ನ್ಯಾಯಾಲಯಕ್ಕೆ ತೆರಳಿ ಜಾಮೀನು ಷರತ್ತು ಪೂರೈಸಿದ ನಟ ದರ್ಶನ್‌; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಜಾಮೀನು ಪ್ರಕ್ರಿಯೆ ಪೂರೈಸಿದ ನಂತರ ನಟ ದರ್ಶನ್‌ ಚಿಕಿತ್ಸೆಗಾಗಿ ಮರಳಿ ಬಿಜಿಎಸ್‌ ಆಸ್ಪತ್ರೆ ಸೇರಿದರು. ಇದೇ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಭದ್ರತಾ ಖಾತರಿದಾರರು ಸಿಗದ ಹಿನ್ನೆಲೆಯಲ್ಲಿ ಜಾಮೀನು ಷರತ್ತು ಪೂರೈಸಲು ಅವರಿಗೆ ಸಾಧ್ಯವಾಗಿಲ್ಲ.
Actor Darshan with his girlfriend Pavitra Gowda
Actor Darshan with his girlfriend Pavitra Gowda
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಸೋಮವಾರ ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಷರತ್ತುಗಳನ್ನು ಪೂರೈಸಿದರು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ಗೆ ಜಾಮೀನು ನೀಡಿ ಹೈಕೋರ್ಟ್‌ ಡಿಸೆಂಬರ್‌ 13ರಂದು ಆದೇಶಿಸಿತ್ತು. ಒಂದು ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತು ಪೂರೈಸಲು ಸೋಮವಾರ ನಗರದ 57ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಅವರ ಮುಂದೆ ದರ್ಶನ್‌ ಹಾಜರಾಗಿದ್ದರು.

ಈ ವೇಳೆ ದರ್ಶನ್‌ ಪರ ವಕೀಲ ಎಸ್‌ ಸುನೀಲ್‌ ಕುಮಾರ್‌ ಅವರು “ಹೈಕೋರ್ಟ್‌ ಆದೇಶದ ಪ್ರತಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಜೊತೆಗೆ, ದರ್ಶನ್‌ ಅವರಿಗೆ ಸಹೋದರ ದಿನಕರ್‌ ತೂಗುದೀಪ, ಸ್ನೇಹಿತ ಧನ್ವೀರ್‌ ಭದ್ರತಾ ಖಾತರಿ (ಶ್ಯೂರಿಟಿ) ನೀಡುತ್ತಿರುವುದಾಗಿ ತಿಳಿಸಿ, ಆ ಕುರಿತು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವೇಳೆ ನ್ಯಾಯಾಲಯದಲ್ಲಿ ದಿನಕರ್‌ ಮತ್ತು ಧನ್ವೀರ್‌ ಹಾಜರಿದ್ದರು. ನಂತರ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ಗೆ ದರ್ಶನ್‌ ಸಹಿ ಹಾಕಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಜಾಮೀನು ಮಂಜೂರಾತಿ ಆದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.

ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್‌ ಪರ ವಕೀಲರು ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್‌ ಹಿಂದಿರುಗಿಸಲು ಆದೇಶಿಸಿತು.

ಇದೇ ವೇಳೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ, ಮ್ಯಾನೇಜರ್‌ ಆರ್‌ ನಾಗರಾಜು, ಕಾರು ಚಾಲಕ ಎಂ ಲಕ್ಷ್ಮಣ್‌, ಗೆಳೆಯ ಪ್ರದೋಷ್‌ ರಾವ್‌ ಪರ ವಕೀಲರು ಒಂದು ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಹಾಗೂ ಇಬ್ಬರು  ಭದ್ರತಾ ಖಾತರಿ ಒದಗಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯವು ಈ ನಾಲ್ವರು ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿ ಜೈಲಿನ ಅಧಿಕಾರಿಗಳಿಗೆ ಆದೇಶ ಪ್ರತಿ ರವಾನಿಸಲು ಸೂಚಿಸಿತು.

ಪ್ರದೋಷ್‌ ಮತ್ತು ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನಾಗರಾಜು ಕಲಬುರಗಿ ಕಾರಾಗೃಹ, ಎಂ ಲಕ್ಷ್ಮಣ್‌ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಜೈಲಿನ ಅಧಿಕಾರಿಗಳಿಗೆ ಇ-ಮೇಲ್‌ ಮೂಲಕ ಆದೇಶ ಪ್ರತಿ ಕಳುಹಿಸಲಾಯಿತು.

ಇದೇ ಪ್ರಕರಣದಲ್ಲಿ ಜಾಮೀನು ಪಡೆದಿರುವ ಅನು ಕುಮಾರ್‌ ಹಾಗೂ ಜಗದೀಶ್‌ಗೆ ಭದ್ರತಾ ಖಾತರಿದಾರರು ಸಿಗದ ಹಿನ್ನೆಲೆಯಲ್ಲಿ ಜಾಮೀನು ಷರತ್ತು ಪೂರೈಸಲು ಅವರಿಗೆ ಸಾಧ್ಯವಾಗಿಲ್ಲ. ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಪವನ್, ರಾಘವೇಂದ್ರ, ನಂದೀಶ್ ಮತ್ತು ಧನರಾಜ್ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್‌ 18ಕ್ಕೆ ಮುಂದೂಡಿದೆ.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾಗೌಡ ಸೇರಿ ಏಳು ಮಂದಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು

ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ, ಮತ್ತೆ ಆಸ್ಪತ್ರೆಗೆ

ಜಾಮೀನು ಷರತ್ತು ಪೂರೈಸಲು ನಟ ದರ್ಶನ್‌ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ ಬಂದಿದ್ದರು. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಅವರು ನಡೆದಾಡಲು ಹಾಗೂ ನಿಲ್ಲಲು ಕಷ್ಟಪಡುತ್ತಿದ್ದರು. ನ್ಯಾಯಾಧೀಶರು ಬರುವ ಮುನ್ನವೇ ನ್ಯಾಯಾಲಯದ ಕೊಠಡಿಗೆ ವಕೀಲರು, ಕುಟುಂಬದ ಸದಸ್ಯರು, ಭದ್ರತಾ ಖಾತರಿದಾರರೊಂದಿಗೆ ಕುಂಟುತ್ತಲೇ ಬಂದ ದರ್ಶನ್‌, ಅಲ್ಲಿದ್ದ ಬೆಂಚ್‌ ಮೇಲೆ ಕೂತರು. ನ್ಯಾಯಾಧೀಶರು ಆಗಮಿಸಿದ ನಂತರ ಕಟಕಟೆಯಲ್ಲಿ ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ  ನಿಲ್ಲಲು ಕಷ್ಟವಾಗುತ್ತಿದ್ದರಿಂದ ಎರಡು ಹೆಜ್ಜೆ ಹಿಂದೆ ಸರಿದು ಕಟಕಟೆಗೆ ಒರಗಿ ನಿಂತರು. ಷರತ್ತು ಪೂರೈಕೆ ಪ್ರಕ್ರಿಯೆ ಮುಗಿಸಿದ ಬಳಿಕ ನ್ಯಾಯಾಲಯದಿಂದ ತನ್ನ ಕಾರಿನವರೆಗೆ ಕುಂಟುತ್ತಲೇ ನಡೆದು ಹೋದರು. ಚಿಕಿತ್ಸೆ ಪಡೆಯುವುದು ಬಾಕಿಯಿರುವುದರಿಂದ ದರ್ಶನ್‌ ಜಾಮೀನು ಷರತ್ತು ಪೂರೈಸಿ ನೇರವಾಗಿ ನ್ಯಾಯಾಲಯದಿಂದ ಬಿಜಿಎಸ್‌ ಆಸ್ಪತ್ರೆಗೆ ತೆರಳಿದರು.

Kannada Bar & Bench
kannada.barandbench.com