ರಿಯಲ್ ಎಸ್ಟೇಟ್ ಉದ್ಯಮಿ ಸಹೋದರರ ನಡುವಿನ ವಾಣಿಜ್ಯ ಚಿಹ್ನೆ ಸಮರ: ಬಾಂಬೆ ಹೈಕೋರ್ಟ್‌ನಲ್ಲಿ ₹ 5,000 ಕೋಟಿ ದಾವೆ

ಅಭಿನಂದನ್ ಅವರ ಕಂಪನಿಗಳು 'ಲೋಧಾ' ಮತ್ತು 'ಲೋಧಾ ಗ್ರೂಪ್' ಬ್ರಾಂಡ್ ಹೆಸರುಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿವೆ ಎಂದು ಅಭಿಷೇಕ್ ಲೋಧಾ ಅವರ ಕಂಪನಿ ಮ್ಯಾಕ್ರೋಟೆಕ್ ಡೆವಲಪರ್ಸ್ ದೂರಿದೆ.
Bombay High Court
Bombay High Court
Published on

ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಅಭಿಷೇಕ್ ಲೋಧಾ ಅವರು ತಮ್ಮ ಕಿರಿಯ ಸಹೋದರ ಅಭಿನಂದನ್‌ ಲೋಧಾ ವಿರುದ್ಧ ವಾಣಿಜ್ಯ ಚಿಹ್ನೆ ಉಲ್ಲಂಘನೆಗೆ ಸಂಬಂಧಿಸಿದಂತೆ ₹ 5,000 ಕೋಟಿ ಮೊತ್ತದ ಮೊಕದ್ದಮೆ ಹೂಡುವುದರೊಂದಿಗೆ ಇಬ್ಬರ ನಡುವಿನ ಕಾನೂನು ಸಮರ ತಾರಕಕ್ಕೇರಿದೆ.

ಅಭಿಷೇಕ್‌ ಅವರ ಕಿರಿಯ ಸಹೋದರ ಅಭಿನಂದನ್‌ ಅವರ ಕಂಪೆನಿಗಳು 'ಲೋಧಾ' ಮತ್ತು 'ಲೋಧಾ ಗ್ರೂಪ್' ಎಂಬ ಬ್ರಾಂಡ್ ಹೆಸರುಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿವೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಾದ ಮೊಕದ್ದಮೆ ಹೇಳಿದೆ.

Also Read
ಐಕಿಯ ವಾಣಿಜ್ಯ ಚಿಹ್ನೆ ಪ್ರಕರಣ: ಐಕೀಗೆ ಮಧ್ಯಂತರ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

ಮೊಕದ್ದಮೆಯನ್ನು ಮಂಗಳವಾರ ನ್ಯಾಯಮೂರ್ತಿ ಮನೀಶ್ ಪಿತಾಳೆ ಅವರಿದ್ದ ಏಕಸದಸ್ಯ ಪೀಠದೆದರು ಪಟ್ಟಿ ಮಾಡಲಾಗಿತ್ತು. ಆದರೆ ಮ್ಯಾಕ್ರೋಟೆಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡೇರಿಯಸ್ ಖಂಬಟ್ಟಾ ಅವರು ಪ್ರಕರಣ ₹ 100 ಕೋಟಿ ಹಾನಿಯ ವ್ಯಾಪ್ತಿ ಮೀರುತ್ತದೆ ಎಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಯಿತು. ನಂತರ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಪೀಠ ಪ್ರಕರಣವನ್ನು ಜನವರಿ 27 ರಂದು ಆಲಿಸಲು ಸಮ್ಮತಿಸಿದೆ.

ಲೋಧಾ ಸಹೋದರರು 2015ರಲ್ಲಿ ಬೇರ್ಪಟ್ಟ ಬಳಿಕ ವಿವಾದ ತಲೆಎತ್ತಿದೆ. ಅಭಿನಂದನ್ ತರುವಾಯ ಹೌಸ್ ಆಫ್ ಅಭಿನಂದನ್ ಲೋಧಾ ಕಂಪೆನಿ ಸ್ಥಾಪಿಸಿದರು. ಅವರ ಹಿರಿಯ ಸಹೋದರ ಅಭಿಷೇಕ್ ಅವರು ಮ್ಯಾಕ್ರೋಟೆಕ್ ಅಡಿಯಲ್ಲಿ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರ ಮುಂದುವರೆಸಿದರು.

ಮಾರ್ಚ್ 2017 ರಲ್ಲಿ ಮಾಡಲಾದ ಕೌಟುಂಬಿಕ ಪಾಲು ಒಪ್ಪಂದದ ಪ್ರಕಾರ ಅಭಿಷೇಕ್ ಮ್ಯಾಕ್ರೋಟೆಕ್ ಅಡಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಿಯಂತ್ರಣ ಉಳಿಸಿಕೊಂಡರೆ ಅಭಿನಂದನ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸದ ಹೊಸ ವ್ಯವಹಾರದತ್ತ ಗಮನಹರಿಸಬೇಕಿತ್ತು.

ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಾಣಿಜ್ಯ ಚಿಹ್ನೆಗಳು ಸೇರಿದಂತೆ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು ಮ್ಯಾಕ್ರೋಟೆಕ್‌ನೊಂದಿಗೆ ಉಳಿಯುತ್ತವೆ ಎಂದು ಇದು ಷರತ್ತು ವಿಧಿಸಿತ್ತು.

ಈ ಒಪ್ಪಂದವು ಐದು ವರ್ಷಗಳ ಕಾಲ ಮುಂಬೈ ಮೆಟ್ರೋಪಾಲಿಟನ್ ಏರಿಯಾದಲ್ಲಿ ಮತ್ತು ಗ್ರೇಟರ್ ಲಂಡನ್‌ನಲ್ಲಿ ನಿಗದಿತ ಅವಧಿಗೆ ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅಭಿನಂದನ್ ಅವರನ್ನು ತಡೆಯುವ ಸ್ಪರ್ಧಾರಾಹಿತ್ಯತೆಯ ಷರತ್ತನ್ನು ಸಹ ಒಳಗೊಂಡಿದೆ. ಆದರೆ, ಅಭಿನಂದನ್ ಅವರು ಈ ಜವಾಬ್ದಾರಿಗಳನ್ನು ಪಾಲಿಸದ ಕಾರಣ, ಡಿಸೆಂಬರ್ 2023ರಲ್ಲಿ ಮತ್ತೊಂದು ಮಹತ್ವದ ಒಪ್ಪಂದ ಮಾಡಿಕೊಂಡರು.  

Also Read
'ವಾವ್! ಮೊಮೊ' ವಾಣಿಜ್ಯ ಚಿಹ್ನೆ ಬಳಸದಂತೆ ʼವಾವ್! ಡಿಲಿಷಸ್'ಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಈ ಹೊಸ ಒಪ್ಪಂದದ ಪ್ರಕಾರ 'ಲೋಧಾ ವೆಂಚರ್ಸ್' ಸೇರಿದಂತೆ 'ಲೋಧಾ'ವನ್ನು ಹೋಲುವ ಅಥವಾ ಅದನ್ನು ಮುನ್ನಡೆಸುವ ಹೆಸರುಗಳನ್ನು ಬಳಸದಂತೆ ನಿರ್ಬಂಧ ವಿಧಿಸಲಾಗಿತ್ತು.

ಈ ಒಪ್ಪಂದಗಳ ಹೊರತಾಗಿಯೂ ಅಭಿನಂದನ್‌ ಲೋಧಾ ಅವರು ಉದ್ದೇಶಪೂರ್ವಕವಾಗಿ ತಮ್ಮ ವಾಣಿಜ್ಯ ಚಿಹ್ನೆಯನ್ನು ಉಲ್ಲಂಘಿಸಿದ್ದಾರೆ ಎಂದು ಮ್ಯಾಕ್ರೊಟೆಕ್‌ ಆರೋಪಿಸಿದೆ.

Kannada Bar & Bench
kannada.barandbench.com