ಜಿ ಆರ್‌ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಬೇರೆ ಖಾಸಗಿ ಕಾಲೇಜಿನಲ್ಲಿ ಪ್ರವೇಶ: ಹೈಕೋರ್ಟ್‌ಗೆ ಸರ್ಕಾರದ ಭರವಸೆ

ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ತಿಳಿಸಿರುವ ಸರ್ಕಾರ.
Karnataka High Court
Karnataka High Court

ಮಂಗಳೂರಿನ ಜಿ ಆರ್ ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳ 2023-24ನೇ ಸಾಲಿನ ಎಂಬಿಬಿಎಸ್‌ ಕೋರ್ಸ್‌ ಪ್ರವೇಶಾತಿ ಅಕ್ರಮ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಘೋಷಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.

2023-24ನೇ ಸಾಲಿನ ಎಂಬಿಬಿಎಸ್‌ ಕೋಸ್‌ರ್ಗೆ ತಾವು ಪಡೆದಿರುವ ಪ್ರವೇಶಾತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಕ್ರಮ ಎಂದಿರುವ ಹಿನ್ನೆಲೆಯಲ್ಲಿ ತಮ್ಮ ಪ್ರವೇಶಾತಿಯನ್ನು ಬೇರೊಂದು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಬೇಕು. ಹಾಗೆಯೇ, ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ತಮಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಡಿ ಎಸ್ ಧಾತ್ರಿ ಸೇರಿದಂತೆ ಮಂಗಳೂರಿನ ಜಿ ಆರ್ ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಹಾಗಾಗಿ, ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ನಡುವಿನ ಶುಲ್ಕಕ್ಕೆ ಬಹಳ ವ್ಯತ್ಯಾಸವಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋಟಾದ ಪ್ರಕಾರ ಬೇರೆ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗುವುದು. ರಾಜ್ಯದಲ್ಲಿ ಸುಮಾರು 24 ಖಾಸಗಿ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ತಿಳಿಸಿದರು.

Also Read
ವರ್ಗಾವಣೆ ಕೋರಿದ ಜಿ ಆರ್‌ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು: ಸರ್ಕಾರ, ಕೆಇಎಗೆ ಹೈಕೋರ್ಟ್‌ ನೋಟಿಸ್‌

ಈ ಹೇಳಿಕೆ ದಾಖಲಿಸಿಕೊಂಡ ಪೀಠವು ವಿದ್ಯಾರ್ಥಿಗಳ ಸೀಟು ಮರು ವಿತರಣೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮುಂದಿನ ವಿಚಾರಣೆಯ ದಿನಾಂಕದೊಳಗೆ ವಿದ್ಯಾರ್ಥಿಗಳ ಹೆಸರುಗಳು, ಅವರನ್ನು ಮುಂಬರುವ ಪರೀಕ್ಷೆ ಬರೆಯುವ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಯಾವ ಕಾಲೇಜಿಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ವಿವರಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್‌ 3ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com