ಅಗ್ನಿಪಥ್ ಯೋಜನೆ: ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಮುಂದೆ ಪ್ರಶ್ನಿಸಲು ಕೇರಳ ಹೈಕೋರ್ಟ್ ಸೂಚನೆ

ಯೋಜನೆ ಪ್ರಶ್ನಿಸಿ 2021ರಲ್ಲಿ ಭಾರತೀಯ ಸೇನೆ ಸೇರ್ಪಡೆ ಉದ್ದೇಶದಿಂದ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿತು.
ಅಗ್ನಿಪಥ್ ಯೋಜನೆ: ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಮುಂದೆ ಪ್ರಶ್ನಿಸಲು ಕೇರಳ ಹೈಕೋರ್ಟ್ ಸೂಚನೆ
A1

ನಾಲ್ಕು ವರ್ಷಗಳ ಅವಧಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಕೇರಳ ಹೈಕೋರ್ಟ್ ಸೋಮವಾರ ನಿರಾಕರಿಸಿದೆ [ಅಬಿಮೊನ್ ವರ್ಗೀಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪ್ರಕರಣವನ್ನು ಆಲಿಸಲು ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ಹೆಚ್ಚು ಸೂಕ್ತ ನ್ಯಾಯಾಲಯ ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿ ಪಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

Also Read
ಅಗ್ನಿಪಥ್‌ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆ

ಪ್ರಕರಣವನ್ನು ರಿಜಿಸ್ಟ್ರಿ ದೋಷಪೂರಿತ ಎಂದು ಪಟ್ಟಿ ಮಾಡಿದೆ. ಹೀಗಾಗಿ ಅರ್ಜಿಯನ್ನು ಸ್ವೀಕರಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲು ಹೈಕೋರ್ಟ್ ನಿರಾಕರಿಸಿತು.

ಅರ್ಜಿದಾರರೆಲ್ಲರೂ ಎನ್‌ಸಿಸಿ ಕೆಡೆಟ್‌ಗಳಾಗಿದ್ದು 'ಸಿ' ಸರ್ಟಿಫಿಕೇಟ್‌ಅನ್ನು ಪಡೆದವರಾಗಿದ್ದರು. ಆ ಮೂಲಕ ಅವರು ಸಶಸ್ತ್ರ ಪಡೆಗಳ ನೇಮಕಾತಿಗೆ ಅರ್ಹತೆಯನ್ನು ಹೊಂದಿದ್ದು ಕೇಂದ್ರ ಪ್ರವೇಶ ಪರೀಕ್ಷೆಯಿಂದ ವಿನಾಯತಿ ಪಡೆದವರಾಗಿದ್ದರು.

ತಮಗೆ ಸೇನೆ ಸೇರಲು ಅರ್ಹತೆಗಳಿದ್ದವು. ಆದರೆ ಜೂನ್ 2022ರಲ್ಲಿ, ರಕ್ಷಣಾ ಸಚಿವಾಲಯ ಅಗ್ನಿಪಥ್ ಯೋಜನೆ ಕುರಿತು ಅಧಿಸೂಚನೆಯನ್ನು ಹೊರಡಿಸಿ ತಮ್ಮ (ಅರ್ಜಿದಾರರ) ನೇಮಕಾತಿ ಒಳಗೊಂಡಂತೆ ಎಲ್ಲಾ ಬಾಕಿಯಿರುವ ನೇಮಕಾತಿಗಳನ್ನು ರದ್ದುಗೊಳಿಸಿತು. ಹೀಗಾಗಿ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ. ಭಾರತೀಯ ಸೇನೆಗೆ ತಮ್ಮನ್ನು ಆಯ್ಕೆ ಮಾಡದಿರುವುದು ಕಾನೂನುಬಾಹಿರ, ಅನಿಯಂತ್ರಿತ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಜೊತೆಗೆ ತಮಗೆ ನೇಮಕಾತಿ ಪತ್ರಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೂಡ ಅವರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com