
ನಟ ದರ್ಶನ್ ಹಿನ್ನೆಲೆ, ಪ್ರಭಾವ, ಜೈಲಿನಲ್ಲಿನ ದುರ್ನಡತೆ ಮತ್ತು ಅವರ ಮೇಲಿನ ಗಂಭೀರ ಆರೋಪಗಳು ಆತನನ್ನು ಜಾಮೀನಿಗೆ ಅನರ್ಹನನ್ನಾಗಿಸಿವೆ. ವಿವೇಚನಾರಹಿತವಾಗಿ ತಪ್ಪಿನ ಮುಂದುವರಿದ ಭಾಗವಾಗಿ ದರ್ಶನ್‌ಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವು ಕಾನೂನಿನಡಿ ಊರ್ಜಿತವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿ ನುಡಿದಿದೆ.
ಕರ್ನಾಟಕ ಹೈಕೋರ್ಟ್ 2024ರ ಡಿಸೆಂಬರ್ 13ರಂದು ನಟ ದರ್ಶನ್, ಪವಿತ್ರಾ ಗೌಡ, ಅನುಕುಮಾರ್, ಪವನ್, ಲಕ್ಷ್ಮಣ್, ಪ್ರದೋಶ್ ರಾವ್, ವಿನಯ್ ಅವರಿಗೆ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಗುರುವಾರ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ವಿಭಾಗೀಯ ಪೀಠವು ಬದಿಗೆ ಸರಿಸಿತ್ತು. ತನ್ನ ತೀರ್ಪಿನಲ್ಲಿ ಪೀಠವು ದರ್ಶನ್ ಜಾಮೀನಿಗೆ ಅರ್ಹರಲ್ಲ ಎನ್ನುವುದನ್ನು ವಿಷದವಾಗಿ ಹೇಳಿದೆ. ಹೈಕೋರ್ಟ್‌ನ ಆದೇಶವು ವಿಕ್ಷಿಪ್ತ ಹಾಗೂ ಅಸಮಂಜಸವಾದ ದೋಷಗಳಿಂದ ಕೂಡಿರುವುದನ್ನು ಪಟ್ಟಿ ಮಾಡಿದೆ.
ಜೈಲಿನಲ್ಲಿದ್ದಾಗಲೇ ರಾಜಾತಿಥ್ಯ ಪಡೆದಿದ್ದ ದರ್ಶನ್‌ನ ಪ್ರಭಾವ, ಜನಪ್ರಿಯತೆ, ರಾಜಕೀಯ, ಹಣಕಾಸಿನ ಬಲದ ಬಗ್ಗೆ ತನ್ನ ತೀರ್ಪಿನಲ್ಲಿ ನಿಚ್ಚಳವಾಗಿ ಉಲ್ಲೇಖಿಸಿದೆ. ಜೈಲು ವ್ಯವಸ್ಥೆಯನ್ನೇ ಒಬ್ಬ ವ್ಯಕ್ತಿ ಬುಡಮೇಲು ಮಾಡಬಹುದಾದರೆ, ಸಾಕ್ಷಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ಅವರನ್ನು ಪ್ರಭಾವಿಸುವ ಹಾಗೂ ನ್ಯಾಯದಾನದ ದಿಕ್ಕನ್ನು ತಿರುಚುವ ಅಪಾಯವು ನೈಜವೂ ಮತ್ತು ಸನ್ನಿಹಿತವೂ ಆಗಿರುತ್ತದೆ ಅಭಿಪ್ರಾಯಪಟ್ಟಿದೆ.
ತಾರೆಗಳು ಸಾಮಾಜಿಕ ರಾಯಭಾರಿಗಳಾಗಿದ್ದು, ಹೊಣೆಗಾರಿಕೆ ಹೆಚ್ಚಿನ ಮಟ್ಟದಲ್ಲಿರುತ್ತದೆಯೇ ವಿನಾ ಕಡಿಮೆ ಇರುವುದಿಲ್ಲ. ಅವರು ತಮ್ಮ ಜನಪ್ರಿಯತೆ ಮತ್ತು ಸಾರ್ವಜನಿಕ ಉಪಸ್ಥಿತಿಯಿಂದ ಜನರ ನಡವಳಿಕೆ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಪರಿಣಾಮಕಾರಿಯಾದ ಪ್ರಭಾವ ಹೊಂದಿರುತ್ತಾರೆ. ಪಿತೂರಿ ಮತ್ತು ಕೊಲೆಯಂಥ ಗಂಭೀರ ಆರೋಪಗಳನ್ನು ಹೊಂದಿರುವ ವ್ಯಕ್ತಿಗಳಿಗೆ ವಿನಾಯಿತಿ ನೀಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ಜನರ ನಂಬಿಕೆಗೆ ಮಸುಕು ಕವಿಯಲಿದೆ.
ಜೈಲಿನಲ್ಲಿರುವ ಆಸ್ಪತ್ರೆಯು ಸೂಕ್ತ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ದರ್ಶನ್ ವಿಫಲರಾಗಿದ್ದಾರೆ. ತುರ್ತು, ಗಂಭೀರತೆ ಮತ್ತು ಕಸ್ಟಡಿಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಕಷ್ಟವಾಗುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾರಣಗಳನ್ನು ನೀಡದೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದು ವಿಕ್ಷಿಪ್ತವೂ ಮತ್ತು ಕಾನೂನುಬದ್ಧವಾಗಿ ಸಮರ್ಥನೀಯವಲ್ಲದ ಜಾಮೀನು ಆದೇಶವಾಗಿದ್ದು, ಇದನ್ನು ರದ್ದುಗೊಳಿಸಬೇಕಿದೆ.
ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ರೇಣುಕಾಸ್ವಾಮಿಯು ಪವಿತ್ರಾಗೌಡಗೆ ಆಕ್ಷೇಪಾರ್ಹವಾದ ಸಂದೇಶಗಳನ್ನು ಕಳುಹಿಸಿದ್ದ ಕಾರಣಕ್ಕೆ ಆಕೆಯ ಘನತೆಯನ್ನು ಕಾಪಾಡಲು ತಾರೆಯಾದ ದರ್ಶನ್ ಪಿತೂರಿ ನಡೆಸಿ ಕೊಲೆ ಮಾಡಿ, ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ. ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ, ಕಸ್ಟಡಿಯಲ್ಲಿಟ್ಟುಕೊಂಡು ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಇದಕ್ಕಾಗಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120B, 302, 201 ಮತ್ತು 204 ಅನ್ವಯಿಸಲಾಗಿದೆ. ದಾಖಲೆಯಲ್ಲಿನ ಸಾಕ್ಷಿಗಳನ್ನು ನೋಡಿದರೆ ಇದು ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ. ಇಲ್ಲಿ ಆರೋಪಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಲ್ಲದೇ ವ್ಯವಸ್ಥಿತವಾಗಿ ಸಾಕ್ಷಿ ನಾಶಪಡಿಸುವ ಯತ್ನ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಅಳಿಸಿ ಹಾಕಿರುವುದು, ಸಹ ಆರೋಪಿಗಳಿಗೆ ಲಂಚ ನೀಡಿ ಅವರನ್ನು ಆರೋಪಿಗಳನ್ನಾಗಿಸುವ ಕೆಲಸ ಮಾಡಿರುವುದು ಮತ್ತು ಸ್ಥಳೀಯರು ಮತ್ತು ಪೊಲೀಸರನ್ನು ಬಳಕೆ ಮಾಡಿಕೊಂಡು ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡಲಾಗಿದೆ.
ದರ್ಶನ್ ಅವರು 10 ಮತ್ತು 14ನೇ ಆರೋಪಿ ಪ್ರದೋಶ್ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲು ಪ್ರಯತ್ನಿಸಿದ್ದಾರೆ. ಸಹ ಆರೋಪಿಗಳ ಪ್ರಕಾರ ಕೃತ್ಯವನ್ನು ಮುಚ್ಚಿಡಲು ಹಣ ಪಾವತಿಸಿದ್ದಾರೆ. ಪೊಲೀಸರ ಜೊತೆ ಸಂಪರ್ಕ ಸಾಧಿಸಿ, ಎಫ್‌ಐಆರ್ ದಾಖಲು ಮತ್ತು ಮರಣೋತ್ತರ ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದಾರೆ. ಪವಿತ್ರಾಗೌಡ ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಡಿಲೀಟ್ ಮಾಡಿಸಲಾಗಿದೆ. ಜಾಮೀನು ಪಡೆದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ನಿರಂತರ ಪ್ರಭಾವ ಹೊಂದಿದ್ದಾರೆ.
ದರ್ಶನ್ ಅವರು ಜಾಮೀನು ಪಡೆದ ಬಳಿಕ ತನಗೆ ಕಲ್ಪಿಸಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾತ್ರ ಮಾಡಿಕೊಳ್ಳುತ್ತಿಲ್ಲ, ತನಿಖೆಯ ದಾರಿತಪ್ಪಿಸುವ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ದರ್ಶನ್ ವೈದ್ಯಕೀಯ ದಾಖಲೆಗಳು, ಆನಂತರ ಅವರು ನಡೆದುಕೊಂಡಿರುವ ರೀತಿಯನ್ನು ನೋಡಿದರೆ ಅದು ದಾರಿ ತಪ್ಪಿಸುವಂತಿದೆ.
28.11.2024ರ ದರ್ಶನ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ವೈದ್ಯಕೀಯ ಸಾರಾಂಶವನ್ನು ನೋಡಿದರೆ ಅವರಿಗೆ ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆ ಕಾಣುತ್ತವೆ. ಭವಿಷ್ಯದಲ್ಲಿ ಅವರಿಗೆ ಸಿಎಬಿಜಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ, ವೈದ್ಯಕೀಯ ವರದಿಯಲ್ಲಿ ತಕ್ಷಣಕ್ಕೆ ವೈದ್ಯಕೀಯ ಮಧ್ಯಪ್ರವೇಶ ಮತ್ತು ಜೀವಕ್ಕೆ ಹಾನಿಯಾಗುವ ಪರಿಸ್ಥಿತಿಯಿಂದಾಗಿ ಬಿಡುಗಡೆ ಸೂಚಿಸುವುದಿಲ್ಲ. ಜೈಲಿನಲ್ಲಿನ ವೈದ್ಯಕೀಯ ವ್ಯವಸ್ಥೆ ಅವರ ಆರೋಗ್ಯ ನೋಡಿಕೊಳ್ಳಲಾಗದ ಸ್ಥಿತಿ ಕಾಣುವುದಿಲ್ಲ. ಹೀಗಾಗಿ, ವೈದ್ಯಕೀಯ ಜಾಮೀನು ನೀಡುವ ಯಾವುದೇ ಅಗತ್ಯ ಕಾಣುವುದಿಲ್ಲ.
ಹೈಕೋರ್ಟ್ ಸೃಷ್ಟಿಸಿರುವ ಅನಿಸಿಕೆಗೆ ವಿರುದ್ಧವಾಗಿ ದರ್ಶನ್ ಅವರು ಮಹತ್ವದ ಸಾಮಾಜಿಕ ಕಾರ್ಯಗಳು ಸೇರಿ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಯಾವುದೇ ಗಂಭೀರ ತೆರನಾದ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ತಪ್ಪು ಮತ್ತು ಸುಳ್ಳು ಕಾರಣಗಳನ್ನು ನೀಡಿ ಜಾಮೀನು ಪಡೆದಿದ್ದು, ದರ್ಶನ್ ಜಾಮೀನು ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಆಧಾರವಾಗಿದೆ.
ಆರೋಪದ ಸ್ವರೂಪ, ಪೂರ್ವಯೋಜಿತ ಕೊಲೆ ಮತ್ತು ಪಿತೂರಿ ಆರೋಪಗಳನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಲು ಹೈಕೋರ್ಟ್ ವಿಫಲವಾಗಿದ್ದು, ಸಿಸಿಟಿವಿ ವಿಡಿಯೋ ತುಣುಕು, ಕರೆ ದಾಖಲೆ, ವಿಧಿ ವಿಜ್ಞಾನ ವರದಿಯಲ್ಲಿ ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿರುವುದು, ಕೊಲೆ ನಡೆಯುವುದಕ್ಕೂ ಮುನ್ನ ಮತ್ತು ಆನಂತರ ದರ್ಶನ್ ಅವರು ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪಿತೂರಿ ನಡೆಸಿ, ಕೃತ್ಯ ಮುಚ್ಚಿಡಲು ಯತ್ನಿಸಿರುವುದು ಸೇರಿ ಸಾಂದರ್ಭಿಕ ಸಾಕ್ಷಿಗಳನ್ನು ಪರಿಶೀಲಿಸಿಲ್ಲ. ಆದರೆ, ಲಭ್ಯವಿರುವ ದಾಖಲೆಗಳನ್ನು ವಿಶ್ಲೇಷಿಸದೇ ಈ ಕೃತ್ಯದಲ್ಲಿ ದರ್ಶನ್ ಅವರ ನೇರ ಪಾತ್ರವಿಲ್ಲ ಮತ್ತು ಮೇಲ್ನೋಟಕ್ಕೆ ಪ್ರಕರಣವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇದು ವಿವೇಚನಾರಹಿತವಾಗಿ ನಡೆದುಕೊಂಡಿರುವುದಕ್ಕೆ ಸಮನಾಗಿದ್ದು, ಕಾನೂನಿನ ಅಡಿ ಜಾಮೀನು ಆದೇಶವನ್ನು ನಿಲ್ಲದಂತೆ ಮಾಡಿದೆ.
ದರ್ಶನ್‌ಗೆ ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ಆತ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಲ್ಲ ಎಂದು ಹೇಳಿದೆ. ಅದೇ ಸಮಯದಲ್ಲಿ ಅತ್ಯಂತ ಪ್ರಮುಖ ಘಟ್ಟದಲ್ಲಿ ಇತರೆ ಆರೋಪಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದರು ಎಂಬುದನ್ನು ಒಪ್ಪಿಕೊಂಡಿದೆ. ಘಟನಾ ನಂತರ ಮತ್ತು ರೇಣುಕಾಸ್ವಾಮಿ ಕೊಲೆ ಕೃತ್ಯಪೂರ್ವ ದ್ವೇಷವನ್ನು ಪರಿಗಣಿಸಿದ್ದು, ಗಂಭೀರವಾದ ಉದ್ದೇಶವಿರಲಿಲ್ಲ ಎಂದು ಹೇಳಿದೆ. ಹೈಕೋರ್ಟ್ ಆದೇಶದಲ್ಲಿನ ಈ ವೈರುಧ್ಯಗಳು ಜಾಮೀನಿನ ಸಾಧ್ಯತೆಯನ್ನು ತಟಸ್ಥಗೊಳಿಸಲಿದ್ದು, ಕಾನೂನುಬದ್ಧವಾಗಿ ಸ್ಥಿರವಾದ ತಾರ್ಕಿಕ ವಿವರಣೆ ನೀಡದೇ ಆದೇಶ ಮಾಡಲಾಗಿದೆ.
ಹಾಲಿ ಪ್ರಕರಣದಲ್ಲಿ, ಆರೋಪದ ಗಂಭೀರತೆ ಮತ್ತು ಪ್ರಕರಣದ ವ್ಯಾಪಕ ಸಾಮಾಜಿಕ ಪ್ರಭಾವದ ಹೊರತಾಗಿಯೂ, ಹೈಕೋರ್ಟ್‌ನ ಆದೇಶವು ಅಂತಹ ಯಾವುದೇ ಉನ್ನತ ಪರಿಶೀಲನೆ ಅಥವಾ ಎಚ್ಚರಿಕೆಯ ವಿಧಾನವನ್ನು ಪ್ರತಿಬಿಂಬಿಸಲು ವಿಫಲವಾಗಿದೆ.
ಸಂವಿಧಾನದ 14ನೇ ವಿಧಿಯ ಅಡಿ ಎಲ್ಲರೂ ಸಮಾನರಾಗಿದ್ದು, ಯಾರು ಎಷ್ಟೇ ಶ್ರೀಮಂತರು, ಪ್ರಭಾವಿಗಳು ಅಥವಾ ಜನಪ್ರಿಯತೆ ಹೊಂದಿದ್ದರೂ ಕಾನೂನಿನ ನಿಷ್ಠುರತೆಯಿಂದ ಪಾರಾಗಲಾಗದು. ತಾರಾ ವರ್ಚಸ್ಸು ಯಾವುದೇ ಆರೋಪಿಯನ್ನು ಕಾನೂನಿಗಿಂತ ಮಿಗಿಲಾಗಿಸುವುದಿಲ್ಲ ಅಥವಾ ಜಾಮೀನು ನೀಡಿಕೆಯಲ್ಲಿ ವಿಶೇಷ ಆತಿಥ್ಯಕ್ಕೆ ಅರ್ಹರನ್ನಾಗಿಸುವುದಿಲ್ಲ.
ಜನಪ್ರಿಯತೆಯನ್ನು ವಿನಾಯಿತಿಯ ಗುರಾಣಿಯನ್ನಾಗಿ ಬಳಕೆ ಮಾಡಲಾಗದು. ಜಾಮೀನು ನೀಡಿಕೆಯು ತನಿಖೆ ಅಥವಾ ವಿಚಾರಣೆಯ ಮೇಲೆ ನೈಜವಾಗಿ ಪೂರ್ವಾಗ್ರಹ ಉಂಟು ಮಾಡುವಾಗ ಈ ನ್ಯಾಯಾಲಯ ಈ ಹಿಂದೆ ಹೇಳಿರುವಂತೆ ಪ್ರಭಾವ, ಸಂಪನ್ಮೂಲ ಮತ್ತು ಸಾಮಾಜಿಕ ಸ್ಥಾನಮಾನಗಳು ಆಧಾರವಾಗುವುದಿಲ್ಲ.
ದರ್ಶನ್ ಸ್ಥಾನಮಾನವನ್ನು ಪರಿಗಣಿಸಿ ಹೈಕೋರ್ಟ್ ತನ್ನ ವ್ಯಾಪ್ತಿ ಬಳಕೆ ಮಾಡಿರುವುದು ತಪ್ಪನ್ನು ಮುಂದುವರಿಸಿರುವುದು ಜಾಮೀನು ರದ್ದತಿಗೆ ನಾಂದಿಯಾಗಿದೆ. ದರ್ಶನ್ ಅವರು ಸಾಮಾನ್ಯ ವಿಚಾರಣಾಧೀನ ಕೈದಿಯಲ್ಲ. ಆತನಿಗೆ ತಾರಾ ಸ್ಥಾನಮಾನವಿದ್ದು, ಅಪಾರ ಜನಬೆಂಬಲ, ರಾಜಕೀಯ ಪ್ರಭಾವ ಮತ್ತು ಹಣಕಾಸಿನ ಬಲವಿದೆ. ಜೈಲಿನಲ್ಲಿನ ರಾಜಾತಿಥ್ಯ, ಜೈಲು ನಿಯಮಗಳ ಉಲ್ಲಂಘನೆ ಮತ್ತು ಸೌಲಭ್ಯಗಳ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳು ನೋಡಿದರೆ ಕಸ್ಟಡಿಯಲ್ಲಿದ್ದಾಗಲು ವ್ಯವಸ್ಥೆಯನ್ನು ಮೀರಿ ನಿಲ್ಲುವ ಶಕ್ತಿ ಕಾಣುತ್ತದೆ. ಜೈಲು ವ್ಯವಸ್ಥೆಯನ್ನೇ ಒಬ್ಬ ವ್ಯಕ್ತಿ ಬುಡಮೇಲು ಮಾಡಬಹುದಾದರೆ, ಸಾಕ್ಷಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ಅವರನ್ನು ಪ್ರಭಾವಿಸುವ ಹಾಗೂ ನ್ಯಾಯದಾನದ ದಿಕ್ಕನ್ನು ತಿರುಚುವ ಅಪಾಯವು ನೈಜವೂ ಮತ್ತು ಸನ್ನಿಹಿತವೂ ಆಗಿರುತ್ತದೆ.
ಜಾಮೀನು ದೊರೆತ ತಕ್ಷಣ ದರ್ಶನ್ ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವುದು ಪ್ರಾಸಿಕ್ಯೂಷನ್ ಸಾಕ್ಷಿಗಳ ಜೊತೆ ವೇದಿಕೆ ಹಂಚಿಕೊಂಡಿರುವುದು ಮತ್ತು ಪೊಲೀಸ್ ಸಾಕ್ಷಿಗಳ ಮೇಲೆ ಪ್ರಭಾವ ಮುಂದುವರಿಕೆಯು ನ್ಯಾಯದಾನ ಪ್ರಕ್ರಿಯೆಯ ಪ್ರಾಮಾಣಿಕತೆಗೆ ಬೆದರಿಕೆ ಎಂಬುದನ್ನು ಅವರಿಗೆ ಕಲ್ಪಿಸಿರುವ ಸ್ವಾತಂತ್ರ್ಯ ಹೇಳುತ್ತದೆ.