ಸ್ಥಳೀಯ ಸಂಸ್ಥೆಗಳು ಜಾಹೀರಾತು ತೆರಿಗೆ ವಿಧಿಸುವಂತಿಲ್ಲ ಎಂದ ಹೈಕೋರ್ಟ್‌; ವಸೂಲಿ ಮಾಡಿರುವ ತೆರಿಗೆ ಮರಳಿಸಲು ಸೂಚನೆ

ಜಾಹೀರಾತುಗಳಿಗೆ ತೆರಿಗೆ ವಿಧಿಸಲು ಅಧಿಕಾರ ಕಲ್ಪಿಸಿದ್ದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್‌ಗಳಾದ 103(ಬಿ) (vi) ಮತ್ತು 134 ಅಸಾಂವಿಧಾನಿಕ ಎಂದು ವಜಾ ಮಾಡಿರುವ ನ್ಯಾಯಾಲಯ.
Karnataka HC and Justice M G S Kamal
Karnataka HC and Justice M G S Kamal

ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗುವ ಜಾಹೀರಾತುಗಳು, ಹೋರ್ಡಿಂಗ್‌ಗಳಿಗೆ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸುವಂತಿಲ್ಲ. ಈ ಸಂಬಂಧ ಈಗಾಗಲೇ ಪಡೆದುಕೊಂಡಿರುವ ತೆರಿಗೆ ಹಣವನ್ನು ಮರಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ಆದೇಶ ಮಾಡಿದೆ.

ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ಹೊರಡಿಸಿದ್ದ ಎರಡು ನೋಟಿಸ್‌ಗಳನ್ನು ಪ್ರಶ್ನಿಸಿ ದಾವಣಗೆರೆಯ ರಹೀಲ್‌ ಕಮ್ಯುನಿಕೇಷನ್ಸ್‌, ಬೆಂಗಳೂರಿನ ಔಟ್‌ಡೋರ್‌ ಅಡ್ವರ್ಟೈಸಿಂಗ್‌ ಅಸೋಸಿಯೇಶನ್‌, ಶಿವಮೊಗ್ಗದ ಯುಕೆ ಅಡ್ವರ್ಟೈಸರ್ಸ್, ಸುಗಮ ಆಡ್‌ ಏಜನ್ಸೀಸ್‌, ಕ್ರಿಯೇಟಿವ್‌ ಅಡ್ವರ್ಟೈಸರ್ಸ್, ಶ್ರೀದೇವಿ ಅಡ್ವರ್ಟೈಸರ್ಸ್, ಮಾರುತಿ ಅಡ್ವರ್ಟೈಸರ್ಸ್ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳ ಕೋರಿಕೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಜಾಹೀರಾತುಗಳಿಗೆ ತೆರಿಗೆ ವಿಧಿಸಲು ಅಧಿಕಾರ ಕಲ್ಪಿಸಿದ್ದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್‌ಗಳಾದ 103(ಬಿ) (vi) ಮತ್ತು 134, 135(1), 135(2)(ii) 135(3), 139 ಹಾಗೂ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ 133(1), 132(2)(ii), 133(3), 142ರ ಪ್ರಾವಿಸೊ (iv), 324(1)(ಎಫ್‌ಎಫ್‌) ಅಸಾಂವಿಧಾನಿಕವಾಗಿದ್ದು, ಅವುಗಳನ್ನು ರದ್ದುಪಡಿಸಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

“ಅರ್ಜಿದಾರರು ಅಳವಡಿಸುವ ಹೋರ್ಡಿಂಗ್‌ಗಳಿಗೆ ಪ್ರತಿವಾದಿಗಳು ತೆರಿಗೆ ಪಾವತಿಸುವಂತೆ ಬೇಡಿಕೆ ಇಡುವಂತಿಲ್ಲ. ಪುರಸಭೆ ಅಥವಾ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿದಾರರು ಹೋರ್ಡಿಂಗ್‌ ಅಳವಡಿಕೆ ಮಾಡಿದರೆ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳುವಂತಿಲ್ಲ. ಸಂವಿಧಾನಕ್ಕೆ 101ನೇ ತಿದ್ದುಪಡಿ ಮಾಡಿದ ಸಂದರ್ಭ ಮತ್ತು ಆನಂತರ ಅರ್ಜಿದಾರರಿಂದ ಸಂಗ್ರಹಿಸಿರುವ ಜಾಹೀರಾತು ತೆರಿಗೆ ಹಣ ವಾಪಸ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮನವಿ ಸಲ್ಲಿಸಬಹುದು. ಪುರಸಭೆ ಮತ್ತು ನಗರಸಭೆಗಳು ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಬಹುದು. ಇಲ್ಲವೇ, ಬೇರೆ ತೆರಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ತಿಳಿಸಬಹುದು. ಈ ಸಂಬಂಧ ಪುರಸಭೆ ಮತ್ತು ನಗರಸಭೆಗಳು ವಿಸ್ತೃತ ವಿಂಗಡಣೆ ಲೆಕ್ಕ ನೀಡಬೇಕು. ಅರ್ಜಿದಾರರು ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುವಂತಿಲ್ಲವಾದರೆ ಈಗಾಗಲೇ ಪಾವತಿಸಿರುವ ಹಣವನ್ನು ಪುರಸಭೆ ಮತ್ತು ನಗರಸಭೆ ಹಿಂದಿರುಗಿಸಬೇಕು” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

“2016ರಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿಗೊಳಿಸಲು ಸಂವಿಧಾನಕ್ಕೆ 101ನೇ ತಿದ್ದುಪಡಿಯನ್ನು ಸಂಸತ್‌ ಮಾಡಿರುವುದರಿಂದ ಸಂವಿಧಾನದ 8ನೇ ಷೆಡ್ಯೂಲ್‌ನ ಎರಡನೇ ಪಟ್ಟಿಯಲ್ಲಿನ ನಂ.55 ನಮೂದನ್ನು ಕೈಬಿಡಲಾಗಿದೆ. ಹೀಗಾಗಿ, ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಾನೂನು ರೂಪಿಸಲು ಅಧಿಕಾರವಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ಮುಂದುವರಿದು, “ಸಂವಿಧಾನದ ಏಳನೇ ಷೆಡ್ಯೂಲ್‌ನ ಎರಡನೇ ಪಟ್ಟಿಯ (ರಾಜ್ಯ ಪಟ್ಟಿ), ನಮೂದು 55 ಅನ್ನು ಕೈಬಿಟ್ಟಿರುವುದರಿಂದ ಪುರಸಭೆ ಮತ್ತು ನಗರಸಭೆಗಳಿಗೆ ಜಾಹೀರಾತು ತೆರಿಗೆ ವಿಧಿಸಲು ಮತ್ತು ಅದನ್ನು ಸಂಗ್ರಹಿಸಲು ಅಧಿಕಾರವಿಲ್ಲ” ಎಂದು ವಿವರಿಸಲಾಗಿದೆ.

“ಈಚೆಗೆ ಹೊಸದಾಗಿ ರೂಪಿಸಲಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆ 2020ರಲ್ಲಿ ಪ್ರಜ್ಞಾಪೂರ್ವಕವಾಗಿ ಜಾಹೀರಾತು ತೆರಿಗೆಯ ಬಗ್ಗೆ ಮೌನವಹಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಕಾಯಿದೆ 2017ರಲ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಹೀರಾತು ತೆರಿಗೆ ಕೈಬಿಡಲಾಗಿದೆ. ಸಾಂವಿಧಾನಿಕ ತಿದ್ದುಪಡಿಯ ಹಿನ್ನೆಲೆಯಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ಮತ್ತು ಕರ್ನಾಟಕ ಪುರಸಭೆಗಳ ಅಧಿನಿಯಮಕ್ಕೆ ಅಗತ್ಯ ತಿದ್ದುಪಡಿ ತರುವ ಕುರಿತು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು 2017ರ ಮೇ 12ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆದರೆ, ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ” ಎಂದು ಪೀಠ ವಿವರಿಸಿದೆ.

ಪ್ರತಿವಾದಿಗಳಲ್ಲಿ ಒಬ್ಬರನ್ನು ಪ್ರತಿನಿಧಿಸಿದ್ದ ವಕೀಲ ಗಂಗಾಧರಪ್ಪ ಅವರು “ಅರ್ಜಿದಾರರು ಪ್ರತಿವಾದಿ ಸರ್ಕಾರಿ ಸಂಸ್ಥೆಗಳ ಜೊತೆಗೆ ಕರಾರು ಮಾಡಿಕೊಂಡಿದ್ದು, ಇದರ ಪ್ರಕಾರ ಅವರು ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿಸಲು ಒಪ್ಪಿಕೊಂಡು ಆನಂತರ ಅವರು ವಿರುದ್ಧವಾಗಲಾಗದು” ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು “101ನೇ ಸಾಂವಿಧಾನಿಕ ತಿದ್ದುಪಡಿಯ ಹಿನ್ನೆಲೆಯಲ್ಲಿ ಜಾಹೀರಾತು ತೆರಿಗೆ ಕುರಿತು ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಮತ್ತು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಜಾರಿಗೊಳಿಸಿರುವುದರಿಂದ ಜಾಹೀರಾತು ತೆರಿಗೆಯು ಸರಕು ಮತ್ತು ಸೇವಾ ತೆರಿಗೆಯಲ್ಲೇ ಸೇರಿರುತ್ತದೆ. ಹೀಗಾಗಿ, ಪುರಸಭೆ ಮತ್ತು ನಗರಸಭೆಗೆ ಜಾಹೀರಾತು ತೆರಿಗೆ ವಿಧಿಸುವ ಅಧಿಕಾರ ನೀಡಿರುವ ನಿಬಂಧನೆಗಳು ಅಸಾಂವಿಧಾನಿಕ” ಎಂದು ವಾದಿಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿ ಕೆ ನಂದಕುಮಾರ್‌, ಜಮೀರ್‌ ಪಾಷಾ, ಅರ್ಜುನ್‌ ರಾವ್‌, ಟಿ ಹರೀಶ್‌ ಭಂಡಾರಿ ವಾದಿಸಿದರು. ಪ್ರತಿವಾದಿಗಳನ್ನು ಬಿ ಎಂ ಅಕ್ಷಯ್‌, ಎಂ ಸಿ ನಾಗಶ್ರೀ, ಸುಮಂಗಳಾ ಗಚ್ಚಿನಮಠ, ಸುಮನಾ ಬಾಳಿಗ, ಪಿ ಎಸ್‌ ಮಾಲಿಪಾಟೀಲ್‌, ಕೆ ಎನ್‌ ಶ್ರೀನಿವಾಸ್‌, ಆರ್‌ ಸುಬ್ರಮಣ್ಯ, ಎಚ್‌ ವಿ ಹರೀಶ್‌, ಬಿ ಎಂ ಅಕ್ಷಯ್‌, ಎ ವಿ ಗಂಗಾಧರಪ್ಪ, ಎ ರವಿಶಂಕರ್‌, ಎಸ್‌ ಮಹೇಶ್‌, ಎ ನಾಗರಾಜಪ್ಪ, ಜಿ ಎಂ ಆನಂದ, ಗೀತಾದೇವಿ ಎಂ ಪಿ, ಎ ವಿ ಗಂಗಾಧರಪ್ಪ, ಜೆ ಎನ್‌ ನವೀನ್‌, ಎಚ್‌ ಕೆ ರವಿ, ವಿಶ್ವನಾಥ್‌ ಆರ್‌. ಹೆಗ್ಡೆ, ಎಂ ಸಿ ನಾಗಶ್ರೀ ಅವರು ಪ್ರತಿನಿಧಿಸಿದ್ದರು.  

Related Stories

No stories found.
Kannada Bar & Bench
kannada.barandbench.com