ಯಾವುದೇ ಪ್ರತಿಸ್ಪರ್ಧಿಯನ್ನು ಯಾವುದೇ ರೀತಿಯಲ್ಲಿ ನೇರವಾಗಿ ಉಲ್ಲೇಖಿಸದೆ ಒಂದೇ ವರ್ಗದ ಅಥವಾ ಸಂಬಂಧಿತ ಉತ್ಪನ್ನದೊಂದಿಗೆ 'ಸಾಮಾನ್ಯ ಹೋಲಿಕೆ' ಮಾಡಿ ಜಾಹೀರಾತುಗಳನ್ನು ತಯಾರಿಸಲು ಜಾಹೀರಾತುದಾರರಿಗೆ ಅನುಮತಿ ಇದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಝೈಡಸ್ ವೆಲ್‌ನೆಸ್ ಪ್ರಾಡಕ್ಟ್ಸ್ ಮತ್ತು ಡಾಬರ್ ಇಂಡಿಯಾ ನಡುವಣ ಪ್ರಕರಣ].
ಒಂದು ನಿರ್ದಿಷ್ಟ ಉತ್ಪನ್ನವು ಅಸ್ತಿತ್ವದಲ್ಲಿರುವ ಇತರ ಉತ್ಪನ್ನಗಳಿಗಿಂತ ಮೇಲು ಅಥವಾ ಉತ್ತಮವಾಗಿದೆ ಎಂದು ಬಿಂಬಿಸಲು, ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ನಕಾರಾತ್ಮಕ ಪ್ರಚಾರ ಪ್ರಾರಂಭಿಸದೆಯೇ ಉತ್ಪನ್ನದ ಶಕ್ತಿಯನ್ನು ಎತ್ತಿ ತೋರಿಸುವ ಸಾಮಾನ್ಯ ಹೋಲಿಕೆಗೆ ಅನುಮತಿ ಇದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದರು.
ಇದರಲ್ಲಿ ವಿಫಲವಾದರೆ, ಜಾಹೀರಾತಿನ ಸಾಮರ್ಥ್ಯ ಗಣನೀಯವಾಗಿ ದುರ್ಬಲಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. "ತನ್ನದೇ ಉತ್ಪನ್ನದ ವೈಶಿಷ್ಟ್ಯಗಳನ್ನು ಒತ್ತಿ ಹೇಳುವ ಸಾಮಾನ್ಯ ಹೋಲಿಕೆಯೊಂದಿಗೆ ಜಾಹೀರಾತುಗಳನ್ನು ತಯಾರಿಸುವ ಸ್ವಾತಂತ್ರ್ಯ ಜಾಹೀರಾತುದಾರನಿಗೆ ಇರಬೇಕು. ಯಾವುದೇ ಮಾರುಕಟ್ಟೆಯ ಮುಂಚೂಣಿ ಉತ್ಪನ್ನಗಳನ್ನು ಉಲ್ಲೇಖಿಸದೆ ಆ ರೀತಿ ಮಾಡಿದಾಗ ಮತ್ತು ಜಾಹೀರಾತು ಸಂಪೂರ್ಣವಾಗಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವಂತಿರದೇ ಇದ್ದಾಗ ಅಂತಹ ಆಕ್ಷೇಪಣೆ ಎತ್ತುವಂತಿಲ್ಲ" ಎಂದು ಅದು ತಿಳಿಸಿದೆ.
ತನ್ನ ಗ್ಲುಕಾನ್- ಡಿ ಹೆಸರಿನ ಗ್ಲೂಕೋಸ್ ಪುಡಿ ಉತ್ಪನ್ನವನ್ನು ಅವಹೇಳನ ಮಾಡಿರುವ ಡಾಬರ್ ಇಂಡಿಯಾದ, ಗ್ಲುಕೋಪ್ಲಸ್-ಸಿ ಆರೆಂಜ್‌ಗೆ ಸಂಬಂಧಿಸಿದ ಎರಡು ಜಾಹಿರಾತುಗಳನ್ನು ಪ್ರಸಾರ ಮಾಡದಂತೆ ತಡೆ ನೀಡಬೇಕೆಂದು ಝೈಡಸ್ ವೆಲ್‌ನೆಸ್ ಪ್ರಾಡಕ್ಟ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾ. ಪ್ರತಿಭಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಂಗಾಳಿ ಭಾಷೆಯ ಸುದ್ದಿ ವಾಹಿನಿಯಲ್ಲಿ ಈ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಇಬ್ಬರು ಹುಡುಗಿಯರು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಅವರಲ್ಲಿ ಒಬ್ಬಾಕೆ ಗ್ಲುಕೋಪ್ಲಸ್-ಸಿ ಆರೆಂಜ್ ಕುಡಿದರೆ, ಮತ್ತೊಬ್ಬಳು ಕಿತ್ತಳೆ ಗ್ಲೂಕೋಸ್ ಪುಡಿ ಹಾಕಿದ ಪಾನೀಯವನ್ನು ಸೇವಿಸಿಸುತ್ತಾಳೆ. ಗ್ಲುಕೋಪ್ಲಸ್-ಸಿ ಆರೆಂಜ್ ಕುಡಿದಾಕೆ ಸ್ಪರ್ಧೆಯಲ್ಲಿ ಗೆಲ್ಲುತ್ತಾಳೆ ಎಂಬಂತೆ ಚಿತ್ರಿಸಲಾಗಿರುವುದನ್ನು ಜೈಡುಸ್ ಆಕ್ಷೇಪಿಸಿತ್ತು.
ಉಳಿದೆಲ್ಲಾ ಕಿತ್ತಳೆ ಗ್ಲೂಕೋಸ್ ಪುಡಿಗಳು ಶಕ್ತಿ ಒದಗಿಸಲು ಸಂಪೂರ್ಣ ಅಸಮರ್ಥವಾಗಿದ್ದು ಕೇವಲ ಡಾಬರ್ ಉತ್ಪನ್ನಕ್ಕೆ ಮಾತ್ರ ಸಮಾರ್ಥ್ಯ ಇದೆ ಎಂದು ಹೇಳುವ ಮೂಲಕ ಉಳಿದ ಪಾನಿಯಗಳನ್ನು ಜಾಹೀರಾತು ಅವಹೇಳನ ಮಾಡಿದೆ ಎಂಬುದು ಅದರ ತಕರಾರಾಗಿತ್ತು.