
ನ್ಯೂಸ್ ಲಾಂಡ್ರಿ ಸುದ್ದಿ ಜಾಲತಾಣದ ಪತ್ರಕರ್ತೆಯರನ್ನು ವೇಶ್ಯರು ಎಂದು ನಿಂದಿಸಿರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್ ಮಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ದೆಹಲಿ ಹೈಕೋರ್ಟ್ ಬುಧವಾರ ತೀವ್ರವಾಗಿ ಖಂಡಿಸಿತು.
ಅಯ್ಯರ್- ಮಿತ್ರ ಪರ ವಕೀಲ ಜೈ ಅನಂತ್ ದೇಹದ್ರಾಯ್ ಅವರು ತಮ್ಮ ಕಕ್ಷಿದಾರನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ಕೆಂಡಾಮಂಡಲರಾದರು. ಜೊತೆಗೆ ಅಯ್ಯರ್- ಮಿತ್ರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸುವುದಾಗಿ ನ್ಯಾಯಾಲಯ ಎಚ್ಚರಿಕೆಯನ್ನೂ ನೀಡಿತು.
ಅಯ್ಯರ್- ಮಿತ್ರ ಬಳಸಿದ ಭಾಷೆ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ ಎಂದು ನ್ಯಾಯಾಲಯ ನುಡಿಯಿತು. ದೇಹದ್ರಾಯ್ ಅವರು ಪಟ್ಟು ಬಿಡದೆ ಇದ್ದಾಗ ಪೀಠ ʼಅತಿ ಬುದ್ಧಿವಂತನಾಗಲು ಹೊರಡದಿರಿ! ನೀವು ನ್ಯಾಯಲಯದೆದುರು ಬುದ್ಧಿ ಪ್ರದರ್ಶನಕ್ಕೆ ಮುಂದಾಗಿದ್ದೀರಿ! ಪ್ರತಿ ಅವಲೋಕನಕ್ಕೂ ನೀವು ನ್ಯಾಯಾಲಯಕ್ಕೆ ಎಡತಾಕುವಂತಾಗುತ್ತದೆʼ ಎಂದು ಎಚ್ಚರಿಕೆ ನೀಡಿತು.
ಬಳಿಕ ನ್ಯಾಯಾಲಯದ ಕ್ಷಮೆ ಕೇಳಿದ ವಕೀಲ ದೇಹದ್ರಾಯ್ ಅವರು 5 ಗಂಟೆಗಳ ಒಳಗೆ ಹೇಳಿಕೆಗಳನ್ನು ಅಳಿಸಿಹಾಕುವುದಾಗಿ ತಿಳಿಸಿದರು.
ನ್ಯಾಯಾಲಯವು ತನ್ನ ಆದೇಶದಲ್ಲಿ, "ಪ್ರತಿವಾದಿಯು ಬಳಸಿರುವ ಭಾಷೆಯನ್ನು ನೋಡಿದಾಗ ಅದು ಯಾವುದೇ ನಾಗರಿಕ ಸಮಾಜದಲ್ಲಿ ಅನುಮತಿಸುವಂಥದ್ದಲ್ಲ ಎನ್ನುವ ಪ್ರಾಥಮಿಕ ಅಭಿಪ್ರಾಯ ನ್ಯಾಯಾಲಯದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ಮಾಡಲು ಮುಂದಾದಾಗ, ಪ್ರತಿವಾದಿ ಪರ ವಕೀಲರಾದ ಜೈ ಅನಂತ್ ದೇಹದ್ರಾಯ್ ಅವರು ತಾವು ಈ ಕುರಿತು ಕೆಲವೊಂದು ಅಂಶಗಳನ್ನು ಪ್ರಸ್ತಾಪಿಸಲು ಬಯಸುವುದಾಗಿ ತಿಳಿಸಿದರು. ಇದೇ ವೇಳೆ, ಅವರು ಅಂತಹ ಪದ ಬಳಕೆಯನ್ನು ತಡೆಯಬಹುದಾಗಿತ್ತು ಎಂದರು. ಅಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಹ ನಿಂದನಾತ್ಮಕ ಪೋಸ್ಟ್‌ಗಳನ್ನು ಇನ್ನು ಐದು ಗಂಟೆಯೊಳಗೆ ತೆಗೆದು ಹಾಕುವುದಾಗಿ ಹೇಳಿದ್ದರು. ಇದನ್ನು ಅಧಿಕೃತವಾಗಿ ದಾಖಲಿಸಿಕೊಳ್ಳಲಾಗಿದ್ದು ಅವರು ಅದರಂತೆಯೇ ಮುಂದುವರಿಯಬೇಕು," ಎಂದಿದೆ.
ವಾದಿಗಳು ಎಲ್ಲ ರೀತಿಯಲ್ಲೂ ಪತ್ರಕರ್ತರು. ಇವು ಟೀಕೆಯನ್ನೂ ಮೀರಿದ ಮಾನಹಾನಿಕರ ಅಂಶಗಳಾಗಿವೆ ಇವರೆಲ್ಲರೂ ದುಡಿಯುವ ಮಹಿಳೆಯರು ಎಂದು ಪತ್ರಕರ್ತೆಯರ ಪರವಾಗಿ ವಕೀಲೆ ಬನಿ ದೀಕ್ಷಿತ್ ವಾದ ಮಂಡಿಸಿದರು. ಮುಂದಿನ ವಾರ ಪ್ರಕರಣವನ್ನು ನ್ಯಾಯಾಲಯ ಆಲಿಸಲಿದೆ.
ತಮ್ಮನ್ನು ವೇಶ್ಯೆಯರು ಎಂದು ಕರೆದದ್ದಕ್ಕಾಗಿ ನ್ಯೂಸ್ ಲಾಂಡ್ರಿಯ ಕಾರ್ಯನಿರ್ವಾಹಕ ಸಂಪಾದಕಿ ಮನೀಷಾ ಪಾಂಡೆ ಹಾಗೂ ಎಂಟು ಪತ್ರಕರ್ತೆಯರು ₹2 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು.