ಜಾಮೀನಿನ ಮೇಲೆ ಬಿಡುಗಡೆಯಾದ ಕೆಲ ಹೊತ್ತಿನಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ

2017ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಅವರ ವಿರುದ್ಧ ವಾರೆಂಟ್‌ ಜಾರಿಯಾಗಿತ್ತು. ಇದರಿಂದ ಜೈಲಿನಿಂದ ಬಿಡುಗಡೆ ಆಗುತ್ತಿದಂತೆಯೇ ನಾರಾಯಣ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು.
T A Narayana Gowda
T A Narayana Gowda

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಾರಾಯಣ ಗೌಡ ಅವರು ಜಾಮೀನಿನ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದರು. ಆದರೆ, ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ 2017ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಅವರ ವಿರುದ್ಧ ವಾರೆಂಟ್‌ ಜಾರಿಯಾಗಿತ್ತು. ಇದರಿಂದ ಜೈಲಿನಿಂದ ಬಿಡುಗಡೆ ಆಗುತ್ತಿದಂತೆಯೇ ನಾರಾಯಣ ಗೌಡ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದರು. ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬೆಂಗಳೂರಿನ 30ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜಿ ತಿಮ್ಮಯ್ಯ ಅವರ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ನಾರಾಯಣಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಇದರಿಂದ ನಾರಾಯಣ ಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅದರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಇದಕ್ಕೂ ಮುನ್ನ, ವಿಚಾರಣೆ ವೇಳೆ ನಾರಾಯಣ ಗೌಡ ಪರ ವಕೀಲರು, ಪೊಲೀಸರ ನಿರ್ಲಕ್ಷದಿಂದ ವಾರೆಂಟ್‌ ಜಾರಿಯಾಗಿದೆ. ಅರ್ಜಿದಾರರು ಪ್ರತಿ ದಿನ ಎಲ್ಲರಿಗೂ ಸಿಗುವಂತಹ ವ್ಯಕ್ತಿ. ಅವರು ತಲೆಮರೆಸಿಕೊಂಡು ಹೋಗುವಂಥವರಲ್ಲ. ವಾರೆಂಟ್‌ ಜಾರಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದಿದ್ದರೆ ಸ್ವತಃ ಅವರೇ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡುವಂತೆ ಕೋರಿದರು.

ಈ ವಾದಕ್ಕೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಅರ್ಜಿದಾರರಿಗೆ 2017ರಲ್ಲಿ ಜಾಮೀನು ದೊರೆತಿದೆ. ಬಳಿಕ ನಿಗದಿತ ದಿನಾಂಕಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅರ್ಜಿದಾರರು ನ್ಯಾಯಾಲಯಕ್ಕೆ ಹಾಜರಾಗದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂಬ ಅರಿವು ಅವರಿಗೆ ಇರಬೇಕಿತ್ತು. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರು.

Also Read
ಕನ್ನಡ ನಾಮಫಲಕ ಹೋರಾಟ: ನಾರಾಯಣಗೌಡ ಸೇರಿ 53 ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ

ಅದಕ್ಕೆ ನಾರಾಯಣಗೌಡ ಪರ ವಕೀಲರು, ಅರ್ಜಿದಾರರು ನ್ಯಾಯಾಲಯಕ್ಕೆ ಬಹಳ ಗೌರವ ಕೊಡುವ ವ್ಯಕ್ತಿ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಪೊಲೀಸರು ಅರ್ಜಿದಾರರಿಗೆ ತಲುಪಿಸಿಲ್ಲ. ಇದರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು. ಅದಕ್ಕೆ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತನ್ನು ತಪ್ಪದೇ ಪಾಲಿಸಲಾಗುವುದು ಎಂದು ಭರವಸೆ ನೀಡಿದರು.

ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಇದೇ ವೇಳೆ ಅನಾರೋಗ್ಯಕ್ಕೆ ಗುರಿಯಾಗಿರುವ ಅರ್ಜಿದಾರರಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸುವಂತೆ ಪೊಲೀಸರಿಗೆ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com