ಮಾದಕ ವಸ್ತು ಪ್ರಕರಣವೊಂದರಲ್ಲಿ ಆರೋಪಿಯೊಬ್ಬರಿಗೆ ಈಚೆಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್, ಜಾಮೀನು ನಿರ್ಧರಿಸುವಾಗ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆ ಜಾರಿಗೆ ತಂದಿರುವ ಶಾಸನಸಭೆಯ ಹಿಂದಿನ ಉದ್ದೇಶದ ಬಗ್ಗೆ ನ್ಯಾಯಾಲಯಗಳು ಜಾಗೃತವಾಗಿರಬೇಕು ಎಂದಿದೆ (ವಿಕಾಸ್ ಕುಮಾರ್ ವರ್ಸಸ್ ದೆಹಲಿ ರಾಜ್ಯ).
ಎನ್‌ಡಿಪಿಎಸ್ ಕಾಯಿದೆ ಅಡಿ ಉಲ್ಲೇಖಿಸಿರುವ ಅಪರಾಧಗಳು ನಿರ್ದಿಷ್ಟ ವ್ಯಕ್ತಿಗೆ ಮಾತ್ರವೇ ಸಮಸ್ಯೆಯುಂಟು ಮಾಡುವುದಿಲ್ಲ. ಇಡೀ ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ದೇಶದ ಯುವಜನರಿಗೆ ಎದುರಾಗಿರುವ ಪಿಡುಗು ಎಂದು ನ್ಯಾಯಮೂರ್ತಿ ಚಂದ್ರ ಧರಿ ಸಿಂಗ್ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.
“ಇಂಥ ಅಪರಾಧಗಳು ನಕಾರಾತ್ಮಕ ಪರಿಣಾಮ ಉಂಟು ಮಾಡಲಿದ್ದು, ಇತ್ತೀಚೆಗೆ ವಾಡಿಕೆ ಎಂಬಂತಾಗಿವೆ. ಆ ಮೂಲಕ ದೇಶದ ಬಹುಪಾಲು ಜನರ ಸಾಮರ್ಥ್ಯ ಮತ್ತು ಬದುಕನ್ನು ನಾಶ ಮಾಡುತ್ತಿವೆ. ಪ್ರತಿ ವರ್ಷ ಇದು ವ್ಯಾಪಕವಾಗುತ್ತಿದೆ. ದೇಶದ ಜನರ ಮೇಲಿನ ವಿನಾಶಕಾರಿ ಪರಿಣಾಮವನ್ನು ನಿಯಂತ್ರಿಸುವ ಉದ್ದೇಶದಿಂದ ಕಾಯಿದೆ ಅಡಿ ಜಾಮೀನು ನೀಡುವ ಕಠಿಣವಾದ ಷರತ್ತುಗಳನ್ನು ಸಂಸತ್ ವಿಧಿಸಿದೆ. ಹೀಗಾಗಿ, ಸದರಿ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯಗಳು ಶಾಸನ ಸಭೆ ಮತ್ತು ಕಾಯಿದೆಯ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮತ್ತು ಬರಿಸಲು ಬಳಸಲಾಗುವ ಗಸಗಸೆ ಹೊಟ್ಟು (ಪಾಪ್ಪಿ ಹಸ್ಕ್) ಹೊಂದಿದ್ದ ಹಾಗೂ ಅದೇ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಆರೋಪಿಯೊಬ್ಬನ ಜಾಮೀನು ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದ ಪೊಲೀಸರು 975.5 ಕೆಜಿ ಗಸಗಸೆ ಹುಲ್ಲು (ಪಾಪ್ಪಿ ಸ್ಟ್ರಾ) ವಶಪಡಿಸಿಕೊಂಡಿದ್ದರು.
ಕಳೆದ ವರ್ಷದ ಮಾರ್ಚ್ 20ರಂದು ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ವಿಶೇಷ ನ್ಯಾಯಾಲಯವು ಆರೋಪ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಯು ಜಾಮೀನು ಕೋರಿ ದೆಹಲಿ ಹೈಕೋರ್ಟ್ ಕದತಟ್ಟಿದ್ದರು.