ಪ್ರಮಾಣ ವಚನ ಸ್ವೀಕಾರದ ಬಳಿಕ ನ್ಯಾಯಾಧೀಶರನ್ನು ಸಂವಿಧಾನ ಮುನ್ನಡೆಸಬೇಕೇ ವಿನಾ ರಾಜಕೀಯವಲ್ಲ: ಸಿಜೆಐ ರಮಣ

ನ್ಯಾಯಾಂಗದಿಂದ ನಿವೃತ್ತಿ ಪಡೆದರೂ ಸಾರ್ವಜನಿಕ ಜೀವನದಲ್ಲಿ ಮುಂದುವರೆಯುವೆ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ ಸಿಜೆಐ.
CJI NV Ramana
CJI NV Ramana
Published on

ಪ್ರಮಾಣ ವಚನ ಸ್ವೀಕಾರದ ಬಳಿಕ ನ್ಯಾಯಾಧೀಶರನ್ನು ಸಂವಿಧಾನ ಮುನ್ನಡೆಸಬೇಕೇ ವಿನಾ ರಾಜಕೀಯವಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಸೋಮವಾರ ಕಿವಿಮಾತು ಹೇಳಿದರು.

ನವದೆಹಲಿಯ ʼಸೊಸೈಟಿ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ʼ ಮತ್ತು ಅಮೆರಿಕದ ʼಜಾರ್ಜ್‌ಟೌನ್‌ ವಿವಿ ಕಾನೂನು ಕೇಂದ್ರʼ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ 'ತುಲನಾತ್ಮಕ ಸಾಂವಿಧಾನಿಕ ಕಾನೂನು ಸಂವಾದ' ವೆಬಿನಾರ್‌ನಲ್ಲಿ ʼವಿಶ್ವದ ಅತಿ ದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳ ಸುಪ್ರೀಂ ಕೋರ್ಟ್‌ಗಳ ತುಲನೆʼ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಭಾಷಣಕಾರರಾಗಿ ಪಾಲ್ಗೊಂಡಿದ್ದರು.

“ತೀರ್ಪು ನೀಡುವ ಕೆಲಸ ರಾಜಕೀಯವಲ್ಲ ಮತ್ತು ಜನರು ಅದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ” ಎಂಬ ನ್ಯಾ. ಬ್ರೇಯರ್‌ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಿಜೆಐ “ನ್ಯಾಯಾಧೀಶರ ಕೆಲಸ ರಾಜಕೀಯವಲ್ಲ ಎಂಬ ನ್ಯಾ. ಬ್ರೇಯರ್‌ ಅವರ ಮಾತನ್ನು ಇಷ್ಟಪಡುತ್ತೇನೆ. ನೀವೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರೆ ಅಲ್ಲಿಂದ ಮುಂದಕ್ಕೆ ರಾಜಕೀಯ ಪ್ರಸ್ತುತವಾಗುವುದಿಲ್ಲ. ಸಂವಿಧಾನ ನಮಗೆ ಮಾರ್ಗದರ್ಶನ ಮಾಡುತ್ತದೆ” ಎಂದು ಹೇಳಿದರು.

Also Read
[ನ್ಯಾಯಾಂಗ ಮೂಲಸೌಕರ್ಯ] ಹಣವಷ್ಟೇ ಸಾಲದು ಶಾಸನಾತ್ಮಕ ವ್ಯವಸ್ಥೆಯನ್ನೂ ಕೇಳುತ್ತಿದ್ದೇವೆ: ಸಿಜೆಐ ರಮಣ

“ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ರಾಜೀ ಮಾಡಿಕೊಳ್ಳಲು ಸಾಧ್ಯ ಇಲ್ಲದೇ ಇರುವಂಥದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜನ ನ್ಯಾಯಾಂಗವನ್ನು ನಂಬುತ್ತಾರೆ. ಭಾರತದಲ್ಲಿ ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಿಸುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಇದನ್ನು ತಿದ್ದಲು ನಾನು ಇಚ್ಛಿಸುವೆ. ನೇಮಕಾತಿಯನ್ನು ಸುದೀರ್ಘ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಅನೇಕ ಭಾಗೀದಾರರ ಜೊತೆ ಚರ್ಚಿಸಲಾಗುತ್ತದೆ. ಅಂತಹ ಭಾಗೀದಾರರಲ್ಲಿ ಕಾರ್ಯಾಂಗ ಕೂಡ ಒಂದು. ಅಂತಿಮವಾಗಿ ಭಾರತದ ರಾಷ್ಟ್ರಪತಿ, ದೇಶದ ಮುಖ್ಯಸ್ಥರ ಹೆಸರಿನಲ್ಲಿ ಸರ್ಕಾರ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತದೆ ಎಂದು ಒತ್ತಿಹೇಳಲು ಬಯಸುತ್ತೇನೆ” ಎಂಬುದಾಗಿ ವಿವರಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ನಾಲ್ಕು ಮಂದಿ ಮಹಿಳಾ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಜೆಐ ಈ ನಿಟ್ಟಿನಲ್ಲಿ ಸಾಕಷ್ಟು ದೂರ ಸಾಗಬೇಕಿದ್ದು ಇದು ಆರಂಭಿಕ ಹೆಜ್ಜೆಯಾಗಿದೆ ಎಂದರು. ನ್ಯಾಯಾಂಗ ಮೂಲ ಸೌಕರ್ಯ ಕುರಿತಂತೆ ಪ್ರಸ್ತಾಪಿಸಿದ ನ್ಯಾ. ರಮಣ ಅವರು ಬ್ರಿಟಿಷರು ದೇಶ ತೊರೆದ ಬಳಿಕ ಬಹುತೇಕ ನ್ಯಾಯಾಲಯಗಳು ಆಧುನೀಕರಣಗೊಂಡಿಲ್ಲ ಎಂದು ತಿಳಿಸಿದರು.

ಇದೇ ವೇಳೆ ನಿವೃತ್ತಿಯ ವಯೋಮಾನದ ಬಗ್ಗೆ ಪ್ರಸ್ತಾಪಿಸಿದ ಅವರು “65ನೇ ವರ್ಷಕ್ಕೆ ನಿವೃತ್ತಿಯಾಗುವುದು ತೀರಾ ಬೇಗ ಆಯಿತು. ಹೈಕೋರ್ಟ್, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ, ಸಿಜೆಐ ಆಗಿ ಸುಮಾರು 22 ವರ್ಷ ಕಾಲ ಕೆಲಸ ಮಾಡಿದ್ದೇನೆ. ನಾವು ಹುದ್ದೆಗೆ ಸೇರ್ಪಡೆಯಾಗುವಾಗಲೇ ನಮ್ಮ ನಿವೃತ್ತಿಯ ದಿನ ತಿಳಿದಿರುತ್ತದೆ. ಇದಕ್ಕೆ ಯಾರೂ ಹೊರತಲ್ಲ. ಆದರೆ, ನನ್ನಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಶಕ್ತಿ ಇದೆ. ನಾನು ಜನರೊಂದಿಗೆ ಇರಬಯಸುತ್ತೇನೆ. ನನ್ನ ವಿದ್ಯಾರ್ಥಿ ಜೀವನದಿಂದಲೂ ಇದು ನನ್ನ ಸ್ವಭಾವ. ನಾನು ಸ್ಪಷ್ಟವಾಗಿ ಹೇಳಬಹುದಾದ ಒಂದು ಅಂಶವೆಂದರೆ ನ್ಯಾಯಾಂಗದಿಂದ ನಿವೃತ್ತಿ ಪಡೆದ ಮಾತ್ರಕ್ಕೆ ಸಾರ್ವಜನಿಕ ಜೀವನದಿಂದೇನೂ ನಿವೃತ್ತಿಯಾಗುವುದಿಲ್ಲ” ಎಂದು ಅವರು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುದ್ರಿತ ವೀಕ್ಷಣೆಗೆ ಯೂಟ್ಯೂಬ್‌ ಲಿಂಕ್‌ ಗಮನಿಸಿ:

Kannada Bar & Bench
kannada.barandbench.com