ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಳು ಪ್ರತಿಕೂಲವಾದಾಗ ಮತ್ತು ದೂರುದಾರರು ತಾವು ಮಾಡಿದ್ದ ಆರೋಪಗಳನ್ನು ತಿರಸ್ಕರಿಸತೊಡಗಿದಾಗ ಆರೋಪಿಯ ಖುಲಾಸೆಯನ್ನು ಕಳಂಕರಹಿತ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ [ಮಧ್ಯಪ್ರದೇಶ ಸರ್ಕಾರ ಇನ್ನಿತರರು ಮತ್ತು ಭೂಪೇಂದ್ರ ಯಾದವ್ ನಡುವಣ ಪ್ರಕರಣ].
ಪೋಕ್ಸೊ ಕಾಯಿದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಖುಲಾಸೆ ಮಾಡುವಾಗ ಪ್ರಕರಣದ ಸಂತ್ರಸ್ತರು ಪ್ರಾಸಿಕ್ಯೂಷನ್ ವಾದ ಬೆಂಬಲಿಸಲು ವಿಫಲವಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ತಿಳಿಸಿತು.
“ಪ್ರಾಸಿಕ್ಯೂಷನ್ ಮಂಡಿಸಿದ ವಾದವನ್ನು ದೂರುದಾರರು ಬೆಂಬಲಿಸಿದ ಕಾರಣ ಮತ್ತು ಬೇರೆ ಪ್ರಾಸಿಕ್ಯೂಷನ್ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸಿದ ಕಾರಣ ಮೇಲ್ನೋಟಕ್ಕೆ ವಿಚಾರಣಾ ನ್ಯಾಯಾಲಯ ಪ್ರತಿವಾದಿಯನ್ನು ಖುಲಾಸೆಗೊಳಿಸಿದೆ. ಇಂತಹ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕರಣದಿಂದ ತನ್ನನ್ನು ಕಳಂಕರಹಿತವಾಗಿ ಖುಲಾಸೆಗೊಳಿಸಲಾಗಿದೆ ಎನ್ನುವ ಪ್ರತಿವಾದಿಯ ಅರ್ಜಿಯು ಅರ್ಹತೆಯ ಕೊರತೆಯಿಂದ ಕೂಡಿದೆ” ಎಂದು ನ್ಯಾಯಾಲಯ ವಿವರಿಸಿದೆ.
ಪ್ರಕರಣದಲ್ಲಿ ಖುಲಾಸೆಗೊಂಡಿದ್ದರೂ ಪೋಕ್ಸೊ-ಆರೋಪಿಯನ್ನು ಪೊಲೀಸ್ ಪೇದೆಯಾಗಿ ನೇಮಿಸದ ಮಧ್ಯಪ್ರದೇಶ ಪೊಲೀಸ್ ಇಲಾಖೆ ನಿರ್ಧಾರ ಎತ್ತಿ ಹಿಡಿದ ಮಧ್ಯಪ್ರದೇಶ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿಯುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅವಲೋಕನ ಮಾಡಿತು.
ಆರೋಪಿ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರರಣದಲ್ಲಿ ಆತನನ್ನು ಖುಲಾಸೆಗೊಳಿಸಿದ್ದರೂ ಆತ ಪೊಲೀಸ್ ಇಲಾಖೆಗೆ ನೇಮಕಗೊಳ್ಳಲು ಅನರ್ಹ ಎಂದು ಪೊಲೀಸ್ ಇಲಾಖೆ ಪರಿಗಣಿಸಿತ್ತು.