ಸಾವರ್ಕರ್ ಮಾನನಷ್ಟ ಪ್ರಕರಣ: ಐತಿಹಾಸಿಕ ಪುರಾವೆ ಸಲ್ಲಿಸಲು ರಾಹುಲ್ ಗಾಂಧಿಗೆ ಅನುಮತಿಸಿದ ಪುಣೆ ನ್ಯಾಯಾಲಯ

ತಮ್ಮ ಹೇಳಿಕೆ ಐತಿಹಾಸಿಕ ಸಂಗತಿ ಆಧರಿಸಿದೆ ಎಂದು ರಾಹುಲ್‌ ಹೇಳಿಕೊಂಡಿರುವುದರಿಂದ, ವಿವರವಾದ ಸಾಕ್ಷ್ಯ ಒದಗಿಸಲು ಮತ್ತು ಸಾಕ್ಷಿಗಳ ಪಾಟಿ ಸವಾಲಿಗಾಗಿ ವಿಚಾರಣೆಯನ್ನು ಸಮನ್ಸ್ ವಿಚಾರಣೆಯಾಗಿ ಪರಿವರ್ತಿಸಬೇಕಾಗುತ್ತದೆ ಎಂದ ನ್ಯಾಯಾಲಯ.
Rahul Gandhi
Rahul GandhiFacebook
Published on

ಹಿಂದೂ ಮಹಾಸಭಾ ಮುಖಂಡ ವಿ ಡಿ ಸಾವರ್ಕರ್ ಅವರನ್ನು ಅವಹೇಳನ ಮಾಡಿದ ಪ್ರಕರಣದ ವಿಚಾರಣೆಯನ್ನು  ಸಂಕ್ಷಿಪ್ತವಾಗಿ ಆಲಿಸದೆ ಐತಿಹಾಸಿಕ ಸಾಕ್ಷ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಅದನ್ನು ವಿವರವಾದ ಸಮನ್ಸ್‌ ವಿಚಾರಣೆಯಾಗಿ ಪರಿವರ್ತಿಸಲು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆಯ ಜನಪ್ರತಿನಿಧಿಗಳ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ.

ತಮ್ಮ ಹೇಳಿಕೆಗಳು ಐತಿಹಾಸಿಕ ಸಂಗತಿಗಳನ್ನು ಆಧರಿಸಿವೆ ಎಂಬ ರಾಹುಲ್‌ ಅವರ ವಾದ ಗಮನಿಸಿದ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅಮೋಲ್ ಶ್ರೀರಾಮ್ ಶಿಂಧೆ ಅವರು ಆದ್ದರಿಂದ, ವಿವರವಾದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಪಾಟಿ ಸವಾಲಿಗೆ ಅವಕಾಶ ನೀಡಲು ಸಮನ್ಸ್ ವಿಚಾರಣೆಯಂತೆ ವಿಚಾರಣೆಯನ್ನು ನಡೆಸಬೇಕಾಗುತ್ತದೆ, ಸಂಕ್ಷಿಪ್ತ ವಿಚಾರಣೆಯಲ್ಲಿ ಇದಕ್ಕೆ ಅನುಮತಿ ನೀಡಲಾಗದು ಎಂದರು.

Also Read
ಸಾವರ್ಕರ್‌ ಕುರಿತ ಹೇಳಿಕೆ: ರಾಹುಲ್‌ ವಿರುದ್ಧದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

"ಪ್ರಸ್ತುತ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ (ರಾಹುಲ್‌ ಗಾಂಧಿ) ಸಂಕೀರ್ಣವಾದ ಸತ್ಯಗಳ ಜೊತೆಗೆ ಕಾನೂನಿನ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಆರೋಪಿ ಐತಿಹಾಸಿಕ ಸಂಗತಿಗಳ ಮೇಲೆ ನಿರ್ಧರಿಸಬೇಕಾದ ಕೆಲ ಸಂಗತಿಗಳ ಕುರಿತು ಪ್ರಸ್ತಾಪಿಸಿದ್ದಾರೆ. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ ಪ್ರಕರಣವನ್ನು ಸಾರಾಂಶ ವಿಚಾರಣೆ ನಡೆಸುವುದು ಅನಪೇಕ್ಷಿತ. ಏಕೆಂದರೆ ಸಾರಾಂಶ ವಿಚಾರಣೆಯಲ್ಲಿ ವಿವರವಾದ ಸಾಕ್ಷ್ಯ ಮತ್ತು ಪಾಟಿ ಸವಾಲು ನಡೆಯುವುದಿಲ್ಲ. ಆರೋಪಿ ಈ ಪ್ರಕರಣದಲ್ಲಿ ವಿವರವಾದ ಸಾಕ್ಷ್ಯ ಒದಗಿಸಬೇಕಿದ್ದು ದೂರುದಾರರ ಸಾಕ್ಷಿಗಳನ್ನು ಸಂಪೂರ್ಣವಾಗಿ ಪಾಟಿ ಸವಾಲಿಗೆ ಒಳಪಡಿಸಬೇಕಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ, ಆರೋಪಿತ ವ್ಯಕ್ತಿ ವಿವರವಾದ ಸಾಕ್ಷ್ಯ ಒದಗಿಸಬೇಕು ಮತ್ತು ದೂರುದಾರರ ಸಾಕ್ಷಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಧೀಶರು ಹೇಳಿದರು.

Also Read
ಸಾವರ್ಕರ್ ಪ್ರಕರಣ: ರಾಹುಲ್ ಮನವಿಗೆ ದೂರುದಾರರ ಆಕ್ಷೇಪ

ಲಂಡನ್‌ನಲ್ಲಿ ಮಾರ್ಚ್ 2023ರಲ್ಲಿ ರಾಹುಲ್‌ ಮಾಡಿದ ಭಾಷಣ ಆಧರಿಸಿ ಸಾವರ್ಕರ್ ಅವರ ವಂಶಸ್ಥ ಸಾತ್ಯಕಿ ಸಾವರ್ಕರ್‌ ದೂರು ನೀಡಿದ್ದರು. ವಿ ಡಿ ಸಾವರ್ಕರ್‌ ಮತ್ತವರ ಗುಂಪು ಮುಸ್ಲಿಮರನ್ನು ಥಳಿಸಿದ್ದಾಗಿಯೂ ಅದರಿಂದ ಅವರಿಗೆ ಸಂತೋಷವಾಗಿದ್ದಾಗಿಯೂ ಸಾವರ್ಕರ್‌ ಬರೆದುಕೊಂಡಿದ್ದಾರೆ ಎಂದು ರಾಹುಲ್‌ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಹೇಳಿಕೆಗಳನ್ನು ನಿರಾಕರಿಸಿದ್ದ ಸಾತ್ಯಕಿ ಅವರು ರಾಹುಲ್‌ ಅವರ ಟೀಕೆಗಳು ಮಾನಹಾನಿಕರ ಎಂದಿದ್ದರು.

ನಂತರ ರಾಹುಲ್‌ ಅವರು ವಿಚಾರಣೆಯನ್ನು ಸಮನ್ಸ್ ವಿಚಾರಣೆಯಾಗಿ ಪರಿವರ್ತಿಸಲು ನ್ಯಾಯಾಲಯದ ಮೊರೆ ಹೋಗಿದ್ದರು.

Kannada Bar & Bench
kannada.barandbench.com