ದೇವದಾಸ್‌ ಸಹಿತ ಮೂವರು ಎಎಜಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಸರ್ಕಾರ; ಹೊಸಬರ ನೇಮಕ

ಸಿ ಎಸ್‌ ಪ್ರದೀಪ್‌, ಸಂತೋಷ್‌ ಎಸ್ ಗೋಗಿ ಮತ್ತು ದೇವದಾಸ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಸ್ಥಾನಗಳಿಗೆ ಕ್ರಮವಾಗಿ ಪ್ರದೀಪ್‌ ಗಾವಂಕರ್‌, ತಾರಾನಾಥ್‌ ಪೂಜಾರಿ ಮತ್ತು ಕೆ ಶ್ರೀಕಾಂತ್‌ ಪಾಟೀಲ್‌ ಅವರನ್ನು ನೇಮಿಸಲಾಗಿದೆ.
ದೇವದಾಸ್‌ ಸಹಿತ ಮೂವರು ಎಎಜಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಸರ್ಕಾರ; ಹೊಸಬರ ನೇಮಕ
Published on

“ಕೆಲವು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು (ಎಎಜಿ), ಅಡ್ವೊಕೇಟ್‌ ಜನರಲ್‌ (ಎಜಿ) ಕಚೇರಿಯನ್ನು ನಿಯಂತ್ರಿಸುತ್ತಿದ್ದು, ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದ ಎನ್‌ ದೇವದಾಸ್‌ ಸೇರಿದಂತೆ ಮೂವರು ಹೆಚ್ಚುವರಿ ಅಡ್ವೊಕೇಟ್‌ಗಳನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿದೆ.

ಎಎಜಿಗಳಾದ ಸಿ ಎಸ್‌ ಪ್ರದೀಪ್‌, ಸಂತೋಷ್‌ ಎಸ್.‌ ಗೋಗಿ ಮತ್ತು ಎನ್‌ ದೇವದಾಸ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಸ್ಥಾನಗಳಿಗೆ ಕ್ರಮವಾಗಿ ಪ್ರದೀಪ್‌ ಗಾವಂಕರ್‌, ತಾರಾನಾಥ್‌ ಪೂಜಾರಿ ಮತ್ತು ಕೆ ಶ್ರೀಕಾಂತ್‌ ಪಾಟೀಲ್‌ ಅವರನ್ನು ಹೊಸದಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5(6)ರ ಅನ್ವಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಒಂದು ತಿಂಗಳ ನೋಟಿಸ್‌ ಬದಲು ಅವರಿಗೆ ಒಂದು ತಿಂಗಳ ರಿಟೇನರ್‌ ಶುಲ್ಕ ಪಾವತಿಸಲು ನಿರ್ದೇಶಿಸಲಾಗಿದೆ.

2025ರ ಜೂನ್‌ 26ರಂದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ ಎಸ್‌ ಪೊನ್ನಣ್ಣ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಭಾಗಿಯಾಗಿದ್ದ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯ ಸರ್ಕಾರಕ್ಕೆ ಸಣ್ಣಪುಟ್ಟ ಪ್ರಕರಣಗಳಲ್ಲಿಯೂ ಮುಜುಗರವಾಗುವಂಥ ಬೆಳವಣಿಗೆ ಘಟಿಸಿವೆ. ಇದಕ್ಕೆ ಆಸ್ಪದ ನೀಡಬಾರದು. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ವಿಫಲರಾದರೆ ಬದಲಾವಣೆ ಅನಿವಾರ್ಯವಾಗಲಿದೆ” ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಎಚ್ಚರಿಸಿದ್ದರು.

“ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದಿಸಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ಎಎಜಿಗಳ ಕರ್ತವ್ಯ. ಕರ್ನಾಟಕ ರಾಜ್ಯ ಕಾಯಿದೆಗಳ ಅನುಷ್ಠಾನ, ಉದ್ದೇಶದ ನಿರ್ವಹಣೆ ಎಎಜಿಗಳ ಕೈಯಲ್ಲಿದೆ. ಹಿರಿಯ ವಕೀಲರಾಗಿರುವ ಎಎಜಿಗಳಿಗೆ ಸರ್ಕಾರದ ಆದ್ಯತೆ ಕಾಪಾಡುವ ಜವಾಬ್ದಾರಿ ಇದೆ. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸಲಾಗದು” ಎಂದಿದ್ದರು.

ಇದರ ಬೆನ್ನಿಗೇ, 2025ರ ಜೂನ್‌ 30ರಂದು ಎನ್‌ ದೇವದಾಸ್‌ ಅವರು “ಕೆಲವು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು (ಎಎಜಿ), ಅಡ್ವೊಕೇಟ್‌ ಜನರಲ್‌ (ಎಜಿ) ಕಚೇರಿಯನ್ನು ನಿಯಂತ್ರಿಸುತ್ತಿದ್ದು, ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

Also Read
ವಿರೋಧಿ ರಾಜಕೀಯ ನಾಯಕರೆಡೆಗಿನ ಕೆಲ ಎಎಜಿಗಳ ನಿಷ್ಠೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನೆಡೆ: ಎಎಜಿ ದೇವದಾಸ್‌ ಆರೋಪ

“ಎಎಜಿಯೊಬ್ಬರ ಚೇಂಬರ್‌ನಲ್ಲಿ ಬಿಜೆಪಿ ಪರ ಪ್ರಮುಖ ವಕೀಲರು ತಮ್ಮ ಪ್ರಕರಣಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ 2-3 ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಮತ್ತು ಸರ್ಕಾರದ ವಕೀಲರು ಸಲಹೆ ಸೂಚನೆ ನೀಡುತ್ತಾರೆ. ಇದರಿಂದ ಹಲವು ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ತೀರ್ಪು ಬಂದಿದೆ” ಎಂದು ದೇವದಾಸ್‌ ಆರೋಪಿಸಿದ್ದರು.

“ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವು ಈ ಇಬ್ಬರು - ಮೂವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಹಾಗೂ ಅವರ ವಕೀಲರ ಗುಂಪುಗಳ ನಡುವೆ ಇದೆ. ಇವರು ವ್ಯವಸ್ಥಿತವಾಗಿ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ದೇವದಾಸ್‌ ನೇರ ಆರೋಪ ಮಾಡಿದ್ದರು.

Also Read
ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಲು ವಿಫಲರಾದರೆ ಬದಲಾವಣೆ ಅನಿವಾರ್ಯ: ಎಎಜಿಗಳಿಗೆ ಸಿಎಂ ಎಚ್ಚರಿಕೆ

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ 2023ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಐವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ (ಎಎಜಿ) ನೇಮಕಾತಿ ಸೇರಿದಂತೆ ಒಟ್ಟು 20 ಮಂದಿ ಎಎಜಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ನೇಮಿಸಿತ್ತು.

ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠಕ್ಕೆ ಹತ್ತು, ಕಲಬುರ್ಗಿ ಪೀಠಕ್ಕೆ ಮೂವರು ಮತ್ತು ಧಾರವಾಡ ಪೀಠಕ್ಕೆ ಇಬ್ಬರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳನ್ನು ನೇಮಕ ಮಾಡಲಾಗಿತ್ತು. ಒಟ್ಟು 20 ಎಎಜಿಗಳ ಪೈಕಿ ಇಬ್ಬರು ಮಹಿಳಾ ವಕೀಲರು ಎಎಜಿಯಾಗಿ ನೇಮಕಗೊಂಡಿದ್ದರು.

Attachment
PDF
AAGs Appointmet
Preview
Kannada Bar & Bench
kannada.barandbench.com