ಉತ್ತಮ ಹೊದಿಕೆ ಕೊಡಿಸಲು ನಿರ್ದೇಶನ ಕೋರಿದ ನಟ ದರ್ಶನ್‌; ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ತರಾಟೆ

ಜೈಲಿನಲ್ಲಿ ತುಂಬಾ ಚಳಿಯಿದೆ. ಜೈಲು ಅಧಿಕಾರಿಗಳು ನೀಡಿರುವ ಹೊದಿಕೆ ಚಳಿ ತಡೆಯುತ್ತಿಲ್ಲ. ಇದರಿಂದ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ. ಇದರಿಂದ ಚಿಕ್ಕ ಹೊದಿಕೆಯನ್ನೇ ಸುತ್ತಿಕೊಂಡು ಜೈಲಿನ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ ಎಂದ ದರ್ಶನ್‌.
Actor Darshan
Actor Darshan
Published on

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಳಿ ಹೆಚ್ಚಿದ್ದು, ಸೂಕ್ತ ಹೊದಿಕೆಯಿಲ್ಲದ ಕಾರಣ ರಾತ್ರಿ ವೇಳೆ ನಿದ್ದೆ ಮಾಡಲಾಗುತ್ತಿಲ್ಲ. ಚಿಕ್ಕ ಹೊದಿಕೆ ಸುತ್ತಿಕೊಂಡು ಜೈಲು ಕೋಣೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಬೆಂಗಳೂರಿನ ಸತ್ರ ನ್ಯಾಯಾಲಯದ ಮುಂದೆ ಗುರುವಾರ ಅಳಲು ತೋಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಐ ಪಿ ನಾಯಕ್‌ ಅವರ ಪೀಠ ನಡೆಸಿತು. ಈ ವೇಳೆ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಯಿತು. ಉಳಿದಂತೆ ಜಾಮೀನು ಮೇಲಿರುವ ಎಲ್ಲಾ 11 ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು.

ಆರೋಪಿಗಳ ಹಾಜರಾತಿಯನ್ನು ನ್ಯಾಯಾಧೀಶರು ದಾಖಲಿಸಿಕೊಂಡರು. ಈ ವೇಳೆ ಆರೋಪಿ ನಾಗರಾಜು ಮಾತನಾಡಿ, ಸ್ವಾಮಿ... ಒಂದು ವಿಷಯನ್ನು ನಿಮಗೆ ವಿನಂತಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ಅದಕ್ಕೆ ನ್ಯಾಯಮೂರ್ತಿಗಳು, ಏನು? ಎಂದು ಕೇಳಿದರು.

ಆಗ ನಾಗರಾಜು ಅವರು “ಜೈಲಿನ ಆವರಣದಲ್ಲಿ ತುಂಬಾ ಚಳಿಯಿದೆ. ಜೈಲಿನ ಅಧಿಕಾರಿಗಳು ನೀಡಿರುವ ಹೊದಿಕೆಯು ಚಳಿ ತಡೆಯುತ್ತಿಲ್ಲ. ಮನೆಯಿಂದ ತಂದ ಹೊದಿಕೆಯನ್ನೂ ಪಡೆಯಲು ಸಹ ಅನುಮತಿ ನೀಡುತ್ತಿಲ್ಲ” ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

ಆಗ ನಟ ದರ್ಶನ್‌ ಅವರು “ಸ್ವಾಮಿ... ಜೈಲಿನಲ್ಲಿ ತುಂಬಾ ಚಳಿಯಿದೆ. ಜೈಲು ಅಧಿಕಾರಿಗಳು ನೀಡಿರುವ ಹೊದಿಕೆಗಳು ಚಳಿ ತಡೆಯುತ್ತಿಲ್ಲ. ಇದರಿಂದ ರಾತ್ರಿ ಮಲಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಚಿಕ್ಕ ಹೊದಿಕೆಯನ್ನೇ ಸುತ್ತಿಕೊಂಡು ಜೈಲು ಕೋಣೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ. ದಯವಿಟ್ಟು ಚಳಿಯುನ್ನು ತಡೆಯುವಂತಹ ಉತ್ತಮ ಹೊದಿಕೆ ಕೊಡಲು ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ಕೋರಿದರು.

ಆಗ ನ್ಯಾಯಾಧೀಶರು “ಆರೋಪಿಗಳು ಕೇಳುತ್ತಿರುವುದು ಏನ್ರಿ? ರತ್ನ ಕಂಬಳಿ ಕೇಳುತ್ತಿದ್ದಾರೆಯೇ? ಜೈಲಿನ ಕೈಪಿಡಿಯಲ್ಲಿ ಅವಕಾಶವಿರುವ ಸೌಲಭ್ಯಗಳನ್ನು ಆರೋಪಿಗಳಿಗೆ ಕೊಡಿ. ಈ ವಿಚಾರದಲ್ಲಿ ನ್ಯಾಯಾಲಯವು ಪದೇ ಪದೇ ಸೂಚನೆ ನೀಡಬೇಕಾ? ಎಂದು ಪ್ರಶ್ನಿಸುವ ಮೂಲಕವೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದ ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ  ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿದ ನ್ಯಾಯಾಧೀಶರು, ಅಂದು ಪ್ರಕರಣದ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಿರಬೇಕು ಎಂದು ಸೂಚಿಸಿದರು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಸೇರಿ 17 ಮಂದಿ ವಿರುದ್ಧ ಆರೋಪ ನಿಗದಿಗೊಳಿಸಿದ ಬೆಂಗಳೂರು ನ್ಯಾಯಾಲಯ

ಈ ವೇಳೆ ಆದಾಯ ತೆರಿಗೆ ಇಲಾಖೆಯ ಪರ ವಕೀಲರು, ಪ್ರಕರಣ ಸಂಬಂಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿದರು. ತನಿಖಾಧಿಕಾರಿಗಳ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು, ಆದಾಯ ತೆರಿಗೆ ಇಲಾಖೆಯ ಅರ್ಜಿಗೆ ತಮ್ಮದೇನು ತಕರಾರು ಇಲ್ಲ ಎಂದರು.

ಅದಕ್ಕೆ ಆಕ್ಷೇಪಿಸಿದ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌ ಅವರು ಆದಾಯ ತೆರಿಗೆ ಇಲಾಖೆಗೂ ಈ ಪ್ರಕರಣದಲ್ಲಿ ಜಫ್ತಿ ಮಾಡಲಾಗಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ನೀಡಬಾರದು ಎಂದು ಕೋರಿದರು.

Kannada Bar & Bench
kannada.barandbench.com