ಜನರಲ್ ಕೌನ್ಸಲ್‌ಗಳಿಗೆ ಶಾಸನಬದ್ಧ ಮಾನ್ಯತೆ: ವಕೀಲರ ಕಾಯಿದೆಗೆ ಶೀಘ್ರ ತಿದ್ದುಪಡಿ ಮಾಡುವುದಾಗಿ ಸಚಿವ ಮೇಘವಾಲ್‌ ಭರವಸೆ

ತಿದ್ದುಪಡಿ ಜನರಲ್‌ ಕೌನ್ಸಲ್‌ಗಳಿಗೆ ಉಪಯುಕ್ತವಾಗಲಿದೆ ಎಂದಿದ್ದಾರೆ ಸಚಿವರು. ಜನರಲ್ ಕೌನ್ಸಲ್‌ಗಳಿಗೆ ಶಾಸನಬದ್ಧ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿತ್ತು.
Arjun Ram Meghwal
Arjun Ram Meghwalfacebook
Published on

ವಕೀಲರ ಕಾಯಿದೆ -1961ಕ್ಕೆ ಶೀಘ್ರದಲ್ಲೇ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಪ್ರಭಾರ) ಅರ್ಜುನ್ ರಾಮ್ ಮೇಘವಾಲ್ ಶುಕ್ರವಾರ ತಿಳಿಸಿದ್ದಾರೆ.

ಜನರಲ್‌ ಕೌನ್ಸಲ್ಸ್‌ ಅಸೋಸಿಯೇಷನ್‌ ಇಂಡಿಯಾ (ಭಾರತೀಯ ಪ್ರಧಾನ ಕಾನೂನು ಸಲಹಾಕಾರರ ಸಂಘ - ಜಿಸಿಎಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Also Read
ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆ ಜಾರಿಗೆ ಅಧಿಸೂಚನೆ ಪ್ರಕಟಿಸಿದ ಸರ್ಕಾರ

ತಿದ್ದುಪಡಿಯಿಂದ ಜನರಲ್‌ ಕೌನ್ಸಲ್‌ಗಳಿಗೆ (ಪ್ರಧಾನ ಕಾನೂನು ಸಲಹಾಕಾರರು - ಜಿಸಿ) ಅಥವಾ ಮುಖ್ಯ ಕಾನೂನು ಅಧಿಕಾರಿಗಳಿಗೆ ಉಪಯುಕ್ತವಾಗಲಿವೆ ಎಂದು ಸಚಿವರು ಹೇಳಿದರು. ಪ್ರಾಕ್ಟೀಸ್‌ ನಿರತ ವಕೀಲರಂತೆಯೇ ಜನರಲ್‌ ಕೌನ್ಸಲ್‌ಗಳಿಗೂ ಸಹ ಶಾಸನಬದ್ಧ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿತ್ತು. ಭಾರತದ ಕಾನೂನು ವೃತ್ತಿಯ ಮರುರಚನೆ, ಮರು ವ್ಯಾಖ್ಯಾನ ಹಾಗೂ ಮರು ವಿಕಸನದ ಸುತ್ತ ಕಾರ್ಯಕ್ರಮದಲ್ಲಿ ಚರ್ಚೆಗಳು ನಡೆದವು.

ಜನರಲ್‌ ಕೌನ್ಸಲ್‌ಗಳು ಕಂಪೆನಿಗಳ ಅಥವಾ ಸಂಸ್ಥೆಗಳ ಮುಖ್ಯ ಕಾನೂನು ಅಧಿಕಾರಿಗಳಾಗಿರುತ್ತಾರೆ. ಅವರು ಕಂಪೆನಿಗೆ ಸಂಬಂಧಿಸಿದ ಎಲ್ಲಾ ಕಾನೂನು ವಿಚಾರಗಳ ಮೇಲ್ವಿಚಾರಣೆ ನಡೆಸುತ್ತಾರೆ. ಕಂಪೆನಿ ಕಾರ್ಯ ನಿರ್ವಾಹಕರು ಮತ್ತು ವ್ಯವಸ್ಥಾಪಕರಿಗೆ ಅವರು ಕಾನೂನು ಸಲಹೆ ನೀಡುತ್ತಾರೆ. ಜೊತೆಗೆ ಕಂಪೆನಿ ಕಾನೂನು ಪ್ರಕಾರ ನಡೆಯುವಂತೆ ನೋಡಿಕೊಳ್ಳುತ್ತಾರೆ.

ಸಂವಾದ ಕಾರ್ಯಕ್ರಮದಲ್ಲಿ ಶಾಸನಬದ್ಧ ಮಾನ್ಯತೆ ತಮಗೆ ಇಲ್ಲ ಎಂಬುದನ್ನು ಜನರಲ್‌ ಕೌನ್ಸಲ್‌ಗಳು ತಿಳಿಸಿದಾಗ ಈ ಸಂಬಂಧ ಶೀಘ್ರದಲ್ಲಿಯೇ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು ಎಂದು ಮೇಘವಾಲ್‌ ಭರವಸೆಯಿತ್ತರು.

Also Read
ವಕೀಲರ ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಒಳಪಡುವುದಿಲ್ಲ: ಸುಪ್ರೀಂ ಕೋರ್ಟ್

ಬಳಕೆ, ಹೂಡಿಕೆ ಮತ್ತು ರಫ್ತು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರಲ್‌ ಕೌನ್ಸಲ್‌ಗಗಳು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ನೀಡುತ್ತಿರುವ ಕೊಡುಗೆಯನ್ನು ಮೇಘವಾಲ್‌ ಶ್ಲಾಘಿಸಿದರು. ಜನರಲ್‌ ಕೌನ್ಸಲ್‌ಗಳು ಕಾನೂನುಬದ್ಧ ಮಾನ್ಯತೆ ಪಡೆಯಲು ಅರ್ಹರು ಎಂದು ಪ್ರತಿಪಾದಿಸಿದರು.

ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಹಿಮಾ ಕೊಹ್ಲಿ, ಸೊಸೈಟಿ ಆಫ್‌ ಇಂಡಿಯನ್‌ ಲಾ ಫರ್ಮ್ಸ್‌ (SILF) ಅಧ್ಯಕ್ಷ ಡಾ. ಲಲಿತ್‌ ಭಾಸಿನ್‌ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com