ಬಿಜೆಪಿ ಧುರೀಣ ಸುಬ್ರಮಣಿಯನ್ ಸ್ವಾಮಿ ನಿವಾಸಕ್ಕೆ ಭದ್ರತೆ ಒದಗಿಸಲು ವಿಫಲವಾದ ಕೇಂದ್ರ: ದೆಹಲಿ ಹೈಕೋರ್ಟ್ ಅಸಮಾಧಾನ

ಹಬ್ಬ ಹರಿದಿನಗಳಲ್ಲಿ ನಗರದೆಲ್ಲೆಡೆ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ನಿರತರಾಗಿರುವ ಕಾರಣಕ್ಕೆ ಭದ್ರತಾ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿತು.
Subramanian Swamy, Delhi High Court
Subramanian Swamy, Delhi High Court

ಬಿಜೆಪಿ ಹಿರಿಯ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕೇವಲ ಖಾಸಗಿ ನಾಗರಿಕರಲ್ಲ, ಬದಲಿಗೆ ಸರ್ಕಾರ ಜಡ್‌ ಶ್ರೇಣಿ ಭದ್ರತೆ ಪಡೆದ ವ್ಯಕ್ತಿ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳುವ ಮೂಲಕ ಅವರ ಖಾಸಗಿ ನಿವಾಸಕ್ಕೆ ಭದ್ರತೆ ಒದಗಿಸಲು ವಿಫಲವಾದ ಕೇಂದ್ರದ ಕಿವಿ ಹಿಂಡಿದೆ.

ಭದ್ರತಾ ಸಿಬ್ಬಂದಿಗೆ ಉಳಿದುಕೊಳ್ಳಲು ಸರ್ಕಾರ ಯಾವುದೇ ಮೂಲಸೌಕರ್ಯ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಸ್ವಾಮಿ ಅವರ ಖಾಸಗಿ ನಿವಾಸದಲ್ಲಿ ಹೇಗೆ ಭದ್ರತೆ ಒದಗಿಸಲು ಯೋಜಿಸಲಾಗಿದೆ ಎಂದು  ಕೇಂದ್ರ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿತು.

ಹಬ್ಬಗಳ ಸಮಯವಾದ ಕಾರಣ ನಗರದೆಲ್ಲೆಡೆ ಬಂದೋಬಸ್ತ್‌ಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಾಗಾಗಿ, ಸ್ವಾಮಿ ಅವರ ನಿವಾಸಕ್ಕೆ ಭದ್ರತಾ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿತು.

"ಓಹ್ ದಯವಿಟ್ಟು! ಅಂತಹ ಸಾಮಾನ್ಯ ಹೇಳಿಕೆಗಳನ್ನು ತೇಲಿಬಿಡಬೇಡಿ. ನೀವು ಅವರ ಭದ್ರತಾ ಪಡೆಯನ್ನು ಹಿಂಪಡೆದು ಹಬ್ಬಗಳ ಸಮಯದಲ್ಲಿ ಬಂದೋಬಸ್ತ್‌ಗೆಂದು ಕಳುಹಿಸಿದಿರಾ?" ಎಂದು ನ್ಯಾಯಾಲಯ ಕೇಳಿತು.

Also Read
ಇನ್ನೂ ದೊರೆಯದ ಭದ್ರತೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ

ಸ್ವಾಮಿ ಅವರ ನಿವಾಸಕ್ಕೆ ಭದ್ರತೆ ಒದಗಿಸಲು ಏನು ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನುವುದನ್ನು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಇನ್ನು ಮೂರು ದಿನಗಳ ಒಳಗೆ ನೀಡಬೇಕು ಎಂದು ನ್ಯಾ. ಯಶವಂತ್ ವರ್ಮಾ ಅವರು ಕೇಂದ್ರಕ್ಕೆ ಗಡುವು ವಿಧಿಸಿದರು.

“ಸೆಪ್ಟೆಂಬರ್ 14, 2022 ರ ಆದೇಶವನ್ನು ಅನುಸರಿಸಲಾಗಿಲ್ಲ ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿಲ್ಲ ಎಂಬ ಪ್ರತಿಪಾದನೆಯ ಮೇಲೆ ಪ್ರತಿವಾದಿಯ ಪರವಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ಭದ್ರತಾ ವ್ಯವಸ್ಥೆ ಮಾಡಲು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಕಾಲಾವಕಾಶ ಕೋರಿದ್ದು ಅದನ್ನು ಮೂರು ದಿನಗಳ ಒಳಗೆ ಪೂರೈಸಿ” ಎಂದು ನ್ಯಾಯಾಲಯ ಆದೇಶಿಸಿತು. ನ್ಯಾಯಾಲಯ ನವೆಂಬರ್ 3ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಸ್ವಾಮಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಜಯಂತ್‌ ಮೆಹ್ತಾ, ಕೇಂದ್ರ ಸರ್ಕಾರದ ಪರವಾಗಿ ಎಎಸ್‌ಜಿ ಸಂಜಯ್‌ ಜೈನ್‌ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com