ಜಾಮೀನು ಬಯಸುವ ಆರೋಪಿ ವಿಶೇಷ ಅನುಮತಿ ಅರ್ಜಿಯ ಸಾರಾಂಶದಲ್ಲಿ ತನ್ನ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು: ಸುಪ್ರೀಂ

ಕ್ರಿಮಿನಲ್ ಹಿನ್ನೆಲೆ ಬಗ್ಗೆ ಸುಳ್ಳು ಮಾಹಿತಿ ನೀಡುವುದು ಅರ್ಜಿಯನ್ನು ವಜಾಗೊಳಿಸಲು ಆಧಾರವಾಗಬಹುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
Supreme Court of India
Supreme Court of India
Published on

ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಕೋರಿ ಮೇಲ್ಮನವಿ ಸಲ್ಲಿಸುವ ಎಲ್ಲಾ ಅರ್ಜಿದಾರರು ತಾವು ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯ (ಎಸ್ಎಲ್‌ಪಿ) ಸಾರಾಂಶದಲ್ಲಿ ತಮ್ಮ ಕ್ರಿಮಿನಲ್‌ ಹಿನ್ನೆಲೆಯನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ನಿರ್ದೇಶನ ನೀಡಿದೆ [ಮುನ್ನೇಶ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಆರೋಪಿ ನಿಷ್ಕಳಂಕ ಹಿನ್ನೆಲೆಯುಳ್ಳವನೇ ಅಥವಾ ಈ ಹಿಂದೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದನೇ ಎಂಬುದನ್ನು ಎಸ್‌ಎಲ್‌ಪಿ ಸಾರಾಂಶ ಸ್ಪಷ್ಟವಾಗಿ ಹೇಳಬೇಕು. ಅದಕ್ಕೆ ಸಂಬಂಧಿಸಿದ ವಿಚಾರಣೆಯ ವಿವರಗಳು, ಪ್ರಕರಣದ ಪ್ರಸ್ತುತ ಹಂತವನ್ನು ನಿರ್ದಿಷ್ಟವಾಗಿ ವಿವರಿಸಬೇಕು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಹೇಳಿದೆ.

Also Read
ಕಸ್ಟಡಿ ಸಾವು ಪ್ರಕರಣಗಳಲ್ಲಿ ಪೊಲೀಸರಿಗೆ ಜಾಮೀನು ನೀಡುವಾಗ ಕಠಿಣ ಧೋರಣೆ ಅನುಸರಿಸಬೇಕು: ಸುಪ್ರೀಂ ಕೋರ್ಟ್‌

ಕ್ರಿಮಿನಲ್ ಹಿನ್ನೆಲೆ  ಬಗ್ಗೆ ಸುಳ್ಳು ಮಾಹಿತಿ ನೀಡುವುದು ಅರ್ಜಿಯನ್ನು ವಜಾಗೊಳಿಸಲು ಆಧಾರವಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಜಾಮೀನು ಕೋರುವಾಗ ವ್ಯಕ್ತಿಗಳು ತಮ್ಮ ಕ್ರಿಮಿನಲ್‌ ಹಿನ್ನೆಲೆಯನ್ನು ಮರೆಮಾಚುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೀಠ ಈ ನಿರ್ದೇಶನ ನೀಡಿತು. ಹಿಂದೆ ನ್ಯಾಯಾಲಯ ಈ ಬಗ್ಗೆ ಮೆದು ಧೋರಣೆ ತಾಳಿತ್ತಾದರೂ ಇದೀಗ, ಅಂತಹ ಪದ್ಧತಿಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ಅದು ಹೇಳಿದೆ.

ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26, 2018 ರಂದು ಬಂಧಿತನಾಗಿದ್ದ ಮುನ್ನೇಶ್ ಎಂಬಾತನ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ನಿರ್ದೇಶನಗಳನ್ನು ನೀಡಲಾಯಿತು. ಆತನ ಜಾಮೀನು ಅರ್ಜಿಯನ್ನು 2023ರ ಅಕ್ಟೋಬರ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ತೀರ್ಪು ಪ್ರಶ್ನಿಸಿ ಮುನ್ನೇಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.

Also Read
ಎನ್‌ಡಿಪಿಎಸ್‌ ಕಾಯಿದೆ ಅಪರಾಧ ಈಚೆಗೆ ವಾಡಿಕೆ; ಜಾಮೀನು ನೀಡುವಾಗ ನ್ಯಾಯಾಲಯ ಎಚ್ಚರವಹಿಸಬೇಕು: ದೆಹಲಿ ಹೈಕೋರ್ಟ್‌

ಆದರೆ ತಾನು ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಮತ್ತು ಐಪಿಸಿ ಸೆಕ್ಷನ್ 379 (ಕಳ್ಳತನಕ್ಕೆ ಶಿಕ್ಷೆ) ಮತ್ತು 411 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಹಂಚಿಕೊಳ್ಳುವುದು) ಅಡಿಯಲ್ಲಿ ಈಗಾಗಲೇ ಶಿಕ್ಷೆಗೆ ಗುರಿಯಾಗಿರುವುದು ಸೇರಿದಂತೆ ತನ್ನ ಕ್ರಿಮಿನಲ್‌ ಹಿನ್ನೆಲೆಯನ್ನು ವಿವರಿಸಿರಲಿಲ್ಲ ಎಂಬುದನ್ನು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಸ್ತುತ ಪ್ರಕರಣದಂತೆ ಜಾಮೀನು ಅರ್ಜಿಗಳ ವಿಚಾರಣೆ ನಡೆಸುವಾಗ ಕ್ರಿಮಿನಲ್ ಹಿನ್ನೆಲೆ ವಿವರಿಸದಿದ್ದರೆ ನ್ಯಾಯಾಲಯದ ದಿಕ್ಕು ತಪ್ಪಿಸಿದಂತಾಗುತ್ತದೆ ಎಂದ ಪೀಠ ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರ ವಿವೇಚನಾಧಿಕಾರದ ಮೇಲೆ ಜಾಮೀನು ಪರಿಹಾರ ಪಡೆಯಲು ಅರ್ಹರಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com