ಹಿಂದೂ-ಮುಸ್ಲಿಮರಲ್ಲಿ ದ್ವೇಷ ಸೃಷ್ಟಿಸಿ, ಸೌಹಾರ್ದ ಕೆಡಿಸಲು ಆರೋಪಿಗಳಿಂದ ಪ್ರಯತ್ನ: ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖ

ಸಿಎಎ-ಎನ್‌ಆರ್‌ಸಿ ಪ್ರಕರಣ, ಹಿಜಾಬ್‌ ವಿವಾದ ಮತ್ತು ಬಜರಂಗ ದಳ ನಡೆಸುತ್ತಿದ್ದ ಗೋವು ಸಂರಕ್ಷಣಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಎಂಟು ಆರೋಪಿಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದರು ಎಂದು ಉಲ್ಲೇಖ.
Harsha
Harsha

ಶಿವಮೊಗ್ಗದಲ್ಲಿನ ಬಜರಂಗದ ಕಾರ್ಯಕರ್ತ ಹರ್ಷ ಅಲಿಯಾಸ್‌ ಹಿಂದೂ ಹರ್ಷನ ಕೊಲೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಈಚೆಗೆ ಎನ್‌ಐಎ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದು, ಸ್ಥಳೀಯ ಹಿಂದೂ-ಮುಸ್ಲಿಮರಲ್ಲಿ ದ್ವೇಷ ಸೃಷ್ಟಿಸಿ, ಸೌಹಾರ್ದ ನಾಶಪಡಿಸಲು ಆರೋಪಿಗಳು ಪ್ರಯತ್ನಿಸಿದ್ದರು ಎಂದು ವಿವರಿಸಲಾಗಿದೆ.

ಎನ್‌ಐಎ ತನಿಖಾಧಿಕಾರಿಯಾಗಿರುವ ಬೆಂಗಳೂರು ಘಟಕದ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ ಷಣ್ಮುಗಂ ಅವರು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರ ನೇತೃತ್ವದ ಪೀಠಕ್ಕೆ ಸಿಆರ್‌ಪಿಸಿ ಸೆಕ್ಷನ್‌ 173 ಅಡಿ ದಾಖಲೆ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ 10 ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ವಿಚಾರಣೆ ಆರಂಭಿಸಲು ಅಗತ್ಯವಾದ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಎಂದು ಎನ್‌ಐಎ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಸಿಎಎ-ಎನ್‌ಆರ್‌ಸಿ ಪ್ರಕರಣ, ಹಿಜಾಬ್‌ ವಿವಾದ ಮತ್ತು ಬಜರಂಗ ದಳ ನಡೆಸುತ್ತಿದ್ದ ಗೋವು ಸಂರಕ್ಷಣಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪ್ರಕರಣದ ಒಂದರಿಂದ ಎಂಟರವರೆಗಿನ ಎಂಟು ಆರೋಪಿಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಹಿಂದೂ ಸಮುದಾಯದ ವಿರುದ್ಧ ಭಯೋತ್ಪಾದನಾ ಕೃತ್ಯ ಎಸಗಲು ನಿರ್ಧರಿಸಿದ್ದರು, ಆ ಮೂಲಕ ಕೋಮು ಅಶಾಂತಿ ಸೃಷ್ಟಿಸುವುದು, ಹಿಂದೂ ಹಾಗೂ ಮುಸ್ಲಿಮ್‌ ಸಮುದಾಯ ನಡುವೆ ಶಿವಮೊಗ್ಗ ನಗರದಲ್ಲಿ ದ್ವೇಷ ಹರಡುವ ಉದ್ದೇಶ ಹೊಂದಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಇದರ ಭಾಗವಾಗಿ ಆರೋಪಿಗಳು ಶಿವಮೊಗ್ಗದಲ್ಲಿ ನಡೆಯುವ ಮೆರವಣಿಗೆ, ಉತ್ಸವ, ಕಾರ್ಯಕ್ರಮಗಳಲ್ಲಿ ಹಿಂದೂ ಸಮುದಾಯದ ಪ್ರಮುಖ ನಾಯಕರ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಶಿವಮೊಗ್ಗದ ಸೀಗೆಹಟ್ಟಿ ಪ್ರದೇಶದ ಭಾರತಿ ಕಾಲೊನಿಯ ನಿವಾಸಿ, ಬಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷ ಅಲಿಯಾಸ್‌ ಹಿಂದೂ ಹರ್ಷ ಅವರನ್ನು ಆರೋಪಿಗಳು ಪ್ರಮುಖ ಹಿಂದೂ ನಾಯಕ ಎಂದು ಗುರುತಿಸಿದ್ದರು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಆತನನ್ನು ಕೊಲೆ ಮಾಡಲು ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದರು ಎಂದು ವಿವರಿಸಲಾಗಿದೆ.

ʼಕಾಫಿರ್‌ ಬಜರಂಗ್‌ ದಲ್‌ ವಾಲೆ ಕೋ ಮಾರೊʼ (ಧರ್ಮ ದ್ರೋಹಿ ಬಜರಂಗ ದಳದವರನ್ನು ಕೊಲ್ಲಿ) ಎಂದು ಕೂಗುತ್ತಾ ಹರ್ಷನನ್ನು ಸಾರ್ವಜನಿಕವಾಗಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಸಂರಕ್ಷಿತ ಸಾಕ್ಷಿಗಳು ಮತ್ತು ಸಾಕ್ಷಿಗಳ ಹೇಳಿಕೆ, ರಕ್ತಸಿಕ್ತ ಮಾರಕಾಸ್ತ್ರಗಳು, ಕೊಲೆಯಾದ ಹರ್ಷ, ಆರೋಪಗಳಲ್ಲಿ ಪತ್ತೆಯಾಗಿರುವ ರಕ್ತಸಿಕ್ತ ಬಟ್ಟೆಗಳು, ವೈಜ್ಞಾನಿಕ ಆಧಾರಗಳು, ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಮತ್ತು ಕರೆ ದಾಖಲೆ ವಿಶ್ಲೇಷಣೆಯಿಂದ ಒಂದರಿಂದ ಎಂಟನೇ ಆರೋಪಿಗಳು ಉಗ್ರ ಗುಂಪು ಸೃಷ್ಟಿಸಿಕೊಂಡಿದ್ದು, ಮಾರಕಾಸ್ತ್ರಗಳಿಂದ ಹರ್ಷನನ್ನು ಕೊಚ್ಚಿ ಕೊಲೆ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷವಾಗಿ ಶಿವಮೊಗ್ಗ ನಗರದ ಸೀಗೆಹಟ್ಟಿ ಮತ್ತು ಭಾರತಿ ಕಾಲೊನಿ ಪ್ರದೇಶದಲ್ಲಿ ಹಿಂದೂ ಸಮುದಾಯದಲ್ಲಿ ಉಗ್ರ ಚಟುವಟಿಕೆ ನಡೆಸಿದ್ದರು ಎಂದು ಆರೋಪ ಮಾಡಲಾಗಿದೆ.

ಹರ್ಷನನ್ನು ಕೊಲೆ ಮಾಡುವ ಸಂದರ್ಭದಲ್ಲಿ ಆರೋಪಿಗಳು ಸ್ಥಳೀಯ ಮುಸ್ಲಿಮರು ಮತ್ತು ಹಿಂದೂ ಸಮುದಾಯದವರಲ್ಲಿ ದ್ವೇಷ ಮತ್ತು ವಿರೋಧ ಸೃಷ್ಟಿಸಿ, ಸೌಹಾರ್ದ ಕೆಡಿಸಲು “ಕಾಫಿರ್‌ ಬಜರಂಗ ದಳ್ ವಾಲೆ ಕೊ ಮಾರೊ” ಎಂದು ಘೋಷಣೆ ಹಾಕಿದ್ದಾರೆ. ಅನುಮಾನಕ್ಕೆ ಆಸ್ಪದ ಇಲ್ಲದಂತೆ ಮಾಡಲು ಹಾಗೂ ಪಿತೂರಿಯ ಭಾಗವಾಗಿ ಹರ್ಷನ ಚಲನವಲನದ ಮೇಲೆ ನಿಗಾ ಇಡಲು ಒಂದು, ಮೂರು ಮತ್ತು ಏಳನೇ ಆರೋಪಿಗಳು ಎಂಟನೇ ಆರೋಪಿಯನ್ನು ನೇಮಕ ಮಾಡಿಕೊಂಡಿದ್ದರು ಎಂದು ವಿವರಿಸಲಾಗಿದೆ.

ಅಪರಾಧದಲ್ಲಿ ದೋಷಮುಕ್ತನಾಗುವ ಉದ್ದೇಶದಿಂದ ನಾಲ್ಕನೇ ಆರೋಪಿಯು ತನ್ನ ಸಿಮ್‌ ಕಾರ್ಡ್‌ಮತ್ತು ಕೃತ್ಯದ ಸಂದರ್ಭದಲ್ಲಿ ಧರಿಸಿದ್ದ ರಕ್ತಸಿಕ್ತ ಬಟ್ಟೆ ಮತ್ತು ಮಾರಾಕಾಸ್ತ್ರವನ್ನು ನಾಶಪಡಿಸಿದ್ದಾನೆ. ಕೊಲೆಯ ಬಗ್ಗೆ ತಿಳಿದಿದ್ದರೂ ಒಂಭತ್ತನೇ ಆರೋಪಿಯು ಒಂದು, ಮೂರು ಮತ್ತು ಐದನೇ ಆರೋಪಿಗೆ ಆಶ್ರಯ ನೀಡಿದ್ದಾನೆ. ಹತ್ತನೇ ಆರೋಪಿಯು ಆರನೇ ಆರೋಪಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿದ್ದಾನೆ ಎಂದು ವಿವರಿಸಲಾಗಿದೆ.

Also Read
ಹರ್ಷ ಹತ್ಯೆ ಪ್ರಕರಣ: ಆರೋಪಿಗಳಿಗೆ ಕಾರು ನೀಡಿದ್ದ ಜಾಫರ್‌ ಸಾದಿಕ್‌ ಜಾಮೀನು ಮನವಿ ವಜಾ ಮಾಡಿದ ವಿಶೇಷ ನ್ಯಾಯಾಲಯ

ರೇಹಾನ್‌ ಶರೀಫ್‌ (23 ವರ್ಷ), ಮೊಹಮ್ಮದ್‌ ಖಾಸೀಫ್‌ (30), ಆಸಿಫುಲ್ಲಾ ಖಾನ್‌ (24), ಅಬ್ದುಲ್‌ ಅಫ್ವಾನ್‌ (22), ಸಯ್ಯದ್‌ ಫರೋಜ್‌ ಎಸ್‌ (21), ಅಬ್ದುಲ್‌ ಖಾದರ್‌ ಜಿಲಾನಿ (25), ರೋಷನ್‌ ಎ (26), ಫರಜ್‌ ಪಾಷಾ (26), ನದೀಮ್‌‌, ಜಾಫರ್‌ ಸಾದಿಕ್ (52) ಕ್ರಮವಾಗಿ ಒಂದರಿಂದ ಹತ್ತು ಆರೋಪಿಗಳಾಗಿದ್ದಾರೆ. ಒಂಬತ್ತನೇ ಆರೋಪಿ ನದೀಮ್‌ ಮತ್ತು ಹತ್ತನೇ ಆರೋಪಿ ಜಾಫರ್‌ ಸಾದಿಕ್‌ ವಿರುದ್ಧ ಐಪಿಸಿ ಸೆಕ್ಷನ್‌ 212ರ ಅಡಿ ಪ್ರಕರಣ ದಾಖಲಿಸಲಾಗಿದೆ. ಉಳಿದ ಆರೋಪಿಗಳ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ 16, 18, 18ಬಿ ಮತ್ತು 20 ಹಾಗೂ ಐಪಿಸಿ ಸೆಕ್ಷನ್‌ಗಳಾದ 120ಬಿ, 153ಎ, 201, 302 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com