ನಟಿ ರಮ್ಯಾಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ಇಬ್ಬರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

ಓಬಣ್ಣ ಎಂಬಾತ ‘ರಾಬರ್ಟ್‌ ರಾಘವ 5ಡಿ ಬಾಸ್‌ ಟಿಜೆ’ ಹಾಗೂ ಗಂಗಾಧರ್‌ ಎಂಬಾತ ‘ದರ್ಶನ್‌ ತೂಗುದೀಪ್‌’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಗಳಿಂದ ರಮ್ಯಾಗೆ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ನಟಿ ರಮ್ಯಾಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ಇಬ್ಬರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
Published on

ಮಾಜಿ ಸಂಸದೆ ನಟಿ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಈಚೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಬಂಧಿತರಾದ ಗಂಗಾಧರ್‌ ಮತ್ತು ಟಿ ಓಬಣ್ಣ ಅವರನ್ನು 45ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಗಣಪತಿ ಭಟ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಓಬಣ್ಣ ಎಂಬಾತ ‘ರಾಬರ್ಟ್‌ ರಾಘವ 5ಡಿ ಬಾಸ್‌ ಟಿಜೆ’ ಹಾಗೂ ಗಂಗಾಧರ್‌ ಎಂಬಾತ ‘ದರ್ಶನ್‌ ತೂಗುದೀಪ್‌’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಗಳಿಂದ ರಮ್ಯಾಗೆ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಟಿ ರಮ್ಯಾ ಹಂಚಿಕೊಂಡಿದ್ದರು. ಇದಕ್ಕೆ ಅನಾಮಧೇಯವಾದ 43 ಸಾಮಾಜಿಕ ಜಾಲತಾಣ ಖಾತೆಗಳಿಂದ ಅವಹೇಳನಕಾರಿ ಪ್ರತಿಕ್ರಿಯೆ ಜೊತೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು.

ಈ ಸಂಬಂಧ ರಮ್ಯಾ ನೀಡಿದ ದೂರನ್ನು ಆಧರಿಸಿ ಬೆಂಗಳೂರಿನ ಸೈಬರ್‌ ಠಾಣೆಯ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ಗಳಾದ 351(2) (ಕ್ರಿಮಿನಲ್‌ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್‌ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1)(iv) (ಲೈಂಗಿಕ ಟೀಕೆ), 79 (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67, 66(C) ಅಡಿ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com