ಪ್ರಸ್ತುತ ಚಾಲ್ತಿಯಲ್ಲಿರುವ ವಕೀಲರ ವಸ್ತ್ರ ಸಂಹಿತೆ ಭಾರತದ ಈಗಿನ ಹವಾಮಾನಕ್ಕೆ ಹೊಂದುವುದಿಲ್ಲ. ಹೀಗಾಗಿ, ಅದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಅಲಾಹಾಬಾದ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನಾಲ್ಕು ವಾರಗಳಲ್ಲಿ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠವು ಬಿಸಿಐಗೆ ಸೂಚಿಸಿದೆ. ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿದೆ.
“ಆಗಸ್ಟ್ 18ರಂದು ಪ್ರತಿಕ್ರಿಯಿಸುವಂತೆ ಒಂದನೇ ಪ್ರತಿವಾದಿಗೆ ನೋಟಿಸ್ ಜಾರಿ ಮಾಡಬೇಕು. ಒಂದು ವಾರದೊಳಗೆ ಕ್ರಮಕೈಗೊಳ್ಳಬೇಕು. ಇದೇ ಸಂದರ್ಭದಲ್ಲಿ ಪ್ರತಿವಾದಿಯು ಪ್ರತಿ- ಅಫಿಡವಿಟ್ ಸಲ್ಲಿಸಲಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಭಾರತದಲ್ಲಿ ವರ್ಷದ ಒಂಭತ್ತು ತಿಂಗಳು ಬಿಸಿಲು ಹೆಚ್ಚಿರುತ್ತದೆ. ಇದನ್ನು ವಕೀಲರ ಸಂಹಿತೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅರ್ಜಿದಾರ ಅಶೋಕ್ ಪಾಂಡೆ ಹೇಳಿದ್ದಾರೆ.
ʼಕ್ರೈಸ್ತ ಧರ್ಮದ ಪ್ರತೀಕವಾಗಿರುವ ಬ್ಯಾಂಡ್ ಧರಿಸಲು ಕ್ರೈಸ್ತ ಧರ್ಮೀಯರಲ್ಲದವರನ್ನು ಒತ್ತಾಯಿಸುವುದು ಸಂವಿಧಾನದ 25ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕುತೂಹಲದ ಸಂಗತಿ ಎಂದರೆ ಕ್ರೈಸ್ತರ ಚಿಹ್ನೆಯಾದ ಬ್ಯಾಂಡ್ ಧರಿಸುವಂತೆ ಕ್ರೈಸ್ತ ಧರ್ಮೇತರರನ್ನು ಒತ್ತಾಯಿಸುವುದು ಸಂವಿಧಾನದ 25ನೇ ವಿಧಿಯಡಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸುವ ಮೂಲಕ ಅರ್ಜಿಗೆ ಧಾರ್ಮಿಕ ಆಯಾಮವನ್ನೂ ನೀಡಲಾಗಿದೆ.
ಭಾರತದಲ್ಲಿ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿ ಪ್ರಕಾರ ವಿಧವೆಯರು ಬಿಳಿ ಸೀರೆ ಅಥವಾ ಸಲ್ವಾರ್ ಕಮೀಜ್ ಅನ್ನು ಧರಿಸುತ್ತಾರೆ. ಹೀಗಾಗಿ, ಸದ್ಯದ ವಸ್ತ್ರ ಸಂಹಿತೆ ಶಿಫಾರಸ್ಸು ಮಾಡುವಾಗ ಬಿಸಿಐ ವಿವೇಚನೆ ಮಾಡಿಲ್ಲ ಎಂದು ವಾದಿಸಲಾಗಿದೆ.
“ದೇಶದ ಹವಾಮಾನ ಪರಿಸ್ಥಿತಿ ಪರಿಗಣಿಸದೆ ಬಿಸಿಐ ವಸ್ತ್ರ ಸಂಹಿತೆ ಸೂಚಿಸಿದಾಗ, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಐಗೆ ಸರ್ಕಾರ ಸೂಚಿಸಬೇಕಿತ್ತು. ಆದರೆ, ಬೇಸಿಗೆಯಲ್ಲಿ ಅತ್ಯಂತ ಸವಾಲಿನದಾಗಿರುವ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ವಸ್ತ್ರ ಸಂಹಿತೆ ಧರಿಸಲಾಗದು ಎಂದು ಹೇಳುವ ಮೂಲಕ ವಕೀಲರ ಮೂಲಭೂತ ಹಕ್ಕನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹೀಗಾಗಿ, ವಕೀಲರ ಕಾಯಿದೆ 1961ರ ಸೆಕ್ಷನ್ 49(ಐ)(ಜಿಜಿ) ಅಡಿ ಬಿಸಿಐ ನಿಯಮಗಳು 1975ರ ನಾಲ್ಕನೇ ಅಧ್ಯಾಯದ ನಿಬಂಧನೆಗಳನ್ನು ಮನವಿ ಪ್ರಶ್ನಿಸಿದೆ.
ವಕೀಲರ ಪರಿಷತ್ ನಿಯಮಗಳ ನಾಲ್ಕನೇ ಅಧ್ಯಾಯದ ನಿಬಂಧನೆಗಳನ್ನು ಜಾರಿಗೊಳಿಸಬಾರದು ಹಾಗೂ ವಕೀಲರ ಕಾಯಿದೆ 1961ರ ಸೆಕ್ಷನ್ 49(ಐ)(ಜಿಜಿ) ತನ್ನ ವ್ಯಾಪ್ತಿ ಮೀರಿದೆ ಎಂದು ಘೋಷಿಸಬೇಕು.
ದೇಶದ ಹವಾಮಾನಕ್ಕೆ ಅನುಗುಣವಾಗಿ ವಸ್ತ್ರ ಸಂಹಿತೆ ರೂಪಿಸುವ ಸಂಬಂಧ ಹೊಸ ನಿಯಮಗಳನ್ನು ಜಾರಿ ಮಾಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು.
ವಕೀಲರು ಕಡ್ಡಾಯವಾಗಿ ಕಪ್ಪು ಕೋಟು ಧರಿಸಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಹೊರಡಿಸಿರುವ ಸುತ್ತೋಲೆಯನ್ನು ವಜಾಗೊಳಿಸಬೇಕು.