ನಿಕಟ ಸಂಬಂಧಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸಲಿಂಗ ಯುವತಿಯರಿಗೆ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ಬುಧವಾರ ಆದೇಶಿಸಿದೆ [ಅಫಿಫಾ ಇತರರು ಹಾಗೂ ಪೊಲೀಸ್ ಮಹಾನಿರ್ದೇಶಕರು ಇನ್ನಿತರರ ನಡುವಣ ಪ್ರಕರಣ].
ಅಫಿಫಾ ಮತ್ತು ಸುಮಯ್ಯ ಜೋಡಿಗೆ ಪೋಷಕರು ಮತ್ತು ಅವರ ಆಪ್ತೇಷ್ಟರಿಂದ ರಕ್ಷಣೆ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಅವರು ನೀಡಿದ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಅಫಿಫಾ ಅವರ ಪೋಷಕರಿಗೆ ಈ ಕುರಿತಂತೆ ನ್ಯಾಯಾಲಯ ನೋಟಿಸ್ ನೀಡಿದೆ.
ತನ್ನ ಪೋಷಕರ ಸುಪರ್ದಿಯಲ್ಲಿದ್ದ ವೇಳೆ ತನ್ನನ್ನು ಕೋರಿಕ್ಕೋಡ್‌ನ ಆಸ್ಪತ್ರೆಗೆ ಕರೆದೊಯ್ದು ಬಲವಂತವಾಗಿ ಲಿಂಗಪರಿವರ್ತನೆ ಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಅಫಿಫಾ ಮತ್ತು ಆಕೆಯ ಸಂಗಾತಿ ಸುಮಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಅಫಿಫಾ ದೂರಿದ್ದಾರೆ.
ತನ್ನ ಸಲಿಂಗ ಸಂಗಾತಿಯನ್ನು ಆಕೆಯ ಹೆತ್ತವರು ತನ್ನಿಂದ ಬಲವಂತವಾಗಿ ಬೇರ್ಪಡಿಸಿದ್ದಾರೆ ಎಂದು ಆರೋಪಿಸಿ ಜೋಡಿಯಲ್ಲಿ ಒಬ್ಬರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ತನ್ನ ಸಂಬಂಧವನ್ನು ನಿರಾಕರಿಸಿದ ಯುವತಿ ಪೋಷಕರೊಟ್ಟಿಗೇ ತೆರಳುವುದಾಗಿ ತಿಳಿಸಿದ್ದರಿಂದ ಕೆಲ ವಾರಗಳ ಹಿಂದೆ ನ್ಯಾಯಾಲಯ ಹೇಬಿಯಸ್ ಕಾರ್ಪಸ್ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.