ಸರ್ಕಾರಿ ಅಧಿಕಾರಿಗಳ ನೀರಸ ವರ್ತನೆಯಿಂದ ಸರ್ಕಾರದ ವಕೀಲರಿಗೆ ಮುಜುಗರದ ಸ್ಥಿತಿ ನಿರ್ಮಾಣ: ಹೈಕೋರ್ಟ್‌ ಅಸಮಾಧಾನ

ಗಾಯಕ್ಕೆ ಉಪ್ಪು ಸವರಿದಂತೆ ಸರ್ಕಾರದ ವಕೀಲರಿಗೆ ಸೂಚನೆ ಸಹ ನೀಡಲ್ಲ. ಇದರಿಂದ ಮುಕ್ತ ನ್ಯಾಯಾಲಯದಲ್ಲಿ ಅವರನ್ನು ಮುಜುಗರದ ಸನ್ನಿವೇಶಕ್ಕೆ ನೂಕುತ್ತಾರೆ. ವಕೀಲರು ಕಕ್ಷಿದಾರರ ಮುಖವಾಣಿಗಳಷ್ಟೇ ಅಲ್ಲ; ನ್ಯಾಯಾಲಯದ ಅಧಿಕಾರಿಗಳೂ ಹೌದು ಎಂದಿರುವ ಪೀಠ.
Lawyers
Lawyers

ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾದ ಭೂದಾಖಲೆ ಇಲಾಖೆಯ ಅಧಿಕಾರಿಯೊಬ್ಬರನ್ನು ಶುಕ್ರವಾರ ತೀವ್ರ ತರಾಟೆಗೆ ಗುರಿಪಡಿಸಿದ ಕರ್ನಾಟಕ ಹೈಕೋರ್ಟ್‌ ಅವರ ಸೇವಾ ದಾಖಲೆಯಲ್ಲಿ ಪ್ರತಿಕೂಲ ಅಂಶ ದಾಖಲಿಸುವಂತೆ ಹಿರಿಯ ಅಧಿಕಾರಿಗೆ ಆದೇಶಿಸಿದ್ದು, ದಂಡವನ್ನೂ ವಿಧಿಸಿದೆ.

ಒಟ್ಟಾರೆ ಸರ್ಕಾರಿ ಅಧಿಕಾರಿಗಳ ನೀರಸ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶದ ಪ್ರತಿಯನ್ನು ರಿಜಿಸ್ಟ್ರಿಯು ಮುಖ್ಯ ಕಾರ್ಯದರ್ಶಿಗೆ ತುರ್ತಾಗಿ ಕಳುಹಿಸಬೇಕು. ಅವರು ಇದನ್ನು ಎಲ್ಲಾ ಇಲಾಖೆಗಳಿಗೂ ರವಾನಿಸಬೇಕು. ಆದೇಶದಲ್ಲಿ ಉಲ್ಲೇಖಿಸಿರುವ ವಿಚಾರಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಪಾಲಿಸಬೇಕು. ಇದು ಸರ್ಕಾರಿ ದಾವೆ ನಡೆಸುವ ವಿಚಾರದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವಾಗಿ ಇರಲಿದೆ ಎಂದು ಆದೇಶಿಸಿದೆ.

ತಂದೆ ಕಾಲವಾಗಿದ್ದು, ಅವರು ನೀಡಿರುವ ಜಮೀನಿನ ಪೋಡಿ ಮತ್ತು ದುರಸ್ತಿ ಮಾಡಿಕೊಡುವಂತೆ ಬೆಂಗಳೂರಿನ ಯಲಹಂಕ ತಾಲ್ಲೂಕಿನ ರಾಜನಕುಂಟೆ ಗ್ರಾಮದ ಟಿ ವಿ ಜಯಲಕ್ಷ್ಮಮ್ಮ ಅವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ಮೂರು ತಿಂಗಳಲ್ಲಿ ಅರ್ಜಿದಾರೆಯ ಜಮೀನು ಪೋಡಿ ಮತ್ತು ದುರಸ್ಥಿತಿಗೆ ಕ್ರಮವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ (ಎಡಿಎಲ್‌ಆರ್‌) ಮೋಹನ್‌ ಕುಮಾರ್‌ ಅವರಿಗೆ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಜಯಲಕ್ಷ್ಮಮ್ಮ ಅವರು 2022ರ ಮೇ ತಿಂಗಳಲ್ಲಿ ಎಡಿಎಲ್ಆರ್‌ಗೆ ಪ್ರತ್ಯೇಕ ಮನವಿಯನ್ನೂ ನೀಡಿದ್ದರು. ಅದಾಗ್ಯೂ, ನ್ಯಾಯಾಲಯದ ಪಾಲಿಸದ ಹಿನ್ನೆಲೆಯಲ್ಲಿ ಮೋಹನ್‌ ಕುಮಾರ್‌ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ್ದ ಪೀಠವು ನೋಟಿಸ್‌ ಜಾರಿ ಮಾಡಿ, ಆದೇಶ ಅನುಪಾಲನೆಗೆ ಸೂಚಿಸಿತ್ತು. ಅದಾಗ್ಯೂ, ಮೋಹನ್‌ ಕುಮಾರ್‌ ಅವರು ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪಾಲಿಸಲಾಗುವುದು ಅದಕ್ಕೆ ಒಂದಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರು. ಇಷ್ಟಾದರೂ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ.

ಶುಕ್ರವಾರ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾದ ಎಸ್‌ ಎಸ್‌ ಮಹೇಂದ್ರ ಅವರು “ನ್ಯಾಯಾಲಯದಲ್ಲಿ ಖುದ್ದು ಹಾಜರಿರುವ ಎಡಿಎಲ್‌ಆರ್‌ ಮೋಹನ್‌ ಕುಮಾರ್‌ ಅವರಿಗೆ ಪ್ರಕರಣದ ಕುರಿತು ಮುಂಚಿತವಾಗಿ ಮಾಹಿತಿ ನೀಡಿದ್ದರೂ ಅವರು ಸೂಕ್ತ ಸೂಚನೆ ನೀಡಿಲ್ಲ. ಹೀಗಾಗಿ, ನ್ಯಾಯಾಲಯದ ಆದೇಶದ ಅನುಸಾರ ಅನುಪಾಲನಾ ವರದಿ ಹಾಕಲಾಗಿಲ್ಲ” ಎಂದು ಹಿಂಜರಿಕೆಯಿಂದಲೇ ಪೀಠಕ್ಕೆ ವಿವರಿಸಿದರು.

ಇದರಿಂದ ಕುಪಿತಗೊಂಡ ಪೀಠವು “ಅಧಿಕಾರಿಯನ್ನು ಪ್ರಶ್ನಿಸಿದರೂ ಅವರು ಬಾಯಿ ಬಿಟ್ಟಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆದೇಶ ಅನುಪಾಲನೆಯನ್ನು ನ್ಯಾಯಾಲಯ ಬಯಸುತ್ತದೆ. ಇದನ್ನು ನಿರೀಕ್ಷಿಸಿರಲಿಲ್ಲ ಮತ್ತು ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಕಾನೂನು ಹೋರಾಟದಲ್ಲಿ ಜಯ ಸಾಧಿಸಿದ ಪಕ್ಷಕಾರರಿಗೆ ಕಾಗದದ ಆದೇಶ/ಡಿಕ್ರಿ ಮಾತ್ರ ಇರುತ್ತದೆ. ಇದು ನ್ಯಾಯಾಂಗ ಪ್ರಕ್ರಿಯೆಯ ಉದ್ದೇಶವಲ್ಲ” ಎಂದು ಆದೇಶದಲ್ಲಿ ದಾಖಲಿಸಿದೆ.

ದಿನನಿತ್ಯ ಇಂಥ ಪ್ರಕರಣಗಳು ನಮ್ಮ ಮುಂದೆ ಬರುತ್ತಿದ್ದು, ಸರ್ಕಾರಿ ಅಧಿಕಾರಿಗಳ ನೀರಸ ವರ್ತನೆಯಿಂದ ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳನ್ನು ಪ್ರತಿನಿಧಿಸುವ ವಕೀಲರು ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ. ಪ್ರತಿವಾದಿಯಾದ ಸರ್ಕಾರ ಅಥವಾ ಯಾರೇ ಆದರೂ ನ್ಯಾಯಾಲಯದ ಆದೇಶ ಪಾಲಿಸಬೇಕು. ಅದನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮಾಡಬೇಕು. ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನೋಟಿಸ್‌ ಪಡೆದ ತಕ್ಷಣವಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅದರ ಅನುಪಾಲನೆಗೆ ಎಲ್ಲಾ ಕ್ರಮವಹಿಸಬೇಕು. ಆದರೆ, ನ್ಯಾಯಾಲಯದಲ್ಲಿ ನಮ್ಮ ಅನುಭವ ಬೇರೆಯದ್ದೇ ಆಗಿದ್ದು, ಅದು ಹೇಳುವಂಥದ್ದಲ್ಲ“ ಎಂದು ಮಾರ್ಮಿಕವಾಗಿ ಆದೇಶದಲ್ಲಿ ದಾಖಲಿಸಿದೆ.

“ಸರ್ಕಾರಿ ಅಧಿಕಾರಿಗಳು ಮತ್ತು ಪ್ರಾಧಿಕಾರ ಪ್ರತಿನಿಧಿಸುವವರು ಅವರಿಗೆ ತಿಳಿದಿರುವ ಕಾರಣಗಳಿಗಾಗಿ ಮತ್ತು ಕೆಲವು ಸಂದರ್ಭದಲ್ಲಿ ಸ್ಪಷ್ಟ ಕಾರಣಗಳಿಗಾಗಿ ನೋಟಿಸ್‌ ಸ್ವೀಕರಿಸಿಯೂ ಆದೇಶ ಪಾಲಿಸುವುದಿಲ್ಲ. ಇದರ ಜೊತೆಗೆ ಗಾಯಕ್ಕೆ ಉಪ್ಪು ಸವರಿದಂತೆ ಸರ್ಕಾರದ ವಕೀಲರಿಗೆ ಸೂಚನೆಯನ್ನೂ ನೀಡುವುದಿಲ್ಲ. ಈ ಮೂಲಕ ಮುಕ್ತ ನ್ಯಾಯಾಲಯದಲ್ಲಿ ವಕೀಲರನ್ನು ಮುಜುಗರದ ಸನ್ನಿವೇಶಕ್ಕೆ ನೂಕುತ್ತಾರೆ. ವಕೀಲರು ಕಕ್ಷಿದಾರರ ಮುಖವಾಣಿಗಳಷ್ಟೇ ಅಲ್ಲ; ಅವರು ನ್ಯಾಯಾಲಯದ ಅಧಿಕಾರಿಗಳೂ ಹೌದು. ಸರ್ಕಾರ ಮತ್ತು ಅದರ ಅಧಿಕಾರಿ ವರ್ಗ ಅವರ ಕಕ್ಷಿದಾರರಾಗಿದ್ದು, ಸೂಚನೆ ನೀಡುವುದರ ಜೊತೆಗೆ ದಾಖಲೆಗಳನ್ನು ಹಂಚಿಕೊಳ್ಳುವುದು ಕರ್ತವ್ಯದ ಭಾಗ. ಇದರಿಂದ ನ್ಯಾಯಾಲಯದ ಅವಶ್ಯಕತೆಗೆ ಅನುಗುಣವಾಗಿ ದಾಖಲೆ ಸಲ್ಲಿಸಬಹುದಾಗಿರುತ್ತದೆ” ಎಂದಿದೆ.

“ಹಾಲಿ ಪ್ರಕರಣದಲ್ಲಿ ಎಡಿಎಲ್‌ಆರ್‌ ಆ ಕೆಲಸ ಮಾಡಿಲ್ಲ. ಇದಕ್ಕೆ ಸೂಕ್ತ ಸಮರ್ಥನೆಯನ್ನೂ ನೀಡಿಲ್ಲ. ಈ ನಡತೆಗೆ ವಿನಾಯಿತಿ ನೀಡಲಾಗದು. ಆರೋಪಿತ ಅಧಿಕಾರಿಗೆ 5,000 ರೂಪಾಯಿ ದಂಡ ವಿಧಿಸಿದ್ದು, ಎರಡು ವಾರಗಳಲ್ಲಿ ಅವರು ಅದನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡಬೇಕು. ಆರೋಪಿತ ಅಧಿಕಾರಿಯ ನಡೆಯನ್ನು ಖಂಡಿಸಿದ್ದು, ಈ ಸಂಬಂಧ ವ್ಯಾಪ್ತಿ ಹೊಂದಿರುವ ಹಿರಿಯ ಅಧಿಕಾರಿಯು ಆರೋಪಿತ ಅಧಿಕಾರಿಯ ಸೇವಾ ದಾಖಲೆಯಲ್ಲಿ ಪ್ರತಿಕೂಲ ಅಂಶ ದಾಖಲಿಸಬೇಕು. ಈ ರೀತಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಸೂಕ್ತ ಪ್ರಕ್ರಿಯೆ ಆರಂಭಿಸಬೇಕು. ಎರಡು ವಾರದಲ್ಲಿ ಆರೋಪಿತ ಅಧಿಕಾರಿಯು ಅನುಪಾಲನಾ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

Related Stories

No stories found.
Kannada Bar & Bench
kannada.barandbench.com