ಬಾಲ ಆರೋಪಿಗಳ ವಯಸ್ಸು ಪರಿಶೀಲನೆ 15 ದಿನಗಳ ಒಳಗೆ ಪೂರ್ಣಗೊಳ್ಳಬೇಕು: ದೆಹಲಿ ಹೈಕೋರ್ಟ್‌

ಬಾಲ ಆರೋಪಿಯ ವಯಸ್ಸು ಪರಿಶೀಲನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಕೋರಿಕೆಯನ್ನು ಪರಿಗಣಿಸಿ ಆದ್ಯತೆ ನೀಡಬೇಕು ಎಂದು ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
Child in conflict with law, Juvenile Justice Act
Child in conflict with law, Juvenile Justice Act

ಬಾಲ ಆರೋಪಿಗಳು ಭಾಗಿಯಾದ ಅಪರಾಧಗಳನ್ನು ತನಿಖೆ ಮಾಡುವ ತನಿಖಾ ಅಧಿಕಾರಿಗಳು ಆರೋಪಿಗಳ ವಯಸ್ಸಿನ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ವಯಸ್ಸು ಪತ್ತೆ ಪರೀಕ್ಷೆಯ ದಾಖಲೆಯನ್ನು (ಆಸಿಫಿಕೇಶನ್) ಬಾಲ ನ್ಯಾಯ ಮಂಡಳಿ (ಜೆಜೆಬಿ) ನಿರ್ದೇಶಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಖಚಿತಪಡಿಸಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.

“ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಬಾಲಾಪರಾಧಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಆಪಾದಿತ ಅಪರಾಧಗಳ ಸ್ವರೂಪವನ್ನು ಲೆಕ್ಕಿಸದೆ, ವಯಸ್ಸಿನ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿ ಸಲ್ಲಿಸಿದ 15 ದಿನಗಳಲ್ಲಿ ಪರಿಶೀಲಿಸಿ, ಬಾಲಾಪರಾಧಿಗಳ ವಯಸ್ಸನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಬಾಲ ನ್ಯಾಯ ಮಂಡಳಿ (ಜೆಜೆಬಿ) ಖಚಿತಪಡಿಸಬೇಕಿದೆ” ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ಮೃದುಲ್‌ ಮತ್ತು ಅನೂಪ್‌ ಜೈರಾಮ್‌ ಭಂಭಾನಿ ಹೇಳಿದ್ದಾರೆ.

ಬಾಲ ಆರೋಪಿಯ ವಯಸ್ಸು ಪರಿಶೀಲನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಕೋರಿಕೆಯನ್ನು ಪರಿಗಣಿಸಿ ಆದ್ಯತೆ ನೀಡಬೇಕು ಎಂದು ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

“ವಯಸ್ಸಿನ ನಿರ್ಣಯಕ್ಕಾಗಿ ದಾಖಲಾತಿಗಳನ್ನು ಒದಗಿಸಲು ಅಥವಾ ಬಾಲಾಪರಾಧಿಯ ಮೇಲೆ ವಯಸ್ಸು ಪತ್ತೆ ಪರೀಕ್ಷೆಯನ್ನು ನಡೆಸಲು ತನಿಖಾ ಅಧಿಕಾರಿ ಮನವಿ ಮಾಡಿದ ಎಲ್ಲಾ ವ್ಯಕ್ತಿಗಳು / ಶಿಕ್ಷಣ ಸಂಸ್ಥೆಗಳು / ವೈದ್ಯಕೀಯ ಸಂಸ್ಥೆಗಳು / ಸರ್ಕಾರಿ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ನಿರ್ದೇಶಿಸಲಾಗಿದೆ. ಮೇಲೆ ನಿಗದಿಗೊಳಿಸಿದ ಸಮಯದ ಮಿತಿಯಲ್ಲಿ ಅದನ್ನು ಪಾಲಿಸುವ ಸಂಬಂಧ ಅಗತ್ಯ ಕ್ರಮ ಮತ್ತು ಪ್ರಕ್ರಿಯೆ ಅನುಸರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಪುನರ್ವಸತಿ ಕೇಂದ್ರದಲ್ಲಿ ಬಾಲಾಪರಾಧಿಗಳು ಮತ್ತು ದೆಹಲಿಯಲ್ಲಿನ ಬಾಲಾಪರಾಧಿ ನ್ಯಾಯ ಮಂಡಳಿ ಸ್ಥಿತಿಗತಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ.

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ (ಜೆಜೆ ಕಾಯಿದೆ) 2015 ಅಥವಾ ಜೆಜೆ ಮಾದರಿ ನಿಯಮಗಳು 2016 ರ ಅಡಿ ಬಾಲ ಆರೋಪಿಗಳ ವಯಸ್ಸು ಪತ್ತೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ ನಿಗದಿಗೊಳಿಸದೆ ಇರುವುದು ಪ್ರಮುಖ ಕಾರಣ ಎಂದು ದೆಹಲಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿಗಳ ಕಾರ್ಯದರ್ಶಿ ಅನು ಗ್ರೋವರ್‌ ಬಾಳಿಗಾ ಹೇಳಿದರು.

ಅಲ್ಲದೇ, ಅಧಿಕಾರಿಗಳು ದಾಖಲೆಗಳನ್ನು ತಯಾರಿಸಲು ಮತ್ತು ವಯಸ್ಸು ಪತ್ತೆ ಪರೀಕ್ಷೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದರು.

ಜೆಜೆ ಕಾಯಿದೆಯ ಸೆಕ್ಷನ್‌ 105ರ ಅಡಿ ಸ್ಥಾಪಿಸಲಾಗಿರುವ ಬಾಲನ್ಯಾಯ ನಿಧಿಯಲ್ಲಿ ಸಾಕಷ್ಟು ಹಣವಿದ್ದರೂ ಕಳೆದ ಕೆಲವು ವರ್ಷಗಳಿಂದ ಈ ಪ್ರಕ್ರಿಯೆಗಾಗಿ ಅತ್ಯಂತ ಕಡಿಮೆ ಹಣ ನಿಗದಿ ಮಾಡಲಾಗಿದೆ ಎಂದು ಹಿರಿಯ ವಕೀಲ ಹಾಗೂ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ ಎಚ್‌ ಎಸ್‌ ಫೂಲ್ಕಾ ಹೇಳಿದ್ದಾರೆ.

Also Read
ಆರ್ಯನ್‌ ಖಾನ್‌ ಪ್ರಕರಣ: ಮುಖ್ಯ ತನಿಖಾಧಿಕಾರಿ ಹುದ್ದೆಯಿಂದ ಸಮೀರ್‌ ವಾಂಖೆಡೆ ವರ್ಗಾವಣೆ

ದೆಹಲಿಯಲ್ಲಿ ಹನ್ನೊಂದು ನ್ಯಾಯಿಕ ಜಿಲ್ಲೆಗಳಿದ್ದು, ಹನ್ನೊಂದು ಜೆಜೆಬಿ ಪ್ರಾರಂಭಿಸುವ ಪ್ರಸ್ತಾಪವಿದ್ದರೂ ಕೇವಲ ಆರು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಬಾಲ ನ್ಯಾಯ ನಿಧಿಗೆ ಇದುವರೆಗೆ ಬಿಡುಗಡೆ ಮಾಡಿರುವ ಹಣ ಮತ್ತು ಏತಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಸುವಂತೆ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ. ನಗರದಲ್ಲಿ ಜೆಜೆಬಿ ಹೆಚ್ಚು ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವದ ಸ್ಥಿತಿಗತಿ ಮತ್ತು ಇದಕ್ಕಾಗಿ ನಿಗದಿಗೊಳಿಸಲಾಗಿರುವ ಕಾಲಮಿತಿಯನ್ನು ತಿಳಿಸುವಂತೆಯೂ ಪೀಠ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com