ಮಗುವನ್ನು ಸುಪರ್ದಿಗೆ ನೀಡದಿರಲು ವ್ಯಭಿಚಾರ ಕಾರಣವಾಗದು: ಬಾಂಬೆ ಹೈಕೋರ್ಟ್

ಮಹಿಳೆ ಒಳ್ಳೆಯ ಹೆಂಡತಿ ಅಲ್ಲದೆ ಇರಬಹುದು ಆದರೆ ಹಾಗೆಂದು ಆಕೆ ಒಳ್ಳೆಯ ತಾಯಿ ಅಲ್ಲ ಎಂದು ಅರ್ಥವಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
Bombay High Court and divorce
Bombay High Court and divorce
Published on

ವಿಚ್ಛೇದನಕ್ಕೆ ವ್ಯಭಿಚಾರ ಕಾರಣವಾಗಿದ್ದರೂ ಸಹ ಅದೇ ಕಾರಣವನ್ನು ನೀಡಿ ಮಗುವನ್ನು ಸುಪರ್ದಿಗೆ ನೀಡದಂತೆ ತಡೆಯಲಾಗದು ಎಂದು ಬಾಂಬೆ ಹೈಕೋರ್ಟ್‌ ಈಚೆಗೆ ಪ್ರಕರಣವೊಂದರಲ್ಲಿ ಹೇಳಿದೆ.

ಮಹಿಳೆ ಒಳ್ಳೆಯ ಹೆಂಡತಿ ಅಲ್ಲದೆ ಇರಬಹುದು ಆದರೆ ಹಾಗೆಂದು ಆಕೆ ಒಳ್ಳೆಯ ತಾಯಿಯಲ್ಲ ಎಂದು ಅರ್ಥವಲ್ಲ ಎಂಬುದಾಗಿ ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪತ್ನಿ ವ್ಯಭಿಚಾರಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವ್ಯಭಿಚಾರದ ಆರೋಪಗಳು ಸಾಬೀತಾದರೂ ಹೆಂಡತಿಗೆ ಅಪ್ರಾಪ್ತ ವಯಸ್ಕ ಮಗುವಿನ ಪಾಲನೆಯ ಅವಕಾಶ ನೀಡಬಹುದಾಗಿದೆ ಎಂದು ನ್ಯಾಯಾಲಯ ನುಡಿಯಿತು.

“ವ್ಯಭಿಚಾರ ನಡೆದಿದ್ದರೆ ಆ ಕಾರಣಕ್ಕೆ ಯಾವುದೇ ಸಂದರ್ಭದಲ್ಲಿ ವಿಚ್ಛೇದನ ಪಡೆಯಬಹುದಾಗಿದೆ. ಆದರೆ ಮಗುವಿನ ಪಾಲನೆಯ ಅವಕಾಶ ನೀಡದೆ ಇರಲು ಅದು ಕಾರಣವಾಗುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದನ ಕೋರಿರುವ ಅರ್ಜಿಯಲ್ಲಿ ಪತಿ ತನ್ನ ಪತ್ನಿ ವಿರುದ್ಧ ವ್ಯಭಿಚಾರದ ಆರೋಪ ಮಾಡಿದ್ದು ವಿಚಾರಣೆ ವೇಳೆ ಪ್ರಮುಖ ಸಾಕ್ಷ್ಯದ ಮೂಲಕ ಅದನ್ನು ಸಾಬೀತುಪಡಿಸುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.  

ಕೌಟುಂಬಿಕ ನ್ಯಾಯಾಲಯ ಮಗುವಿನ ಪಾಲನೆಯ ಅವಕಾಶವನ್ನು ವ್ಯಕ್ತಿಯ ಪತ್ನಿಗೆ ನೀಡಿತ್ತು. ಇದನ್ನು ಆತ ಪ್ರಶ್ನಿಸಿದ್ದರು. ಆತನ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆತ ಹೈಕೋರ್ಟ್‌ ಮೊರೆ ಹೋಗಿದ್ದರು.

ವ್ಯಭಿಚಾರಿ ಎಂದರೆ ಅಸಮರ್ಥ ಪೋಷಕರು ಎಂದರ್ಥವಲ್ಲ ಎಂಬುದಾಗಿ ಫೆಬ್ರವರಿ 2024ರಲ್ಲಿ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪೊಂದನ್ನು ನ್ಯಾ. ಪಾಟೀಲ್‌ ಅವಲಂಬಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ, ಪತ್ನಿ ವೈದ್ಯಕೀಯ ವೃತ್ತಿಪರಳಾಗಿದ್ದು ತಾಯಿಯೊಂದಿಗೆ ಅಪ್ರಾಪ್ತ ಮಗಳು ವಾಸವಾಗಿದ್ದ ವೇಳೆ ಆಕೆಯ ಶೈಕ್ಷಣಿಕ ಅಂಕಗಳು ಉತ್ತಮ ರೀತಿಯಲ್ಲಿದ್ದವು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಪತಿಗೆ ಮಗುವಿನ ಜವಾಬ್ದಾರಿ ವಹಿಸಲು ಯಾವುದೇ ಕಾರಣಗಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು. 

Kannada Bar & Bench
kannada.barandbench.com