ನಟಿ ರನ್ಯಾ ಪ್ರಕರಣ: ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿಡಲು ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ

“ತನಿಖೆ ಪೂರ್ಣಗೊಳಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಯನ್ನು ರಕ್ಷಿಸಿಡಬೇಕು. ಅಗತ್ಯಬಿದ್ದರೆ ಆನಂತರ ವಿಚಾರಣೆಗೂ ಅದರ ಅಗತ್ಯ ಬೀಳಲಿದೆ” ಎಂದು ನ್ಯಾಯಾಲಯ ಹೇಳಿದೆ.
Ranya Rao and Karnataka High Court
Ranya Rao and Karnataka High Court
Published on

ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ನಟಿ ರನ್ಯಾ ಅಲಿಯಾಸ್‌ ಹರ್ಷವರ್ಧಿನಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ವಶಕ್ಕೆ ಪಡೆದ ಮಾರ್ಚ್‌ 3ರಿಂದ ಮಾರ್ಚ್‌ 4ರ ಬೆಳಿಗಿನ ಜಾವದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಇರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ನಿರ್ದೇಶಿಸಿದೆ.

ನಟಿ ರನ್ಯಾ ಅವರ ಮಲತಾಯಿ ಎಚ್‌ ಪಿ ರೋಹಿಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇತ್ಯರ್ಥಪಡಿಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ತನಿಖೆಗೆ ಅಗತ್ಯವಾದ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದು, ನ್ಯಾಯಾಲಯವು ನಿರ್ದೇಶಿಸಿದರೆ ಅದನ್ನು ರಕ್ಷಿಸಿಡಲಾಗುವುದು” ಎಂದರು.

ಈ ಹಿನ್ನೆಲೆಯಲ್ಲಿ ಪೀಠವು “ತನಿಖೆ ಪೂರ್ಣಗೊಳಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಯನ್ನು ರಕ್ಷಿಸಿಡಬೇಕು. ಅಗತ್ಯಬಿದ್ದರೆ ಆನಂತರ ವಿಚಾರಣೆಗೂ ಅದು ಅಗತ್ಯವಾಗಬಹುದು” ಎಂದು ನ್ಯಾಯಾಲಯವು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

Also Read
ವಿಮಾನ ನಿಲ್ದಾಣದಲ್ಲಿ ರನ್ಯಾ ಬಂಧನದ ವಿಡಿಯೋ ತುಣುಕು ಸಂಗ್ರಹಕ್ಕೆ ಕೋರಿಕೆ: ಕೇಂದ್ರ, ಡಿಆರ್‌ಐಗೆ ಹೈಕೋರ್ಟ್‌ ನೋಟಿಸ್‌

ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾಳನ್ನುಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್‌ ಬ್ಯಾಗ್)‌ ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು.

ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ಹಾಗೂ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡ್ಹೆಸೀವ್‌ ಬ್ಯಾಂಡೇಜ್‌ ಬಳಿ ಅಂಟಿಸಿರುವುದು ಪತ್ತೆಯಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135(1)(i) ಅಡಿ ರನ್ಯಾಳನ್ನು ಬಂಧಿಸಿದ್ದರು.

Kannada Bar & Bench
kannada.barandbench.com