ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಆಲಿಸುವುದಕ್ಕಾಗಿ ಬಾಂಬೆ ಹೈಕೋರ್ಟ್ ವಿಧಿಸಿದ್ದ ₹ 3.9 ಕೋಟಿ ಪೂರ್ವ ಪ್ರವೇಶಾತಿ ವೆಚ್ಚವನ್ನು ಸುಪ್ರೀಂಕೋರ್ಟ್ ₹ 10 ಲಕ್ಷಕ್ಕೆ ಇಳಿಸಿದೆ.
ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗೆ ಅನುಮತಿಸಿದ ಸುಪ್ರೀಂ ಕೋರ್ಟ್ ಪಿಐಎಲ್ ಅರ್ಜಿಯನ್ನು ಹೈಕೋರ್ಟ್‌ನ ಕಡತಕ್ಕೆ ಮರಳಿಸಲು ಸಮ್ಮತಿಸಿತು.
ಹಾಗೆ ಮಾಡುವಾಗ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ “ಸಾರ್ವಜನಿಕ ಯೋಜನೆಗಳನ್ನು ಉದ್ದೇಶಪೂರ್ವಕ ಕುಮ್ಮಕ್ಕಿನಿಂದ ಕೂಡಿದ ಪಿಐಎಲ್‌ಗಳು ಪಲ್ಲಟಗೊಳಿಸದಂತೆ ನೋಡಿಕೊಳ್ಳುವುದು ಮುಖ್ಯವಾದರೂ ನ್ಯಾಯ ನಿರಾಕರಣೆಯಾಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ” ಎಂದಿದೆ.
ಕೊಳಚೆ ನೀರು ಶುದ್ಧೀಕರಣ ಘಟಕದ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ತಗಾದೆ ಎತ್ತಿದ್ದ ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಕಾರ್ಪೊರೇಟರ್ ಆಗಿರುವ ಮೇಲ್ಮನವಿದಾರರಿಗೆ ಬಾಂಬೆ ಹೈಕೋರ್ಟ್ ರೂ. 390 ಕೋಟಿ ಅಂದಾಜು ವೆಚ್ಚದ ಯೋಜನೆಯ ಶೇ 1ರಷ್ಟು ಭಾಗವನ್ನು ಠೇವಣಿ ಇಡುವಂತೆ ಸೂಚಿಸಿತ್ತು. ಇದನ್ನು ಒಪ್ಪದ ಮೇಲ್ಮನವಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತಮ್ಮ ಮೇಲೆ ಈ ವೆಚ್ಚ ಅಧಿಕ ಹೊರೆಯಾಗುತ್ತದೆ. ಅಲ್ಲದೆ, ಇದು ನ್ಯಾಯಾಲಯದಲ್ಲಿ ಸವಾಲು ಮುಂದುವರೆಸುವುದನ್ನು ತಡೆಯುತ್ತದೆ ಎಂದು ಹೇಳಿದ್ದರು.
ಹೈಕೋರ್ಟ್ ನೀಡಿದ್ದ ಆದೇಶದ ಉದ್ದೇಶ ಸಾರ್ವಜನಿಕ ಯೋಜನೆಯ ವಿಳಂಬ ತಪ್ಪಿಸುವುದಾಗಿದ್ದರೂ ಅದಕ್ಕಾಗಿ ವಿಧಿಸಿದ ಪ್ರವೇಶ ವೆಚ್ಚ ಕಠಿಣವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
"ನಿಯಮ 7A ಅನ್ನು ಮನಸ್ಸಿನಲ್ಲಿಟ್ಟುಕೊಂಡರೂ, ಮತ್ತೊಂದೆಡೆ ನ್ಯಾಯ ದೊರೆಯದಿರುವ ಸಾಧ್ಯತೆಯನ್ನು ತಡೆಯಲು ಸಮತೋಲನ ಸಾಧಿಸುವುದು ಸಹ ಅಷ್ಟೇ ಅಗತ್ಯವಾಗಿದೆ. ದಾವೆಗಳಿಂದಾಗಿ ಸಾರ್ವಜನಿಕ ಯೋಜನೆಯು ಅನಗತ್ಯ ವಿಳಂಬವಾಗದಂತೆ ನೋಡಿಕೊಳ್ಳುವ ಹಿತಾಸಕ್ತಿಯನ್ನು ಪೂರೈಸುವ ಉದ್ದೇಶ ಹೈಕೋರ್ಟ್‌ನ ಆದೇಶದ್ದಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಇದೇ ವೇಳೆ, ಯೋಜನೆಯ ವೆಚ್ಚದ ಶೇ 1ರಷ್ಟು ಠೇವಣಿಯ ಇರಿಸುವುದು ಕಠಿಣ ಆದೇಶವಾಗುತ್ತದೆ. ಮತ್ತು ಈ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶವು ನ್ಯಾಯದ ಉದ್ದೇಶಗಳನ್ನು ಪೂರೈಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂಬುದಾಗಿ ಪೀಠ ತಿಳಿಸಿದೆ.
ಸುಪ್ರೀಂಕೋರ್ಟ್ ಈ ಹಿಂದೆ ರೂ 10 ಲಕ್ಷ ಪಾವತಿ ಮಾಡುವಂತೆ ಸೂಚಿಸಿತ್ತು. ಹಣ ಜಮೆ ಮಾಡಿರುವುದಾಗಿ ಮಂಗಳವಾರ ಸುಪ್ರೀಂಕೋರ್ಟ್ ಗಮನಕ್ಕೆ ತರಲಾಯಿತು. ಅದರಂತೆ, ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್‌ಗೆ ಮರ ನಿಯೋಜಿಸಿತು. ದಾವೆದಾರರು ಪ್ರಾಮಾಣಿಕವಾಗಿ ಈಗಾಗಲೇ ಹಣ ಪಾವತಿಸಿದ್ದು ಅದರ ಆಧಾರದ ಮೇಲೆ ಪಿಐಎಲ್ ವಿಚಾರಣೆ ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅರ್ಜಿದಾರರ ಪರವಾಗಿ ವಕೀಲರಾದ ವಿಪಿನ್ ನಾಯರ್ ಮತ್ತು ಪಿ ಬಿ ಸುರೇಶ್ ಹಾಜರಿದ್ದರು.