ಅದಾನಿ ಸುದ್ದಿ: ನ್ಯೂಸ್ ಲಾಂಡ್ರಿ, ಠಾಕೂರ್ತಾ ಅರ್ಜಿ ವರ್ಗಾವಣೆಗೆ ದೆಹಲಿ ನ್ಯಾಯಾಲಯ ನಕಾರ

ಪ್ರತಿಬಂಧಕಾದೇಶ ತೆರವುಗೊಳಿಸಿದ್ದ ನ್ಯಾಯಾಧೀಶರೇ ಪ್ರಕರಣ ಆಲಿಸುವುದು ಸೂಕ್ತವೆಂದು ನಿನ್ನೆ ಜಿಲ್ಲಾ ನ್ಯಾಯಾಧೀಶರು ಪರಿಗಣಿಸಿದ್ದರು. ಆದರೆ ಅದಾನಿ ಪರ ವಕೀಲರು ಅರ್ಜಿ ವರ್ಗಾವಣೆ ವಿರೋಧಿಸಿದರು.
Paranjoy Guha Thakurta, Newslaundry and Adani
Paranjoy Guha Thakurta, Newslaundry and Adani
Published on

ಉದ್ಯಮಿ ಗೌತಮ್ ಅದಾನಿಯವರಿಗೆ ಸೇರಿದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್‌) ವಿರುದ್ಧ ಯಾವುದೇ ಮಾನಹಾನಿ ವಿಚಾರ ಪ್ರಕಟಿಸದಂತೆ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ್ದ ಪ್ರತಿಬಂಧಕಾದೇಶ ಪ್ರಶ್ನಿಸಿ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಮತ್ತು ಸುದ್ದಿ ಜಾಲಾತಾಣ ನ್ಯೂಸ್‌ಲಾಂಡ್ರಿ ಸಲ್ಲಿಸಿದ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ವಿಚಾರಣೆ ನಡೆಸಲಿದ್ದಾರೆಯೇ ವಿನಾ ಪ್ರತಿಬಂಧಕಾಜ್ಞೆ ತೆರವುಗೊಳಿಸಿದ್ದ ನ್ಯಾಯಾಧೀಶ ಆಶಿಶ್ ಅಗರ್‌ವಾಲ್‌ ಅವರಲ್ಲ ಎಂದು ರೋಹಿಣಿ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮಂಗಳವಾರ ತಿಳಿಸಿದ್ದಾರೆ.

ಸೆಪ್ಟೆಂಬರ್ 24 ರಂದು ನ್ಯಾಯಾಧೀಶ ಚೌಧರಿ ಅವರು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗುರುವಿಂದರ್‌ ಪಾಲ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Also Read
ಅದಾನಿ ಸುದ್ದಿ ಕುರಿತು ಕೇಂದ್ರದ ಆದೇಶ: ರವೀಶ್ ಕುಮಾರ್, ನ್ಯೂಸ್‌ ಲಾಂಡ್ರಿ ಅರ್ಜಿ ನಾಳೆ ಆಲಿಸಲಿದೆ ದೆಹಲಿ ಹೈಕೋರ್ಟ್

ಗಮನಾರ್ಹ ಅಂಶವೆಂದರೆ, ನ್ಯಾಯಾಧೀಶ ಅಗರ್‌ವಾಲ್‌ ಅವರು ಈಗಾಗಲೇ ಪ್ರಕರಣವನ್ನು ನಿರ್ವಹಿಸಿ ಆದೇಶಗಳನ್ನು ಹೊರಡಿಸಿರುವುದರಿಂದ ಅವರು ಪ್ರಕರಣಗಳ ವಿಚಾರಣೆ ನಡೆಸುವುದು ಸೂಕ್ತ ಎಂದು ನ್ಯಾಯಾಧೀಶ ಚೌಧರಿ ಸೋಮವಾರ ಹೇಳಿದ್ದರು .

ಆದರೆ, ಇಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಪರವಾಗಿ ಹಾಜರಾದ ವಕೀಲ ವಿಜಯ್ ಅಗರ್‌ವಾಲ್‌ ಅವರು ಅರ್ಜಿ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದರು. ತರುವಾಯ, ನ್ಯೂಸ್ ಲಾಂಡ್ರಿ ಮತ್ತು ಠಾಕುರ್ತಾ ಪರ ಹಾಜರಾದ ವಕೀಲರು ಕೂಡ ನ್ಯಾಯಾಧೀಶ ಚೌಧರಿ ಅವರು ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದರು.

ವಾದ ಆಲಿಸಿದ ನ್ಯಾಯಾಲಯ ಚೌಧರಿ ಅವರು ಈಗಾಗಲೇ  ಪ್ರಕರಣಕ್ಕೆ ಸಂಬಂಧಿಸಿದಂತೆ ವಾದಗಳನ್ನು ವಿಸ್ತಾರವಾಗಿ ಆಲಿಸಿರುವುದರಿಂದ, ನ್ಯಾಯದ ಹಿತದೃಷ್ಟಿಯಿಂದ ಮೇಲ್ಮನವಿಗಳನ್ನು ಅವರೇ ವಿಚಾರಣೆ ಮಾಡುವುದು ಸೂಕ್ತ ಎಂದು ಠಾಕೂರ್ತಾ ಅವರ ಅರ್ಜಿಗೆ ಸಂಬಂಧಿಸಿದಂತೆ ಅಭಿಪ್ರಾಯಪಟ್ಟಿತು.  

ನ್ಯೂಸ್‌ಲಾಂಡ್ರಿ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ನ್ಯಾ. ಚೌಧರಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅವರು ವಿಚಾರಣೆ ನಡೆಸಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ಮೇಲ್ಮನವಿದಾರರು ಹೇಳಿರುವುದರಿಂದ ಪ್ರಕರನವನ್ನು ನ್ಯಾ. ಚೌಧರಿ ಅವರಿಗೆ ಹಿಂತಿರುಗಿಲಾಗುತ್ತಿದೆ. ಪಕ್ಷಕಾರರು ಸೆಪ್ಟೆಂಬರ್ 24ರಂದು ನ್ಯಾ. ಚೌಧರಿ ಅವರೆದುರು ಹಾಜರಾಗಬೇಕು ಎಂದು ತಿಳಿಸಿತು.

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಪತ್ರಕರ್ತರು ಹಾಗೂ ಹೋರಾಟಗಾರರಾದ ಪರಂಜಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತಿತರರಿಗೆ ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದರು. 

ಹೆಸರಿಸಲಾದ ಐವರು ಪತ್ರಕರ್ತರಲ್ಲದೆ, ಅನಾಮಧೇಯ ವ್ಯಕ್ತಿಗಳ ವಿರುದ್ಧವೂ ಪ್ರತಿಬಂಧಕಾಜ್ಞೆ ವಿಧಿಸಲಾಗಿತ್ತು. ಹೀಗಾಗಿ ನ್ಯೂಸ್‌ ಲಾಂಡ್ರಿ, ಠಾಕೂರ್ತಾ ಮತ್ತಿತರ ಪತ್ರಕರ್ತರು ಸಿವಿಲ್‌ ನ್ಯಾಯಾಲಯದ ಆದೇಶವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಜಿಲ್ಲಾ ನ್ಯಾಯಾಧೀಶ ಆಶಿಶ್ ಅಗರ್‌ವಾಲ್‌ ಸೆಪ್ಟೆಂಬರ್ 18ರಂದು ಪತ್ರಕರ್ತರ ಮನವಿ ಪುರಸ್ಕರಿಸಿ ಪ್ರತಿಬಂಧಕಾಜ್ಞೆ ತೆರವುಗೊಳಿಸಿದ್ದರು.

Also Read
ಅದಾನಿ ವಿರುದ್ಧದ ಸುದ್ದಿ ಪ್ರಕಟಿಸದಂತೆ ಕೇಂದ್ರ ಸರ್ಕಾರದ ಆದೇಶ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಲಾಂಡ್ರಿ

ಆದರೆ ನ್ಯೂಸ್ ಲಾಂಡ್ರಿ ಮತ್ತು ಠಾಕುರ್ತಾ ಅವರ ಅರ್ಜಿ ಸೋಮವಾರ ಜಿಲ್ಲಾ ನ್ಯಾಯಾಧೀಶ ಚೌಧರಿ ಅವರ ಮುಂದೆ ವಿಚಾರಣೆಗೆ ಬಂದಿತು. ನ್ಯಾಯಾಧೀಶ ಅಗರ್‌ವಾಲ್‌ ಅವರ ಹಿಂದಿನ ಆದೇಶವನ್ನು ಗಮನಿಸಿದ ನಂತರ, ನ್ಯಾಯಾಧೀಶ ಚೌಧರಿ ಅವರು ನ್ಯಾಯಾಧೀಶ ಅಗರ್‌ವಾಲ್‌ ಅವರೇ ಈ ಪ್ರಕರಣಗಳನ್ನು ಆಲಿಸುವುದು ಸೂಕ್ತವೆಂದು ಪರಿಗಣಿಸಿದರು .

ಆದ್ದರಿಂದ, ಪ್ರಕರಣವನ್ನು ಔಪಚಾರಿಕವಾಗಿ ನ್ಯಾಯಾಧೀಶ ಅಗರ್ವಾಲ್ ಅವರಿಗೆ ನಿಯೋಜಿಸಲು ಇಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೆದರು ಪ್ರಕರಣ ಬಂದಿತು. ಆದರೆ ಮೇಲ್ಮನವಿಗಳನ್ನು ನ್ಯಾ. ಚೌಧರಿ ಅವರೇ ಆಲಿಸಬಹುದೆಂದು ನಿರ್ಧರಿಸಿದ ಪ್ರಧಾನ ನ್ಯಾಯಾಧೀಶರು ಪ್ರಕರಣವನ್ನು ಅವರಿಗೆ ಮರಳಿಸಿದರು.

Kannada Bar & Bench
kannada.barandbench.com