ಅಪ್ರಾಪ್ತ ಮಗಳನ್ನು ಪ್ರೀತಿಸಿದ್ದಕ್ಕೆ ಪೋಕ್ಸೊ ಕಾಯಿದೆಯಡಿ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುವ ಮೂಲಕ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 70 ವರ್ಷದ ವೃದ್ಧನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಜೋಸೆಫ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಪ್ರಕರಣದಲ್ಲಿ ಆರೋಪ ಗಂಭೀರ ಸ್ವರೂಪದಿಂದ ಕೂಡಿದೆ. 2024ರ ಫೆಬ್ರವರಿ 18ರಂದು ಘಟನೆ ನಡೆದಿದೆ. ಮೃತನ ತಾಯಿ ಫೆಬ್ರವರಿ 27ರಂದು ದೂರು ದಾಖಲಿಸಿದ್ದಾರೆ. ಮಾರ್ಚ್ 7ರಂದು ಅರ್ಜಿದಾರ ಬಂಧನಕ್ಕೆ ಒಳಗಾಗಿದ್ದಾರೆ. ಹೆಚ್ಚಿನ ತನಿಖೆಗೆ ಆತನ ಬಂಧನ ಅಗತ್ಯವಿರುವುದಾಗಿ ಪ್ರಾಸಿಕ್ಯೂಷನ್ ಹೇಳಿಲ್ಲ. ಅರ್ಜಿದಾರನಿಗೆ 70 ವರ್ಷ. ಆತನಿಗೆ ಕಿಮಿನಲ್ ಹಿನ್ನೆಲೆ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರ 2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಧಾರ ತಿರುಚಲು ಯತ್ನಿಸಬಾರದು. ಅಗತ್ಯ ಬಿದ್ದಾಗ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ಜಾಮೀನು ಮಂಜೂರಾತಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಮೃತಪಟ್ಟಿರುವ ದೂರುದಾರೆ ಮಹಿಳೆಯ ಪುತ್ರ ಹಾಗೂ ಅರ್ಜಿದಾರನ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮೃತನು 2024ರ ಫೆಬ್ರವರಿ 18ರಂದು ಅರ್ಜಿದಾರರ ಮನೆಗೆ ಬಳಿ ಹೋಗಿದ್ದ. ಆತನನ್ನು ಅರ್ಜಿದಾರ ಮನೆಯೊಳಗೆ ಕರೆದುಕೊಂಡಿದ್ದ ಕೂಡಿಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಅಪ್ರಾಪ್ತೆಯಾದ ಮಗಳನ್ನು ಪ್ರೀತಿಸುತ್ತಿರುವುದಕ್ಕೆ ಪೋಕ್ಸೊ ಕಾಯಿದೆ ಅಡಿ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿ ಮೃತನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಆರೋಪ ಅರ್ಜಿದಾರನ ಮೇಲಿದೆ.
ಮೃತನ ತಾಯಿ ನೀಡಿದ್ದ ದೂರು ಆಧರಿಸಿ ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆ, ವ್ಯಕ್ತಿಯನ್ನು ಅಕ್ರಮವಾಗಿ ಕೂಡಿಹಾಕಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಅರ್ಜಿದಾರರನ್ನು ಎನ್ ಆರ್ ಪುರ ಪೊಲೀಸರು ಬಂಧಿಸಿದ್ದರು. ಜಾಮೀನು ನೀಡಲು ಎನ್ ಆರ್ ಪುರದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನಿರಾಕರಿಸಿದ್ದರಿಂದ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು.