ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾಗೌಡ ಸೇರಿ ಏಳು ಮಂದಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು

ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಈಗಾಗಲೇ ಐವರಿಗೆ ಜಾಮೀನು ಮಂಜೂರಾಗಿದೆ. ಈಗ ಏಳು ಮಂದಿಗೆ ಜಾಮೀನು ಮಂಜೂರಾಗಿರುವುದರಿಂದ ಉಳಿದ ಐವರು ಜಾಮೀನು ಪಡೆಯಬೇಕಿದೆ.
Pavitra Gowda, Darshan & Karnataka HC
Pavitra Gowda, Darshan & Karnataka HC
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ, ಪ್ರದೋಷ್‌ ರಾವ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ.

ಸುದೀರ್ಘ ವಾದ-ಪ್ರತಿವಾದ ಆಲಿಸಿ ಡಿಸೆಂಬರ್‌ 9ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

Justice S Vishwajith Shetty
Justice S Vishwajith Shetty

ಆದೇಶದ ವೇಳೆ, ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದು ಪೀಠ ಹೇಳಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ದರ್ಶನ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಚಿತ್ರದುರ್ಗದ ರೇಣುಕಾಸ್ವಾಮಿಯು ನಟ ದರ್ಶನ್‌ ಗೆಳತಿ ಪವಿತ್ರಾಗೌಡರನ್ನು ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‌ರನ್ನು ವಿಲನ್‌ ರೀತಿಯಲ್ಲಿ ಕಾಣಲಾಗುತ್ತಿದೆ. ದರ್ಶನ್‌ ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೋ ಮಾಡಿ, ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಹೇಳುತ್ತಿದ್ದರೆ? ಇದು ದರ್ಶನ್‌ ನಡತೆಯಾಗಿದ್ದು, ದಾಖಲೆಯ ರೂಪದಲ್ಲಿ ಸಾಕ್ಷ್ಯವಿದೆ” ಎಂದು ಪ್ರತಿಪಾದಿಸಿದ್ದರು.

“ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲಿ ಜೂನ್‌ 12ರಂದು ತನಿಖಾಧಿಕಾರಿಗಳು ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಕೊಲೆಗೆ ಬಳಸಿದ ಶಸ್ತ್ರಾಸ್ತ್ರ ಎಂದು ಜಪ್ತಿ ಮಾಡಿದ್ದಾರೆ. ಜೂನ್‌ 9, 10 ಮತ್ತು 11ರಂದು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿಲ್ಲ. ಆದರೆ, ಜೂನ್‌ 9ರಂದೇ ಪಟ್ಟಣಗೆರೆ ಷೆಡ್‌ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೂನ್‌ 10ರಂದು ಆರೋಪಿಗಳನ್ನು ಬಂಧಿಸಿ, ಸ್ವಯಂಹೇಳಿಕೆ ದಾಖಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂನ್‌ 9ರಂದೇ ತಿಳಿದಿತ್ತು. ಅದಾಗ್ಯೂ, ಅವರನ್ನು ಪಂಚನಾಮೆ ಮಾಡದಂತೆ ಯಾರೂ ತಡೆದಿರಲಿಲ್ಲ. ಆನಂತರ ಸಾಕ್ಷಿಗಳ ಹೇಳಿಕೆಯಲ್ಲೂ ವಿಳಂಬವಾಗಿದೆ. ಇದಕ್ಕೆ ಕಾರಣವನ್ನು ತನಿಖಾಧಿಕಾರಿ ನೀಡಿಲ್ಲ” ಎಂದು ವಾದಿಸಿದ್ದರು.

“ರೇಣುಕಾಸ್ವಾಮಿಯ ವೃಷಣಕ್ಕೆ ತೀವ್ರ ಏಟು ಬಿದ್ದಿದ್ದರಿಂದ ರಕ್ತ ಸೋರಿಕೆಯಾಗಿದೆ. 14 ಆರೋಪಿಗಳ ಬಟ್ಟೆಯಲ್ಲಿ ರಕ್ತ ಕಲೆ ಇದೆ ಎಂದು ಹೇಳಿರುವುದು, ಅಲ್ಲಿ ರಕ್ತದ ಕಾರಂಜಿ ಇತ್ತು ಎನ್ನುವಂತಿದೆ. ಆದರೆ, ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು ಒಂದೇ ಒಂದು 2.5 ಸೆಂಟಿ ಮೀಟರ್‌ ಗಾಯ ಮಾತ್ರ. ಉಳಿದವು ತರಚಿದ ಮಾದರಿಯ ಗಾಯಗಳು. ಇದನ್ನು ವೈದ್ಯರು ತಮ್ಮ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. 10-15 ತರಚಿದ ಗಾಯಗಳಿಂದ ರಕ್ತ ಬಂದಿದೆ ಎಂದು ಹೇಳಬೇಕಿತ್ತು. ಆದರೆ, ತನಿಖಾಧಿಕಾರಿ ಪ್ರಶ್ನೆ ಎತ್ತಿದ ಮೇಲೆ ಆಗಸ್ಟ್‌ 23ರಂದು ರಕ್ತ ಸೋರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಆಧಾರವೇನು? ಇಲ್ಲಿ ಸಕಾರಣವಿರಬೇಕಿತ್ತು. ತನಿಖಾಧಿಕಾರಿಗೆ ನೆರವಾಗುವ ರೀತಿಯಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ರೂಪಿಸಿದ್ದಾರೆ. ಎಲ್ಲವನ್ನೂ ಸೃಷ್ಟಿಸಲಾಗಿದೆ” ಎಂದು ಆರೋಪಿಸಿದ್ದರು.

“76ನೇ ಸಾಕ್ಷಿ ಕಾವಲುಗಾರನ ಹೇಳಿಕೆ ದಾಖಲಿಸಿಲ್ಲ. ಹೇಳಿಕೆ ದಾಖಲಿಸಲು ಏಕೆ ತಡವಾಗಿದೆ ಎಂಬುದಕ್ಕೆ ತನಿಖಾಧಿಕಾರಿ ವಿವರಣೆ ನೀಡಿಲ್ಲ. ಜೂನ್‌ 8ರಂದು ರೇಣುಕಾಸ್ವಾಮಿ ಸಾವನ್ನಪ್ಪುದಕ್ಕೂ ಮುನ್ನ ಎರಡು ತಾಸು ಮುಂಚಿತವಾಗಿ ಊಟ ಸೇವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿಗೆ ಊಟ ತಂದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆಯೇ ವಿನಾ ಆತ ಅದನ್ನು ಸೇವಿಸಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ, ರೇಣುಕಾಸ್ವಾಮಿ ಕೊನೆಯ ಬಾರಿಗೆ ಊಟ ಮಾಡಿರುವುದು ಜೂನ್‌ 8ರ ಮಧ್ಯಾಹ್ನ 12ರ ಸುಮಾರಿಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ದುರ್ಗಾ ರೆಸ್ಟೋರೆಂಟ್‌ನಲ್ಲಿ ಎಂಬುದಕ್ಕೆ ಸಾಕ್ಷಿ ಇದೆ. ಇದಕ್ಕೆ ರೇಣುಕಾಸ್ವಾಮಿಯೇ ಹಣ ಪಾವತಿಸಿದ್ದಾರೆ. ಒಟ್ಟಾರೆ ಪ್ರಾಸಿಕ್ಯೂಷನ್‌ ವಾದ ತರ್ಕಹೀನ” ಎಂದು ವಾದಿಸಿದ್ದರು.

11ನೇ ಆರೋಪಿಯಾಗಿರುವ ದರ್ಶನ್‌ ವ್ಯವಸ್ಥಾಪಕ ಆರ್‌ ನಾಗರಾಜು ಪರವಾಗಿ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಯಾವ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ವಿಚಾರವನ್ನು ರಿಮ್ಯಾಂಡ್‌ ಅರ್ಜಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿಲ್ಲ. ಈ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸಿಲ್ಲ” ಎಂದು ಸುದೀರ್ಘವಾಗಿ ವಾದಿಸಿದ್ದರು. 

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಪ್ರಕರಣದ ಎಲ್ಲಾ ಆರೋಪಿಗಳ ಡಿಜಿಟಲ್‌ ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್‌ ಜೊತೆ ಕೆಲಸ ಮಾಡುತ್ತಿದ್ದವರೇ ಆಗಿದ್ದಾರೆ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ನಡೆದಿದೆ. ಮೃತ ರೇಣುಕಾಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್‌ ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ” ಎಂದು ವಾದಿಸಿದ್ದರು.

“ಮೊದಲನೇ ಆರೋಪಿಯಾಗಿರುವ ಪವಿತ್ರಾಗೌಡ ಅವರು ರೇಣುಕಾಸ್ವಾಮಿಯನ್ನು ದರ್ಶನ್‌ ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ತನ್ನ ಗೆಳತಿಗೆ ವಾಟ್ಸಾಪ್‌ ಕರೆ ಮಾಡಿ ತಿಳಿಸಿದ್ದಾರೆ. ರೇಣುಕಾಸ್ವಾಮಿಯ ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್‌ 37.40 ಲಕ್ಷ ರೂಪಾಯಿ ಹಣ ನೀಡಿರುವುದು ಮತ್ತು ಆನಂತರ ಬೇರೆ ಬೇರೆ ಆರೋಪಿಗಳಿಂದ ನಿರ್ದಿಷ್ಟ ಮೊತ್ತವನ್ನು ತನಿಖಾಧಿಕಾರಿಗಳು ಜಫ್ತಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದರ್ಶನ್‌, ಪವಿತ್ರಾಗೌಡ ಮತ್ತಿತರರು ಕಾರಿನಲ್ಲಿ ಬಂದಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿ, ಕರೆ ದಾಖಲೆಗಳಿವೆ. ರೇಣುಕಾಸ್ವಾಮಿ ಹತ್ಯೆಯು ಐಪಿಸಿ ಸೆಕ್ಷನ್‌ 302 ಅಡಿ ವ್ಯವಸ್ಥಿತ ಕೊಲೆಯೇ ವಿನಾ ಐಪಿಸಿ ಸೆಕ್ಷನ್‌ 304ರ ಅಡಿಯ ನರಹತ್ಯೆ ಅಪರಾಧವಾಗುವುದಿಲ್ಲ” ಎಂದು ವಾದಿಸಿದ್ದರು.

ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌, ದರ್ಶನ್‌ ಕಾರು ಚಾಲಕ ಎಂ ಲಕ್ಷ್ಮಣ್‌ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌, ಪ್ರದೋಶ್‌ ಪರವಾಗಿ ವಕೀಲ ಕೆ ದಿವಾಕರ್‌ ವಾದ ಮಂಡಿಸಿದ್ದರು.

Also Read
ರೇಣುಕಾಸ್ವಾಮಿ ಹತ್ಯೆ: ಏಳು ಆರೋಪಿಗಳ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌; ದರ್ಶನ್‌ ವೈದ್ಯಕೀಯ ಜಾಮೀನು ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಜೂನ್‌ 11ರಂದು ದರ್ಶನ್‌ ಮತ್ತಿತರರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್‌ 22ರಿಂದ ದರ್ಶನ್‌ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್‌ಗೆ ಅಕ್ಟೋಬರ್‌ 30ರಂದು ಹೈಕೋರ್ಟ್‌ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅಂದಿನಿಂದ ಅವರು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಬೆನ್ನುಹುರಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಕ್ಟೋಬರ್‌ 14ರಂದು ವಿಚಾರಣಾಧೀನ ನ್ಯಾಯಾಲಯವು ದರ್ಶನ್‌, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್‌ ಅಲಿಯಾಸ್‌ ರವಿ, 13ನೇ ಆರೋಪಿ ದೀಪಕ್‌ ಕುಮಾರ್‌ ಅಲಿಯಾಸ್‌ ದೀಪಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್‌ ನಾಯಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿ 17 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ. ಈಗ ಏಳು ಮಂದಿಗೆ ಜಾಮೀನು ಮಂಜೂರಾಗಿರುವುದರಿಂದ ಇನ್ನಷ್ಟೇ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಧನರಾಜ್‌ ಡಿ ಅಲಿಯಾಸ್‌ ರಾಜು, ವಿ ವಿನಯ್‌ಗೆ ಜಾಮೀನು ಮಂಜೂರಾಗಬೇಕಿದೆ.

Kannada Bar & Bench
kannada.barandbench.com