
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್, ಆರ್ ನಾಗರಾಜು ಮತ್ತು ಎಂ ಲಕ್ಷ್ಮಣ್ ಅವರು ಜೈಲು ಕೈಪಿಡಿಯಲ್ಲಿ ಉಲ್ಲೇಖಿಸಿರುವಂತೆ ಹಾಸಿಗೆ, ದಿಂಬು, ಹೊದಿಕೆ ಮತ್ತು ಉಡುಪು ಒದಗಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧಿತ ವಾದವನ್ನು ಆಲಿಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಜೈಲು ಪ್ರಾಧಿಕಾರಕ್ಕೆ ಪ್ರತಿಕ್ರಿಯಿಸಲು ಸೂಚಿಸಿದೆ.
ಜೈಲು ಕೈಪಿಡಿಯ ಪ್ರಕಾರ ಮೂಲಸೌಕರ್ಯ ಕಲ್ಪಿಸುವಂತೆ ಕೋರಿ ದರ್ಶನ್, ನಾಗರಾಜು ಮತ್ತು ಲಕ್ಷ್ಮಣ್ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರಾದ ಈರಪ್ಪಣ್ಣ ಪವಡಿ ನಾಯ್ಕ್ ನಡೆಸಿದರು.
ಅರ್ಜಿದಾರರ ಪರ ವಕೀಲ ಎಸ್ ಸುನೀಲ್ ಕುಮಾರ್ ಅವರು “ಜೈಲು ಕೈಪಿಡಿಯ ಪ್ರಕಾರ ವಿಚಾರಣಾಧೀನ ಕೈದಿಗೆ ನಿರ್ದಿಷ್ಟ ಸೌಲಭ್ಯ ಕಲ್ಪಿಸಬೇಕು. ಹೀಗಾಗಿ, ದರ್ಶನ್ ಅವರಿಗೆ ಹಾಸಿಗೆ, ದಿಂಬು, ಹೊದಿಕೆ ಮತ್ತು ಉಡುಪು ಒದಗಿಸಬೇಕು” ಎಂದು ಕೋರಿದರು.
ಇದನ್ನು ಆಲಿಸಿದ ಪೀಠವು ಪ್ರಾಸಿಕ್ಯೂಷನ್ ತನ್ನ ವಾದ ಮಂಡಿಸಲು ಕಾಲಾವಕಾಶ ನೀಡಲಾಗುವುದು ಎಂದರು. ಇದಕ್ಕೆ ಆಕ್ಷೇಪಿಸಿದ ಸುನೀಲ್ ಕುಮಾರ್ ಅವರು “ಜೈಲು ಕೈಪಿಡಿಯ ಪ್ರಕಾರ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಪ್ರಾಸಿಕ್ಯೂಷನ್ ವಾದ ಕೇಳಬೇಕಿಲ್ಲ” ಎಂದರು. ಅದಾಗ್ಯೂ, ಜೈಲು ಪ್ರಾಧಿಕಾರಕ್ಕೆ ಪ್ರತಿಕ್ರಿಯಿಸಲು ನ್ಯಾಯಾಲಯ ಸೂಚಿಸಿತು.
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯವು ಸೆಪ್ಟೆಂಬರ್ 2ಕ್ಕೆ ಆದೇಶ ಕಾಯ್ದಿರಿಸಿದೆ.
ಬಿಎನ್‌ಎಸ್‌ಎಸ್ ಜಾರಿಗೆ ಬಂದ ಬಳಿಕ ಪ್ರಕರಣ ನಡೆದಿದ್ದರೂ ಸಿಆರ್‌ಪಿಸಿ ಅಡಿ ಸಂಜ್ಞೇ ಪರಿಗಣಿಸಿರುವುದು, ಆರೋಪ ಪಟ್ಟಿ ಸಲ್ಲಿಕೆ ಮಾಡಿರುವುದು ಸೇರಿ ಎಲ್ಲಾ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪವಿತ್ರಾ ಪರ ವಕೀಲ ಎಸ್ ಬಾಲನ್ ಅವರು ವಾದಿಸಿದ್ದಾರೆ.
ನಟ ದರ್ಶನ್, ಆರ್ ನಾಗರಾಜು, ಪವನ್, ಲಕ್ಷ್ಮಣ್, ಪ್ರದೋಶ್ ಸೇರಿ ಇತರೆ ಆರೋಪಿಗಳನ್ನು ಈ ಹಿಂದಿನ ಆದೇಶದ ಪ್ರಕಾರ ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವ ಸಂಬಂಧ ನ್ಯಾಯಾಲಯದ ಅನುಮತಿ ಕೋರಿ ಜೈಲು ಪ್ರಾಧಿಕಾರವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಆರೋಪಿಗಳ ಪರ ವಕೀಲರು ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ನ್ಯಾಯಾಲಯ ನಡೆಸಲಿದೆ. ಈ ಹಿಂದೆ ನಟ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹ, ಪ್ರದೋಶ್ ಅವರನ್ನು ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಇರಿಸಲಾಗಿತ್ತು.