ಹೈಕೋರ್ಟ್‌ಗೆ ಹೆಚ್ಚುವರಿ ಕಟ್ಟಡ: ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ಹೈಕೋರ್ಟ್‌ಗೆ ಕಟ್ಟಡ ಒದಗಿಸುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅಲ್ಲದೇ, ಅರ್ಜಿದಾರರು ಯಾವುದೇ ನಿರ್ದೇಶನಗಳನ್ನು ಜಾರಿ ಮಾಡುವ ಸಂಸ್ಥೆಯಲ್ಲ. ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ ಎಂದಿರುವ ಪೀಠ.
High Court of Karnataka
High Court of Karnataka

ಕರ್ನಾಟಕ ಹೈಕೋರ್ಟ್​ನ ಕಚೇರಿಗಳಿಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸುವ ಸಲುವಾಗಿ ರಾಜ್ಯ ಚುನಾವಣಾ ಆಯೋಗದ ಹಳೆಯ ಕಚೇರಿಯಿರುವ ಸ್ಥಳದಲ್ಲಿ ತಳ ಮಹಡಿ ಸೇರಿದಂತೆ 10 ಮಹಡಿಗಳ ಕಟ್ಟಡ ನಿರ್ಮಾಣ ಕುರಿತ ಪ್ರಸ್ತಾವ ಅಂತಿಮವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದೆ.

ಹೈಕೋರ್ಟ್‌ನ ನೆಲಮಹಡಿಯ ಕಚೇರಿಗಳನ್ನು ಸ್ಥಳಾಂತರಿಸುವಂತೆ ಕೋರಿ ತುಮಕೂರು ಮೂಲಕ ವಕೀಲ ರಮೇಶ್​ ನಾಯಕ್​ ಮತ್ತು ವಕೀಲರಾದ ಶರಣ್​ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್​ ದಿನೇಶ್​ ಕುಮಾರ್​ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಪ್ರತಿಮಾ ಹೊನ್ನಾಪುರ ಅವರು ಹೈಕೋರ್ಟ್‌ನ ಕಚೇರಿಗಳಿಗೆ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಸ್ತಾವಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ ನಾಲ್ಕನೇ ಪ್ರಸ್ತಾವ (ತಳ ಮಹಡಿ ಸೇರಿದಂತೆ 10 ಮಹಡಿಗಳ ಕಟ್ಟಡ ) ಅಂತಿಮವಾಗಿದೆ. ಈ ಸಂಬಂಧ ಹೈಕೋರ್ಟ್‌ ಕಟ್ಟಡ ಸಮಿತಿಯೊಂದಿಗೆ ಮುಂದಿನ ವಾರ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು.

Also Read
[ಹೈಕೋರ್ಟ್‌ ಕಟ್ಟಡ ವಿಸ್ತರಣೆ] 10 ಮಹಡಿ ಕಟ್ಟಡ ನಿರ್ಮಾಣ ಸೇರಿದಂತೆ 4 ಪ್ರಸ್ತಾವ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಇದಕ್ಕೂ ಮುನ್ನ, ಅರ್ಜಿದಾರರ ವಾದ ಆಲಿಸಿದ ಪೀಠವು ಹೈಕೋರ್ಟ್ ಕಟ್ಟಡ ಒದಗಿಸುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅಲ್ಲದೇ, ಅರ್ಜಿದಾರರು ಯಾವುದೇ ನಿರ್ದೇಶನಗಳನ್ನು ಜಾರಿ ಮಾಡುವ ಸಂಸ್ಥೆಯಲ್ಲ. ಸರ್ಕಾರ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಹೀಗಿರುವ ಸಂದರ್ಭದಲ್ಲಿ ಅರ್ಜಿಯನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು, ಇತ್ಯರ್ಥಪಡಿಸಿ ಆದೇಶಿಸಿತು.

Kannada Bar & Bench
kannada.barandbench.com