ಜಾಲತಾಣದಲ್ಲಿ ಗ್ಯಾಂಗ್‌ ರೇಪ್‌ ವಿಡಿಯೊ: ಬಾಂಗ್ಲಾದ 7 ಮಂದಿಗೆ ಜೀವಾವಧಿ, ಒಬ್ಬಳಿಗೆ 20 ವರ್ಷ ಸಜೆ ವಿಧಿಸಿದ ನ್ಯಾಯಾಲಯ

ಆರೋಪಿಗಳು ಬಾಂಗ್ಲಾ ಮಹಿಳೆಯ ಜೊತೆ ಲೈಂಗಿಕವಾಗಿ ಮೃಗೀಯವಾಗಿ ವರ್ತಿಸಿರುವುದಲ್ಲದೆ, ಆಕೆಯನ್ನು ಅತ್ಯಾಚಾರಗೈದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ ಹೇಯ ಮನಸ್ಥಿತಿಯನ್ನು ಪ್ರದರ್ಶಿಸಿದ್ದರು.
ಜಾಲತಾಣದಲ್ಲಿ ಗ್ಯಾಂಗ್‌ ರೇಪ್‌ ವಿಡಿಯೊ: ಬಾಂಗ್ಲಾದ 7 ಮಂದಿಗೆ ಜೀವಾವಧಿ, ಒಬ್ಬಳಿಗೆ 20 ವರ್ಷ ಸಜೆ ವಿಧಿಸಿದ ನ್ಯಾಯಾಲಯ

ಬೆಂಗಳೂರಿನ ನಿರ್ಭಯಾ ಅತ್ಯಾಚಾರ ಪ್ರಕರಣ ಎಂದೇ ಬಿಂಬಿತವಾಗಿದ್ದ, ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಬಾಂಗ್ಲಾದೇಶದ ಮಹಿಳೆಯ ಮೇಲಿನ ಭೀಕರ ಅತ್ಯಾಚಾರ ಪ್ರಕರಣದಲ್ಲಿ ಏಳು ಮಂದಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ. ಘಟನೆ ನಡೆದ ಒಂದು ವರ್ಷದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿರುವ ದೃಷ್ಟಿಯಿಂದಲೂ ಈ ತೀರ್ಪು ಚಾರಿತ್ರಿಕವಾಗಿದೆ.

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದ ಎನ್‌ ಸುಬ್ರಮಣ್ಯ ಅವರು ತೀರ್ಪು ಪ್ರಕಟಿಸಿದ್ದಾರೆ.

ಬಾಂಗ್ಲಾದೇಶದ ಮಹಿಳೆಯ ಮೇಲೆ ಬರ್ಬರವಾಗ ಲೈಂಗಿಕ ದೌರ್ಜನ್ಯವೆಸಗಿ ಗುಪ್ತಾಂಗಕ್ಕೆ ಮದ್ಯದ ಬಾಟಲಿ ಮತ್ತು ಕಾಲ್ಬೆರಳು ಹಾಕಿ ಮೃಗೀಯವಾಗಿ ವರ್ತಿಸುವುದಲ್ಲದೇ, ಆಕೆಯ ಜೊತೆಗಿನ ಬಲವಂತದ ಸಂಭೋಗವನ್ನು ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪೈಶಾಚಿಕ ಮನಸ್ಥಿತಿ ಮೆರೆದಿದ್ದ ಬಾಂಗ್ಲಾದೇಶದ ಒಂಭತ್ತು ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದ್ದು, ಈ ಪೈಕಿ ಏಳು ಮಂದಿಗೆ ಜೀವಾವಧಿ ಹಾಗೂ ಆರನೇ ಮಹಿಳಾ ಆರೋಪಿಗೆ 20 ವರ್ಷಗಳ ಕಠಿಣ ಸಜೆ ವಿಧಿಸಿದೆ. ವಿದೇಶಿಯರ ಕಾಯಿದೆ ಸೆಕ್ಷನ್‌ 14ರ ಅಡಿ ಒಂಭತ್ತನೇ ಆರೋಪಿಗೆ ಐದು ವರ್ಷ ಶಿಕ್ಷೆ ಮತ್ತು ₹1,000 ದಂಡ ವಿಧಿಸಿ ನ್ಯಾಯಾಲಯ ಆದೇಶ ಮಾಡಿದೆ.

ಐಪಿಸಿ ಸೆಕ್ಷನ್‌ 376-ಡಿ ಅಪರಾಧಕ್ಕಾಗಿ ಬಾಂಗ್ಲಾದೇಶದ ಆರೋಪಿಗಳಾದ ಚಾಂದ್‌ ಮಿಯಾ ಬಿಸ್ವಾಸ್‌ ಅಲಿಯಾಸ್‌ ಸೋಬುಜ್‌ ಶೇಖ್‌, ಮೊಹಮ್ಮದ್‌ ರಿಫಾಕದುಲ್‌ ಇಸ್ಲಾಂ ರಿದೊಯ್‌ ಅಲಿಯಾಸ್‌ ಟಿಕ್‌ಟಾಕ್‌ ಹೃದೊಯ್‌, ಮೊಹಮ್ಮದ್‌ ಅಲ್‌ಮಿನ್‌ ಹುಸ್ಸೇನ್‌ ಅಲಿಯಾಸ್‌ ರಫ್ಸಾನ್‌ ಮೊಂಡಲ್‌, ರಾಕಿಬುಲ್‌ ಇಸ್ಲಾಂ ಅಲಿಯಾಸ್‌ ಸಾಗರ್‌, ಮೊಹಮ್ಮದ್‌ ಬಾಬು ಮೊಲ್ಲಾ ಅಲಿಯಾಸ್‌ ಬಾಬು ಶೇಖ್‌, ಮೊಹಮ್ಮದ್‌ ದಲೀಮ್‌ ಮತ್ತು ಮೊಹಮ್ಮದ್‌ ಅಜೀಂ ಹುಸ್ಸೇನ್‌ಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಆರನೇ ಆರೋಪಿ ತಾನಿಯಾ ಖಾನ್‌ಳಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಒಂಭತ್ತನೇ ಆರೋಪಿ ಜಮಾಲ್‌ ಸೇರಿದಂತೆ ಮೊದಲ ಎಂಟು ಆರೋಪಿಗಳಿಗೆ ಅನೈತಿಕ ಮಾನವ ಕಳ್ಳಸಾಗಣೆ ಕಾಯಿದೆ ಸೆಕ್ಷನ್‌ 4 ಮತ್ತು 6ರ ಅಡಿ ಐದು ವರ್ಷ ಶಿಕ್ಷೆ ವಿಧಿಸಲಾಗಿದ್ದು, ತಲಾ ₹1,000 ದಂಡ ವಿಧಿಸಲಾಗಿದೆ. ಒಂಭತ್ತನೇ ಅಪರಾಧಿಯ ಕಾರಾಗೃಹ ವಾಸ ಮುಗಿದ ಬಳಿಕ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲು ಆದೇಶಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ಅಡಿ ಮೊದಲ ಎಂಟು ಮಂದಿ ಆರೋಪಿಗಳಿಗೆ ಮೂರು ವರ್ಷ ಜೈಲು ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. ವಿದೇಶಿಯರ ಕಾಯಿದೆ ಸೆಕ್ಷನ್‌ 14ರ ಅಡಿ ಮೊದಲ ಒಂಭತ್ತು ಆರೋಪಿಗಳಿಗೆ ಐದು ವರ್ಷ ಜೈಲು ವಿಧಿಸಲಾಗಿದ್ದು, ತಲಾ ₹1,000 ದಂಡ ವಿಧಿಸಲಾಗಿದೆ. ಈ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಚಾಲ್ತಿಗೆ ಬರಲಿವೆ. ಉಳಿದ ಆರೋಪಿಗಳಾದ ತೆಲಂಗಾಣದ ಅಖಿ, ಬಾಂಗ್ಲಾದೇಶದ ಜನ್ಮಾ ಕಥೂನ್‌ ಮತ್ತು ಶೊಪಾ ಖತೂನ್‌ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ.

ತನಿಖೆಯ ಬಗ್ಗೆ ನ್ಯಾಯಾಲಯದ ಮೆಚ್ಚುಗೆ

ವಿಡಿಯೊ ಆಧರಿಸಿ, ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಪೊಲೀಸರು ನೈಜ ಅಪರಾಧಿಗಳು ಮತ್ತು ಸಂತ್ರಸ್ತೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪ್ರಕರಣದ ತನಿಖೆಯು ಅತ್ಯಂತ ವ್ಯವಸ್ಥಿತ ಮತ್ತು ಪರಿಪೂರ್ಣವಾಗಿ ನಡೆದಿದ್ದು, ಯಾವುದೇ ತಪ್ಪಿಗೆ ಅವಕಾಶವಾಗಿಲ್ಲ. ಅತ್ಯಂತ ಸುಧಾರಿತ ರೀತಿಯಲ್ಲಿ ನಡೆದ ಈ ತನಿಖೆಯು ಅತ್ಯುತ್ತಮ ತನಿಖೆಯಾಗಿದೆ. ತನಿಖಾಧಿಕಾರಿ ಮತ್ತು ಅವರ ಸಹೋದ್ಯೋಗಿಗಳ ತಂಡದ ಕೆಲಸ ಶ್ಲಾಘನೀಯ. ಹೇಯ ಕೃತ್ಯಗಳ ತನಿಖೆಯನ್ನು ಈ ರೀತಿ ನಡೆಸಿದರೆ ಅಪರಾಧಿಗಳು ತಪ್ಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹಾಲಿ ಪ್ರಕರಣದಲ್ಲಿ ಆರೋಪಿಗಳು ಬಲವಂತದ ಲೈಂಗಿಕ ಸಂಭೋಗದಂಥ ಹೇಯ ಕೃತ್ಯವನ್ನು ವಿಡಿಯೊ ಚಿತ್ರೀಕರಣ ಮಾಡುವ ಮೂಲಕ ತಮ್ಮ ಸಮಾಧಿಯನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಸದರಿ ಪ್ರಕರಣದ ವಿಚಾರಣೆ ಮತ್ತು ಅಂತಿಮ ತೀರ್ಪಿಗೆ ಆರೋಪಿಗಳೇ ನೇರ ಹೊಣೆಗಾರರಾಗಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಆರೋಪಿಗಳ ವಿರುದ್ಧ ಸಾಕ್ಷಿ ನುಡಿಯುವ ಮೂಲಕ ಸಂತ್ರಸ್ತೆಯು ಅಪಾಯಕ್ಕೆ ಒಡ್ಡಿಕೊಂಡಿದ್ದಾರೆ. ಬಾಂಗ್ಲಾದೇಶದ ನಿವಾಸಿಗಳಾದ ಆರೋಪಿಗಳು ಅಕ್ರಮವಾಗಿ ಭಾರತ ಪ್ರವೇಶಿಸಿ, ಬಹುಕಾಲ ಇಲ್ಲಿ ಉಳಿಯುವ ಜೊತೆಗೆ ಇಂಥ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆರೋಪಿಗಳು ಇಡೀ ಸಮಾಜಕ್ಕೆ ಬೆದರಿಕೆಯಾಗಿದ್ದಾರೆ. ಆರೋಪಿಗಳು ಕ್ರೂರ ಅಪರಾಧಿಗಳಾಗಿದ್ದು, ಮಹಿಳೆಯರ ವಿರುದ್ಧ ಇಂಥ ಹೇಯ ಮತ್ತು ಕ್ರೂರ ಅಪರಾಧಗಳಲ್ಲಿ ಭಾಗಿಯಾಗಲು ಹೇಸುವುದಿಲ್ಲ. ತಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮಹಿಳೆಯರಿಗೆ ಈ ರೀತಿ ಮಾಡಲಾಗುವುದು ಎಂಬ ಸಂದೇಶವನ್ನು ನೀಡುವ ಉದ್ದೇಶ ಹೊಂದಿದ್ದಾರೆ. ಸಂತ್ರಸ್ತೆಗೆ ಚಿತ್ರ ಹಿಂಸೆ ನೀಡುವುದರ ಜೊತೆಗೆ ಆಕೆಯ ಮೇಲೆ ಮೃಗೀಯ ಕೃತ್ಯ ಎಸಗಿದ್ದಾರೆ. ಇಂಥ ಘೋರ ಅಪರಾಧ ಎಸಗಲು ಆರೋಪಿಗಳಿಗೆ ಭಾರತ ಮತ್ತು ಹೊರ ದೇಶಗಳಲ್ಲಿ ಇಂಥ ಸಂಪರ್ಕವಿದೆ. ಈ ದೃಷ್ಟಿಯಿಂದ ಹಾಲಿ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಯಾವುದೇ ದೃಷ್ಟಿಯಿಂದಲೂ ಆರೋಪಿಗಳು ಮುಗ್ಧರು ಎಂದು ತೋರಿಸಲು ದಾಖಲೆಗಳು ಇಲ್ಲ. ವಿಡಿಯೊದಲ್ಲಿ ಸಂತ್ರಸ್ತೆಯ ಮೇಲೆ ಆರೋಪಿಗಳು ಎಸಗಿರುವ ಕೃತ್ಯವನ್ನು ಒಪ್ಪಿಕೊಂಡಿದ್ದು, ತಮ್ಮ ಲಿಖಿತ ಹೇಳಿಕೆಯಲ್ಲಿ ಯಾವುದೇ ವಿವರಣೆ ನೀಡಿಲ್ಲ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ: 2020ರ ಅಕ್ಟೋಬರ್‌ನಿಂದ 2021ರ ಮಾರ್ಚ್‌ ಅವಧಿಯಲ್ಲಿ ಸಂತ್ರಸ್ತೆ ಮತ್ತು ಇನ್ನೊಬ್ಬಾಕೆಯನ್ನು ವೇಶ್ಯಾವಾಟಿಕೆ ನಡೆಸಲು ಬಾಂಗ್ಲಾದೇಶದಿಂದ ಭಾರತಕ್ಕೆ ಆರೋಪಿಗಳು ಕರೆಸಿಕೊಂಡಿದ್ದರು. ಬೆಂಗಳೂರಿನ ರಾಮಮೂರ್ತಿ ನಗರದ ಕರಿಗೌಡ ಲೇಔಟ್‌ನಲ್ಲಿನ ಮನೆಯೊಂದರಲ್ಲಿ 2021ರ ಮೇ 18 ಮತ್ತು ಮೇ 19ರಂದು ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 1.30ರವರೆಗೆ ಸಂತ್ರಸ್ತೆ ಮೇಲೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿದ್ದರು. ಎರಡು ಮತ್ತು ಮೂರನೇ ಆರೋಪಿಗಳಾದ ಮೊಹಮ್ಮದ್‌ ರಿಫಾಕದುಲ್‌ ಇಸ್ಲಾಂ ರಿದೊಯ್‌ ಮತ್ತು ಮೊಹಮ್ಮದ್‌ ಅಲ್‌ಮಿನ್‌ ಹುಸ್ಸೇನ್‌ ಸಂತ್ರಸ್ತೆಯ ಬಟ್ಟೆ ಹರಿದು ಆಕೆಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ಹಾಕಿ ಚಿತ್ರ ಹಿಂಸೆ ನೀಡಿದ್ದರು. ಏಳನೇ ಆರೋಪಿ ಮೊಹಮ್ಮದ್‌ ದಲೀಮ್‌ ಅದನ್ನು ವಿಡಿಯೊ ಮಾಡಿದ್ದನು. ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ ಎಸಗಿದ್ದ ವಿಡಿಯೊಗಳನ್ನು ಆರೋಪಿಗಳು ವಾಟ್ಸಾಪ್, ಯೂಟ್ಯೂಬ್‌ ಮತ್ತಿತರ ಕಡೆ ಹರಿಯಬಿಟ್ಟಿದ್ದರು.

ಘಟನೆಗೆ ಬೆಳಕಿಗೆ ಬಂದಿದ್ದು ಹೇಗೆ?

ಬೆಂಗಳೂರಿನ ವೈಟ್‌ಫೀಲ್ಡ್‌ ಠಾಣೆಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತರಾಗಿದ್ದ ಮನೋಜ್‌ ಕುಮಾರ್‌ ಅವರಿಗೆ 2021ರ ಮೇ 27ರಂದು ಮಧ್ಯಾಹ್ನ 3.40ರ ಸುಮಾರಿಗೆ ಅವರ ಬ್ಯಾಚ್‌ಮೇಟ್‌ ಒಬ್ಬರು ಸ್ಥಳ ಒಳಗೊಂಡು ವಿಡಿಯೊ ಲಿಂಕ್‌ ಅನ್ನು ಕಳುಹಿಸಿದ್ದರು. ಇದನ್ನು ಡೌನ್‌ಲೋಡ್‌ ಮಾಡಿ ಪರಿಶೀಲಿಸಿದ್ದ ಮನೋಜ್‌ ಅವರು ಸಾಮೂಹಿಕ ಅತ್ಯಾಚಾರ ಎಸಗಿದ್ದರ ಸ್ಥಳವನ್ನು ಪತ್ತೆ ಹಚ್ಚಿಸಿದ್ದರು. ಇದನ್ನು ಆಧರಿಸಿ ಕರಿಗೌಡ ಲೇಔಟ್‌ನಲ್ಲಿದ್ದ ಮನೆಗೆ ತೆರಳಿದ್ದರು. ಅಲ್ಲಿ ಎರಡನೇ ಆರೋಪಿ ಮೊಹಮ್ಮದ್‌ ರಿಫಾಕದುಲ್‌ ಇಸ್ಲಾಂ ರಿದೊಯ್‌, ನಾಲ್ಕನೇ ಆರೋಪಿ ರಾಕಿಬುಲ್‌ ಇಸ್ಲಾಂ, ಐದನೇ ಆರೋಪಿ ಮೊಹಮ್ಮದ್‌ ಬಾಬು ಮೊಲ್ಲಾ, ಹತ್ತನೇ ಆರೋಪಿ ಅಖಿ, ಹನ್ನೊಂದನೇ ಆರೋಪಿ ಜನ್ಮಾ ಕಥೂನ್‌ ಮತ್ತು ಹನ್ನೆರಡನೇ ಆರೋಪಿಯಾದ ಶೊಂಪಾ ಖತೂನ್ ಇದ್ದರು. ವಿಡಿಯೊ ತೋರಿಸಿ ಅವರನ್ನು ಮೇ 28ರಂದು ಬಂಧಿಸಲಾಗಿತ್ತು. ಬಳಿಕ ಇತರೆ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ವೀರಣ್ಣ ತಿಗಾಡಿ ಅವರು ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com