ವಕೀಲರ ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಒಳಪಡುವುದಿಲ್ಲ: ಸುಪ್ರೀಂ ಕೋರ್ಟ್

ವಕೀಲರ ವೃತ್ತಿ ವಿಶಿಷ್ಟವಾಗಿದ್ದು ಕಕ್ಷಿದಾರರು ವಕೀಲರ ಮೇಲೆ ನೇರ ನಿಯಂತ್ರಣ ಹೊಂದಿರುವುದರಿಂದ ಅವರಿಬ್ಬರ ನಡುವಿನ ಸಂಬಂಧ ವಿಶಿಷ್ಟ ಲಕ್ಷಣಗಳನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
Lawyers
Lawyers

ವಕೀಲರ ಕಾನೂನು ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯಿದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಆ ಕಾಯಿದೆಯಡಿ ದಾವೆದಾರರು ಪರಿಹಾರ ಕೋರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ [ಬಾರ್ ಆಫ್ ಇಂಡಿಯನ್ ಲಾಯರ್ಸ್ ಮತ್ತು ಡಿಕೆ ಗಾಂಧಿ ಪಿಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ ಮತ್ತಿತರರ ನಡುವಣ ಪ್ರಕರಣ].

ವಕೀಲ ವೃತ್ತಿ ವಿಶಿಷ್ಟವಾಗಿದ್ದು ಯಾವುದೇ ವೃತ್ತಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಹೇಳಿದೆ.

ವಕೀಲರ ವೃತ್ತಿ ವಿಶಿಷ್ಟವಾಗಿದ್ದು ಕಕ್ಷಿದಾರರು ವಕೀಲರ ಮೇಲೆ ನೇರ ನಿಯಂತ್ರಣ ಹೊಂದಿರುವುದರಿಂದ ಅವರಿಬ್ಬರ ನಡುವಿನ ಸಂಬಂಧ  ವಿಶಿಷ್ಟ ಲಕ್ಷಣಗಳನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ನುಡಿದಿದೆ.

"ವಕೀಲರು ಕಕ್ಷಿದಾರರ ಸ್ವಾಯತ್ತತೆಯನ್ನು ಗೌರವಿಸಬೇಕಿದ್ದು ಕಕ್ಷಿದಾರರಿಂದ ಸ್ಪಷ್ಟ ಸೂಚನೆಗಳಿಲ್ಲದೆ ವಿನಾಯಿತಿಗಳನ್ನು ಪಡೆಯಲು ಮತ್ತು ಅಧಿಕಾರ ಉಲ್ಲಂಘಿಸಲು ಅವರು ಅರ್ಹರಾಗಿರುವುದಿಲ್ಲ. ಗಣನೀಯ ಪ್ರಮಾಣದ ನೇರ ನಿಯಂತ್ರಣವು ವಕೀಲರ ಕಕ್ಷಿದಾರರೊಂದಿಗೆ ಇರುತ್ತದೆ” ಎಂದು ಅದು ಅಭಿಪ್ರಾಯಪಟ್ಟಿದೆ.

ಪರಿಣಾಮ ಇದು ಗ್ರಾಹಕ ಸಂರಕ್ಷಣಾ ಕಾಯಿದೆಯ ವ್ಯಾಪ್ತಿಯಿಂದ ಹೊರಗುಳಿಯುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

"ಒಪ್ಪಂದವು ವೈಯಕ್ತಿಕ ಸೇವೆಯಾಗಿದ್ದು ಗ್ರಾಹಕ ಸಂರಕ್ಷಣಾ ಕಾಯಿದೆಯ  ಅಡಿಯಲ್ಲಿ ಬರುವ ಸೇವೆಯ ವ್ಯಾಖ್ಯಾನದಿಂದ ಹೊರಗಿಡಲಾಗಿದೆ" ಎಂದು ತೀರ್ಪು ಹೇಳಿದೆ.

ಸಂಬಂಧಿತವಾಗಿ , ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಭಾರತೀಯ ವೈದ್ಯಕೀಯ ಸಂಘ ಮತ್ತು ಶಾಂತಾ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1996ರಲ್ಲಿ ಹೊರಬಿದ್ದ ತೀರ್ಪನ್ನು ಮರುಪರಿಶೀಲಿಸಬೇಕಿದೆ ಎಂದು ಅದು ವಿವರಿಸಿದೆ.

ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ವೈದ್ಯಕೀಯ ವೃತ್ತಿಪರರು ಜವಾಬ್ದಾರರಾಗಿದ್ದು ಕಾಯಿದೆಯ ಅಡಿಯಲ್ಲಿ 'ಸೇವೆಗಳ' ವ್ಯಾಖ್ಯಾನ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರವನ್ನು ಒಳಗೊಳ್ಳುತ್ತದೆ ಎಂದು ಈ ಮಹತ್ವದ ತೀರ್ಪು ಹೇಳಿತ್ತು.

ಈ ತೀರ್ಪನ್ನು ಮರುಪರಿಶೀಲಿಸಬೇಕಿರುವುದರಿಂದ ವಿಸ್ತೃತ ಪೀಠಕ್ಕೆ ಉಲ್ಲಖಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೆದುರು ಪ್ರಕರಣ ಪ್ರಸ್ತಾಪಿಸಬೇಕು ಎಂದು ಅದು ಹೇಳಿದೆ.

ವಕೀಲರ ಸೇವೆಗಳಿಗೆ ಸಂಬಂಧಿಸಿದ ಪ್ರಕರಣ 2007ರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಂಬಂಧಿಸಿದ (NCDRC) ತೀರ್ಪಿನಿಂದ ಉದ್ಭವಿಸಿದೆ. ಕಕ್ಷಿದಾರ ಮತ್ತು ಅವರ ವಕೀಲರ ನಡುವಿನ ವಿತ್ತೀಯ ಒಪ್ಪಂದವು ದ್ವಿಪಕ್ಷೀಯವಾಗಿದೆ ಎಂದಿದ್ದ ತೀರ್ಪು ಅಂತಹ ಸೇವೆಗಳು ಕಾಯಿದೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿತ್ತು. ಏಪ್ರಿಲ್ 13, 2009ರಲ್ಲಿ ಸುಪ್ರೀಂ ಕೋರ್ಟ್‌ ಎನ್‌ಸಿಡಿಆರ್‌ಸಿ ತೀರ್ಪಿಗೆ ತಡೆ ನೀಡಿತ್ತು.

Related Stories

No stories found.
Kannada Bar & Bench
kannada.barandbench.com