
ಗೌತಮ್ ಅದಾನಿ ಮತ್ತು ಅವರ ಕಂಪನಿಗಳ ಮೇಲಿನ ಅವಹೇಳನಕಾರಿ ವೀಡಿಯೊಗಳನ್ನು ಯೂಟ್ಯೂಬ್ ವಾಹಿನಿಯಿಂದ ತೆಗೆದುಹಾಕಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಪತ್ರಕರ್ತ ರವೀಶ್ ಕುಮಾರ್ ಹಾಗೂ ನ್ಯೂಸ್ ಲಾಂಡ್ರಿ ಸಲ್ಲಿಸಿರುವ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ನಾಳೆ (ಸೋಮವಾರ) ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿ ಸಚಿನ್ ದತ್ತ ಅವರಿರುವ ಪೀಠ ವಿಚಾರಣೆ ನಡೆಸಲಿದೆ. ಕೇಂದ್ರದ ಇದೇ ಆದೇಶವನ್ನು ಪ್ರಶ್ನಿಸಿ ಆನ್‌ಲೈನ್ ಸುದ್ದಿತಾಣ ನ್ಯೂಸ್‌ಲಾಂಡ್ರಿ ಅರ್ಜಿ ಸಲ್ಲಿಸಿತ್ತು.
ಪತ್ರಕರ್ತರ ವಿರುದ್ಧ ಅದಾನಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಆದೇಶ ಕಾನೂನು ಬೆದರಿಕೆ ಮತ್ತು ಸಂಪನ್ಮೂಲ ಸವಕಳಿ ಮೂಲಕ ನ್ಯಾಯಸಮ್ಮತ ಪತ್ರಿಕೋದ್ಯಮವನ್ನು ಮೌನಗೊಳಿಸಲು ವಿನ್ಯಾಸಗೊಳಿಸಲಾದ ಸಾರ್ವಜನಿಕ ಭಾಗವಹಿಸುವಿಕೆ ವಿರುದ್ಧದ ಶ್ರೇಷ್ಠ ಕಾರ್ಯತಂತ್ರದ ಮೊಕದ್ದಮೆ (SLAAP) ಎಂದು ಅವರು ಬಣ್ಣಿಸಿದ್ದಾರೆ.
ರವಿಶ್ ಕುಮಾರ್ ಹಾಗೂ ವಿವಿಧ ಯೂಟ್ಯೂಬರ್/ಸುದ್ದಿ ವೇದಿಕೆಗಳಿಗೆ ಪತ್ರ ಬರೆದಿದ್ದ ಕೇಂದ್ರ ಸರ್ಕಾರ, ನ್ಯಾಯಾಲಯದ ಆದೇಶದಂತೆ ಅದಾನಿ ಅವರ ವಿರುದ್ಧದ ವೀಡಿಯೊಗಳನ್ನು ತೆಗೆಯಬೇಕು ಎಂದು ಸೆಪ್ಟೆಂಬರ್ 16ರಂದು ಹೊರಡಿಸಿತ್ತು.
ತನ್ನ ವಿರುದ್ಧ ಮಾನನಷ್ಟಕರ ಸುದ್ದಿ ಪ್ರಕಟಿಸದಂತೆ ವಿವಿಧ ಪತ್ರಕರ್ತರಿಗೆ ತಡೆ ನೀಡಬೇಕೆಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ಮಾನನಷ್ಟ ಮೊಕದ್ದಮೆ ದೆಹಲಿಯ ರೋಹಿಣಿ ನ್ಯಾಯಾಲಯವನ್ನು ಕೋರಿತ್ತು. ಸೆಪ್ಟೆಂಬರ್ 18ರಂದು, ಮೇಲ್ಮನವಿ ನ್ಯಾಯಾಲಯ ನಾಲ್ವರು ಪತ್ರಕರ್ತರಿಗೆ ಸಂಬಂಧಿಸಿದ ಆದೇಶವನ್ನು ಭಾಗಶಃ ರದ್ದುಗೊಳಿಸಿತ್ತು. ಆದರೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ನೀಡಲಾಗಿದ್ದ ಪ್ರತಿಬಂಧಕಾದೇಶ ಇನ್ನೂ ಜಾರಿಯಲ್ಲಿತ್ತು.
ರವೀಶ್ ಅವರ ಯೂಟ್ಯೂಬ್ ವಾಹಿನಿಗೆ 1.4 ಕೋಟಿ ಚಂದಾದಾರರಿದ್ದಾರೆ. ಕೇಂದ್ರ ಸರ್ಕಾರದ ಆದೇಶ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ ಆಡಳಿತ, ಪತ್ರಿಕಾ ಸ್ವಾತಂತ್ರ್ಯ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತದ ಅಡಿಪಾಯದ ಮೇಲೆ ದಾಳಿ ಮಾಡುತ್ತದೆ. ಇದು ಹಿಂದೆಂದೂ ನಡೆದಿರದ ಅಸಾಂವಿಧಾನಿಕ ಕಾರ್ಯಾಂಗ ಅಧಿಕಾರವಾಗಿದೆ ಎಂದು ವಕೀಲ ಶಾಂತನು ದೇರ್ಹಗಾವೆನ್ ಮೂಲಕ ಸಲ್ಲಿಸಿರುವ ಅರ್ಜಿ ತಿಳಿಸಿದೆ.
ಶಾಸನಬದ್ಧ ಅಧಿಕಾರ, ಕಾರ್ಯವಿಧಾನದ ಅನುಸರಣೆ ಅಥವಾ ಸಾಂವಿಧಾನಿಕ ಸಮರ್ಥನೆ ಇಲ್ಲದೆ ತಾನೇ ಖುದ್ದಾಗಿ ಸಿವಿಲ್ ನ್ಯಾಯಾಲಯದ ಆದೇಶ ಪಾಲಿಸವಂತೆ ನಿರ್ದೇಶಿಸುವ ಮೂಲಕ ಕೇಂದ್ರ ಸರ್ಕಾರ ಸ್ವಾತಂತ್ರ್ಯದ ನಂತರ ಭಾರತೀಯ ಸಾಂವಿಧಾನಿಕ ನ್ಯಾಯಶಾಸ್ತ್ರದ ಮೂಲಾಧಾರವಾಗಿರುವ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ರವೀಶ್ ಹೇಳಿದ್ದಾರೆ.
ಸುದ್ದಿ ಪ್ರಕಟಿಸುವುದಕ್ಕೆ ಮುಂಚಿತವಾಗಿಯೇ ವಿಧಿಸಲಾಗಿರುವ ಈ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ ಮತ್ತು ಕಾರ್ಯಾಂಗ ನಡೆಸಿದ ಆಡಳಿತಾತ್ಮಕ ಅತಿಕ್ರಮಣ ಎಂದು ಅವರು ಹೇಳಿದ್ದಾರೆ.
ಅದಾನಿ ಸಮೂಹ ಹೂಡಿದ್ದ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಆದೇಶ ಕಾನೂನು ಬೆದರಿಕೆ ಮತ್ತು ಸಂಪನ್ಮೂಲ ಸವಕಳಿ ಮೂಲಕ ನ್ಯಾಯಸಮ್ಮತ ಪತ್ರಿಕೋದ್ಯಮವನ್ನು ಮೌನಗೊಳಿಸಲು ವಿನ್ಯಾಸಗೊಳಿಸಲಾದ ಸಾರ್ವಜನಿಕ ಭಾಗವಹಿಸುವಿಕೆ ವಿರುದ್ಧದ ಶ್ರೇಷ್ಠ ಕಾರ್ಯತಂತ್ರದ ಮೊಕದ್ದಮೆ (SLAAP) ಎಂದು ಅವರು ಬಣ್ಣಿಸಿದ್ದಾರೆ.