[ಬೆಳಗಾವಿ ವಿವಸ್ತ್ರ ಪ್ರಕರಣ] ಸಂತ್ರಸ್ತ ಮಹಿಳೆಗೆ ಗ್ರಾಮದ ಸಮೀಪವೇ ಭೂಮಿ ಮಂಜೂರು: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಎನ್ನುವ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣ ಇದಾಗಿದೆ.
Karnataka High Court
Karnataka High Court
Published on

ಬೆಳಗಾವಿಯ ಮಹಿಳೆಯ ವಿವಸ್ತ್ರ ಪ್ರಕರಣದ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಎನ್ನುವ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ನಡೆಸಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು ಮೆಮೊ ಸಲ್ಲಿಸಿದರು. ಇದರಲ್ಲಿ ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಬಹುತೇಕ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ ಎಂದು ವಿವರಿಸಲಾಗಿದೆ. ಸಂತ್ರಸ್ತ ಮಹಿಳೆಯು ತನ್ನ ಗ್ರಾಮದ ಸಮೀಪ ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ಯೋಜನೆಯ ಅಡಿ ಜಮೀನು ನೀಡುವಂತೆ ಕೋರಿದ್ದಾರೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.

Also Read
[ಬೆಳಗಾವಿ ವಿವಸ್ತ್ರ ಪ್ರಕರಣ] ಲಿಖಿತ ಅನುಮತಿ ಪಡೆಯದೇ ಸಂತ್ರಸ್ತೆ ಭೇಟಿಗೆ ಅವಕಾಶವಿಲ್ಲ: ಹೈಕೋರ್ಟ್‌

ಇದನ್ನು ಆಲಿಸಿದ ಪೀಠವು ಸಂತ್ರಸ್ತ ಮಹಿಳೆಗೆ ನಗದಿನ ರೂಪದ ಪರಿಹಾರ ವಿತರಿಸಲಾಗಿದೆ. ಸಂತ್ರಸ್ತ ಮಹಿಳೆಯ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಸಶಸ್ತ್ರ ಪಡೆಯ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸಂತ್ರಸ್ತೆಗೆ ಬೆಂಗಾವಲು ಒದಗಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಮಾಸಾಂತ್ಯದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ತನ್ನ ಗ್ರಾಮದ ಸಮೀಪದ ಭೂಮಿ ಮಂಜೂರು ಮಾಡುವಂತೆ ಸಂತ್ರಸ್ತೆ ಕೋರಿರುವುದಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.

Kannada Bar & Bench
kannada.barandbench.com