ಎನ್‌ಸಿಆರ್‌ಬಿ- 2020 ವರದಿ: ಕರ್ನಾಟಕವನ್ನು ಕಾಡುತ್ತಿರುವ ಸೈಬರ್ ಅಪರಾಧ; ಶಿಕ್ಷೆಯ ಪ್ರಮಾಣದಲ್ಲಿ ಇಳಿಕೆ

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು, ದೇಶದಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಅತಿ ಕಡಿಮೆ ಶಿಕ್ಷೆಯ ದರ ದಾಖಲಿಸಿರುವ ನಗರ ಎಂಬ ಕುಖ್ಯಾತಿಗೂ ಒಳಗಾಗಿದೆ.
ಎನ್‌ಸಿಆರ್‌ಬಿ- 2020 ವರದಿ: ಕರ್ನಾಟಕವನ್ನು ಕಾಡುತ್ತಿರುವ ಸೈಬರ್ ಅಪರಾಧ; ಶಿಕ್ಷೆಯ ಪ್ರಮಾಣದಲ್ಲಿ ಇಳಿಕೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ʼಕ್ರೈಂ ಇನ್‌ ಇಂಡಿಯಾ- 2020ʼ ವರದಿಯು ಬೆಂಗಳೂರಿನಲ್ಲಿ ಸೈಬರ್‌ ಅಪರಾಧ ಹೆಚ್ಚಿರುವುದನ್ನು ಹಾಗೆಯೇ ಇಡೀ ರಾಜ್ಯದಲ್ಲಿ ಅಪರಾಧಗಳಿಗೆ ಶಿಕ್ಷೆಗೊಳಗಾಗುವ ಪ್ರಮಾಣ ಕಳೆದ ವರ್ಷವೂ ಇಳಿಕೆ ಆಗಿರುವುದನ್ನು ಸೂಚಿಸಿದೆ.

2020ನೇ ಸಾಲಿನಲ್ಲಿ ದೇಶದೆಲ್ಲೆಡೆ ಸೈಬರ್‌ ಅಪರಾಧ ಶೇ 11.8ರಷ್ಟು ಹೆಚ್ಚಳವಾಗಿರುವುದನ್ನು ತಿಳಿಸಿರುವ ಎನ್‌ಸಿಆರ್‌ಬಿ ವರದಿ ದೇಶದ ಸಿಲಿಕಾನ್‌ ಸಿಟಿ ಎನಿಸಿಕೊಂಡಿರುವ ಬೆಂಗಳೂರು ಸೈಬರ್‌ ಅಪರಾಧದಲ್ಲಿಯೂ ಮುಂಚೂಣಿಯಲ್ಲಿದೆ ಎಂದಿದೆ. 2019ರಲ್ಲಿಯೂ ಬೆಂಗಳೂರು ಸೈಬರ್‌ ಅಪರಾಧಗಳಲ್ಲಿ ಮೊದಲನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ ಸಂಗತಿ.

ಕಳೆದ ವರ್ಷ 18,657 ಸೈಬರ್‌ ಪ್ರಕರಣಗಳು ಇಡೀ ದೇಶದ ಪ್ರಮುಖ ನಗರಗಳಲ್ಲಿ ದಾಖಲಾಗಿದ್ದರೆ ಬೆಂಗಳೂರು ನಗರವೊಂದರಲ್ಲೇ 8,892 ಪ್ರಕರಣಗಳು ದಾಖಲಾಗಿವೆ. ಅಂದರೆ ಶೇ 47ರಷ್ಟು ಅಂತರ್ಜಾಲ ಸಂಬಂಧಿತ ಅಪರಾಧಗಳು ಬೆಂಗಳೂರಿನಲ್ಲಿ ಘಟಿಸಿವೆ. ಇದು ನಗರಗಳ ಚಿತ್ರಣ. ರಾಜ್ಯಗಳ ವಿಚಾರದಲ್ಲಿ ಸೈಬರ್‌ ಅಪರಾಧದಲ್ಲಿ ಮುಂಚೂಣಿಯಲ್ಲಿರುವುದು ಉತ್ತರಪ್ರದೇಶ. ಎರಡನೇ ಸ್ಥಾನ ಕರ್ನಾಟಕದ್ದು. ಆದರೆ ಕರ್ನಾಟಕದಲ್ಲಿ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಯಾರೊಬ್ಬರಿಗೂ ಶಿಕ್ಷಯಾಗಿಲ್ಲ ಎನ್ನುತ್ತವೆ ಅಂಕಿ ಅಂಶಗಳು.

Also Read
ಎನ್‌ಸಿಆರ್‌ಬಿ 2020 ದತ್ತಾಂಶ: ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಮಾಣದಲ್ಲಿ ಶೇ. 24 ಇಳಿಕೆ

ಇನ್ನು ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣದ ದರ (Low conviction rate) ಕಡಿಮೆ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ವರದಿ ಪ್ರಕಾರ ಐಪಿಸಿ ಸೆಕ್ಷನ್‌ನಡಿ ಕರ್ನಾಟಕ ಪೊಲೀಸರು ಕೇವಲ ಶೇ 51.2ರಷ್ಟು ಶಿಕ್ಷೆ ಪ್ರಮಾಣವನ್ನು ಸಾಧಿಸುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದರೆ ಉಳಿದ ರಾಜ್ಯಗಳಲ್ಲಿ ಶಿಕ್ಷೆಯ ದರ ಹೆಚ್ಚಳವಾಗಿದೆ. ದೆಹಲಿ ಪೊಲೀಸರು ದೇಶದಲ್ಲಿಯೇ ಅತಿ ಹೆಚ್ಚು ಶಿಕ್ಷೆಯ ಪ್ರಮಾಣ ದಾಖಲಿಸಿದ್ದಾರೆ. ಅಂತೆಯೇ ದೇಶದಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆಯ ದರ ದಾಖಲಿಸಿರುವ ನಗರ ಎಂಬ ಕುಖ್ಯಾತಿಯೂ ಬೆಂಗಳೂರಿಗೆ ಒದಗಿದೆ. ದೆಹಲಿ ನಗರ ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿದೆ (ಶೇ 85.5).

ಜಾತಿ ಸಂಘರ್ಷ ಪ್ರಕರಣಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು (95ಪ್ರಕರಣಗಳು) ಬಿಹಾರ ಮೊದಲನೇ ಸ್ಥಾನದಲ್ಲಿದೆ(208 ಪ್ರಕರಣಗಳು). ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ತೊಂಬತ್ತು ಮಹಾನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ ದೆಹಲಿ ಮೊದಲನೇ ಸ್ಥಾನದಲ್ಲಿದೆ. ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಕೂಡ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಮಣಿಪುರ, ಅಸ್ಸಾಂ, ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ 2020ನೇ ಸಾಲಿನಲ್ಲಿ ಅತಿ ಹೆಚ್ಚು ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಮಣಿಪುರದಲ್ಲಿ ಅಂತಹ 15 ಪ್ರಕರಣಗಳು ದಾಖಲಾಗಿದ್ದರೆ ಅಸ್ಸಾಂನಲ್ಲಿ 12, ಕರ್ನಾಟಕದಲ್ಲಿ 8 ಮತ್ತು ಉತ್ತರ ಪ್ರದೇಶದಲ್ಲಿ 7 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ.

ಕೃಷಿ ಗಲಭೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 148 ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಸುತ್ತಮುತ್ತ ರೈತರು ಭಾರಿ ಪ್ರತಿಭಟನೆ ನಡೆಸಿದ್ದರೂ ಪಂಜಾಬ್‌ನಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ. ಹರಿಯಾಣದಲ್ಲಿ ದಾಖಲಾಗಿರುವುದು ಕೇವಲ 34 ಪ್ರಕರಣಗಳು.

ಗಲಭೆಗಳಲ್ಲಿ ಗಾಯಗೊಂಡ ಪೊಲೀಸ್‌ ಸಿಬ್ಬಂದಿಗೆ ಸಂಬಂಧಿಸಿದ ಅಂಕಿ ಅಂಶವೊಂದರ ಪ್ರಕಾರ ಕೇರಳ, ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕೇರಳದಲ್ಲಿ 176, ರಾಜಸ್ಥಾನದಲ್ಲಿ 162 ಹಾಗೂ ಕರ್ನಾಟಕದಲ್ಲಿ 58 ಈ ಬಗೆಯ ಪ್ರಕರಣಗಳು ದಾಖಲಾಗಿವೆ.

ರಸ್ತೆ ಅಪಘಾತ ಪ್ರಕರಣಗಳಲ್ಲಿ ಉಂಟಾಗುವ ಸಾವಿನ ಪ್ರಮಾಣಕ್ಕೆ ಸಂಬಂಧಿಸಿದಂತೆ 2020ನೇ ಸಾಲಿನಲ್ಲಿ ಕರ್ನಾಟಕ ಕೊಂಚ ಸುಧಾರಣೆ ಕಂಡಿದೆ. 2019ರಲ್ಲಿ ಅದು ಎರಡನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ. ದೇಶದಲ್ಲಿ 2020ನೇ ಸಾಲಿನಲ್ಲಿ ಅತಿಹೆಚ್ಚು ರಸ್ತೆ ಅಪಘಾತ ಸಾವುಗಳು ಸಂಭವಿಸಿರುವ ರಾಜ್ಯವಾಗಿ ಉತ್ತರಪ್ರದೇಶ ಮುಂದುವರೆದಿದೆ

Related Stories

No stories found.
Kannada Bar & Bench
kannada.barandbench.com