ ಹಿಂದೆ ಸರಿಯುವ ದೊಡ್ಡ ಅಪಾಯಕ್ಕೆ ಈಡು ಮಾಡುವ ಸಾಧ್ಯತೆಗಳಿವೆ ಎಂದು ಅದು ಹೇಳಿದೆ.

Kannada Bar & Bench
kannada.barandbench.com