ಉ. ಪ್ರದೇಶ ಸರ್ಕಾರದಿಂದ 105 ಶಾಲೆಗಳ ಮುಚ್ಚಲು ನಿರ್ಧಾರ: ಸುಪ್ರೀಂನಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಆಕ್ಷೇಪ

ಶಾಸಕಾಂಗದ ಅನುಮತಿಯಿಲ್ಲದೆ ಶಾಲೆಗಳನ್ನು ಮುಚ್ಚಿ ವಿಲೀನಗೊಳಿಸುವ ನಿರ್ಧಾರ ಮಕ್ಕಳ ನೆರೆಹೊರೆಯ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಿಂಗ್ ವಾದಿಸಿದ್ದಾರೆ.
Sanjay Singh and Supreme Court
Sanjay Singh and Supreme Court Facebook
Published on

ವಿದ್ಯಾರ್ಥಿಗಳ ದಾಖಲಾತಿ ಕೆಳಮಟ್ಟದಲ್ಲಿ ಇರುವ ಶಾಲೆಗಳನ್ನು ವಿಲೀನಗೊಳಿಸುವ ನೀತಿಯ ಭಾಗವಾಗಿ, 105 ಪ್ರಾಥಮಿಕ ಶಾಲೆಗಳನ್ನು ಮೂರು ಕಿಲೋಮೀಟರ್ ವ್ಯಾಪ್ತಿಯೊಳಗಿನ ಹತ್ತಿರದ ಶಾಲೆಗಳೊಂದಿಗೆ ಮುಚ್ಚಿ ವಿಲೀನಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಂಗ್ ಈ ಕ್ರಮವನ್ನು ಸ್ವೇಚ್ಛೆಯಿಂದ ಕೂಡಿದ, ಅಸಾಂವಿಧಾನಿಕವಾದ ಹಾಗೂ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೆ (ಆರ್‌ಟಿಇ) ವಿರುದ್ಧ ಎಂದಿದ್ದಾರೆ.

Also Read
ಅಬಕಾರಿ ನೀತಿ ಪ್ರಕರಣ: ಎಎಪಿ ನಾಯಕ ಸಿಸೋಡಿಯಾ ಮಾ. 17ರವರೆಗೆ ಇ ಡಿ ವಶಕ್ಕೆ

ವಕೀಲ ಶ್ರೀರಾಮ್ ಪರಕ್ಕಾಟ್‌ ಅವ ಮೂಲಕ ಸಿಂಗ್‌ ಅವರು ಸಲ್ಲಿಸಿರುವ ಅರ್ಜಿ ಜೂನ್ 16ರ ಸರ್ಕಾರಿ ಆದೇಶ ಮತ್ತು ವಿದ್ಯಾರ್ಥಿಗಳ ದಾಖಲಾತಿ ಕೆಳಮಟ್ಟದಲ್ಲಿ ಇರುವ ಗುರುತಿಸಿ ಜೂನ್ 24 ರಂದು ನೀಡಲಾಗಿದ್ದ ಪಟ್ಟಿಯನ್ನು ಪ್ರಶ್ನಿಸಿದೆ.

ಅರ್ಜಿಯ ಪ್ರಕಾರ, ಕ್ರಿಯಾತ್ಮಕ ನೆರೆಹೊರೆಯ ಶಾಲೆಗಳನ್ನು ಶಾಸನಬದ್ಧ ಆಧಾರವಿಲ್ಲದೆ ವಿಲೀನಗೊಳಿಸಲಾಗಿದೆ, ಇದು ಸಂವಿಧಾನದ 21A ವಿಧಿಯನ್ನು (6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು) ಉಲ್ಲಂಘಿಸಲಿದ್ದು ಅದರಲ್ಲಿಯೂ ಸಮಾಜದಂಚಿನ ಸಮುದಾಯಗಳ ಮಕ್ಕಳು ಅನಗತ್ಯವಾಗಿ ದೂರ ಪ್ರಯಾಣಿಸುವಂತೆ ಒತ್ತಾಯಿಸುತ್ತದೆ ಎಂದಿದೆ.  

ಶಾಸಕಾಂಗದ ಅನುಮತಿಯಿಲ್ಲದೆ ಮತ್ತು ಆರ್‌ಟಿಇ ಕಾಯಿದೆಯ ಸೆಕ್ಷನ್ 21ರ ಅಡಿಯಲ್ಲಿ ಶಾಲಾ ನಿರ್ವಹಣಾ ಸಮಿತಿಗಳೊಂದಿಗೆ ಸಮಾಲೋಚನೆ ನಡೆಸದೆ ಶಾಲೆಗಳನ್ನು ಮುಚ್ಚಿ ವಿಲೀನಗೊಳಿಸುವ ನಿರ್ಧಾರ ಮಕ್ಕಳ ನೆರೆಹೊರೆಯ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಂಜಯ್ ಸಿಂಗ್ ವಾದಿಸಿದ್ದಾರೆ.

Also Read
ಎಎಪಿ ಮಾನ್ಯತೆ ರದ್ದತಿ ಕೋರಿಕೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್; ಸುಪ್ರೀಂ ಸಂಪರ್ಕಿಸಲು ಅನುಮತಿ

ಸಾರ್ವಜನಿಕವಾಗಿ ನೋಟಿಸ್‌ ಹೊರಡಿಸದೆ, ಭಾಗೀದಾರರ ಅಹವಾಲು ಆಲಿಸದೆ ಏಕರೂಪದ ಮಾನದಂಡಗಳಿಲ್ಲದೆ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದ್ದು ಪರಿಣಾಮ ಬೇರೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದಿದ್ದು ಮೂಲ ಸೌಕರ್ಯದ ಕೊರತೆ ಉಂಟಾಗಿದ್ದು ಮಕ್ಕಳು ಶಾಲೆ ತೊರೆಯುವ ಸ್ಥಿತಿ ಮೂಡಿದೆ ಎಂದು ಅರ್ಜಿ ದೂರಿದೆ.

ಸಿಂಗ್ ಅವರ ಪ್ರಕಾರ, ಸರ್ಕಾರ ಹೊರಡಿಸಿರುವ ಆದೇಶ ಹಲವಾರು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವುದರ ಜೊತೆಗೆ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (ಯುಎನ್‌ಸಿಆರ್‌ಸಿ) ಅಡಿಯಲ್ಲಿ ಭಾರತದ ನಿರ್ವಹಿಸಬೇಕಾದ ಹೊಣೆಗಾರಿಕೆಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Kannada Bar & Bench
kannada.barandbench.com