ಆಗ್ರಿಗೋಲ್ಡ್‌ ವಂಚನೆ ಪ್ರಕರಣ: ತಪ್ಪಿಗೆ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಸಿಗೆ ಎಚ್ಚರಿಸಿದ ಹೈಕೋರ್ಟ್‌

ಹದಿನಾಲ್ಕು ವರ್ಷಗಳ ಸೇವಾನುಭವ ಇದೆ ಎನ್ನುತ್ತೀರಿ. ಇಷ್ಟು ವರ್ಷಗಳಿಂದ ನೀವು ಕರ್ತವ್ಯ ನಿರ್ವಹಿಸುತ್ತಿರುವ ರೀತಿ ಇದೇನಾ ಏನು ಎಂದು ಉಪವಿಭಾಗಾಧಿಕಾರಿ ಮಂಜುನಾಥ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪೀಠ.
ಆಗ್ರಿಗೋಲ್ಡ್‌ ವಂಚನೆ ಪ್ರಕರಣ: ತಪ್ಪಿಗೆ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಸಿಗೆ ಎಚ್ಚರಿಸಿದ ಹೈಕೋರ್ಟ್‌

Agri Gold Scam and Karnataka High Court

ಹೂಡಿಕೆದಾರರಿಗೆ ವಂಚನೆ ಎಸಗಿದ ಆರೋಪದಲ್ಲಿ ಆಗ್ರಿಗೋಲ್ಡ್ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದ ರಾಮನಗರ ಉಪ ವಿಭಾಗಾಧಿಕಾರಿಯನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಈ ತಪ್ಪಿಗೆ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನ ಆಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ರಾಮನಗರ ಉಪ ವಿಭಾಗಾಧಿಕಾರಿ ಸಿ ಮಂಜುನಾಥ್ ಖುದ್ದು ಹಾಜರಿದ್ದರು. ಸರ್ಕಾರದ ಪರ ವಕೀಲರು, ಸಂವಹನ ಕೊರತೆಯಿಂದಾಗಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸುವಲ್ಲಿ ಲೋಪವಾಗಿದೆ. ಈ ಬಗ್ಗೆ ವಿವರಣೆ ನೀಡಿ ಮಾರ್ಚ್‌ 5ರಂದು ಉಪವಿಭಾಗಾಧಿಕಾರಿ ಅಫಿಡವಿಟ್‌ ಸಲ್ಲಿಸಿದ್ದು, ತಮ್ಮ ತಪ್ಪಿಗಾಗಿ ಬೇಷರತ್ ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದರು.

ಆಗ ಪೀಠವು ಕ್ಷಮೆ ಕೋರಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದಿಲ್ಲ. ನ್ಯಾಯಾಲಯದ ಹಾದಿ ತಪ್ಪಿಸಿದ್ದಕ್ಕಾಗಿ ಈ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ, ನ್ಯಾಯಾಂಗ ನಿಂದನೆ ಎಸಗಿರುವ ಅವರನ್ನು ಜೈಲಿಗೆ ಕಳುಹಿಸುವುದಾಗಿ ಆಕ್ರೋಶದಿಂದ ಹೇಳಿತು.

ಕರ್ತವ್ಯ ನಿರ್ವಹಿಸುತ್ತಿರುವ ರೀತಿ ಇದೇನಾ?

ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪೀಠ, ನೀವೇನು ಮಾಡಿದ್ದೀರಿ ಎನ್ನುವುದು ನಿಮಗೆ ಅರ್ಥವಾಗಿದೆಯೇ, ಈ ತಪ್ಪಿಗೆ ನೀವು ನಿಮ್ಮ ಕೆಲಸ ಕಳೆದುಕೊಳ್ಳಬಹುದು, ಹೈಕೋರ್ಟ್ ಅನ್ನು ಇಷ್ಟು ಹಗುರವಾಗಿ ಪರಿಗಣಿಸುತ್ತೀರಾ, ಸರಿಯಾಗಿ ಪರಿಶೀಲನೆ ನಡೆಸದೆ ನಿಮ್ಮ ಮನಸಿಗೆ ತೋಚಿದ ಮಾಹಿತಿ ನೀಡಬಹುದು ಎಂದುಕೊಂಡಿದ್ದೀರಾ? ಸರ್ಕಾರದ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣ ಅಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದ್ದೀರಿ. ಅದೂ ಕೇವಲ ಒಮ್ಮೆಯಲ್ಲ, ನಾಲ್ಕು ಬಾರಿ ಇದೇ ರೀತಿ ಮಾಹಿತಿ ಕೊಟ್ಟಿದ್ದೀರಿ ಎಂದು ಗುಡುಗಿತು.

ಮುಂದುವರೆದು, ನೀವು ಮಾಹಿತಿ ನೀಡಿರುವ ದಿನಾಂಕಗಳಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. 2022ರ ಜನವರಿಯಲ್ಲಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಮನವಿ ಸಲ್ಲಿಸಲಾಗಿದ್ದು, ಅದಿನ್ನೂ ಪೀಠದ ಮುಂದೆ ವಿಚಾರಣೆಗೂ ಬಂದಿಲ್ಲ ಎನ್ನುವುದು ಈಗ ತಿಳಿದುಬಂದಿದೆ. ಈ ವಿಚಾರವನ್ನು ನ್ಯಾಯಾಲಯ ಸಂಜ್ಞೇಯ ಪರಿಗಣನೆಗೆ ತೆಗೆದುಕೊಂಡು ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದಲ್ಲವೇ, ಹದಿನಾಲ್ಕು ವರ್ಷಗಳ ಸೇವಾನುಭವ ಇದೆ ಎನ್ನುತ್ತೀರಿ. ಇಷ್ಟು ವರ್ಷಗಳಿಂದ ನೀವು ಕರ್ತವ್ಯ ನಿರ್ವಹಿಸುತ್ತಿರುವ ರೀತಿ ಇದೇನಾ ಏನು ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

ಸರ್ಕಾರ ಸಮಜಾಯಿಷಿ

ಆರಂಭಿಕ ಹಂತದಲ್ಲಿ ಎಸಿ ಪ್ರಕರಣದ ಸಕ್ಷಮ ಪ್ರಾಧಿಕಾರವಾಗಿದ್ದರು. ಆ ಬಳಿಕ ವಿಶೇಷ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಯಿತು. ಎಸಿ ಕಚೇರಿಯಲ್ಲಿದ್ದ ದಾಖಲೆಗಳು ಅದಾಗಲೇ ವಿಶೇಷ ಅಧಿಕಾರಿಯ ಕಚೇರಿಗೆ ವರ್ಗಾಯಿಸಲಾಗಿತ್ತು. ಈ ಮಧ್ಯೆ, ಹಗರಣಕ್ಕೆ ಸಂಬಂಧಿಸಿದಂತೆ ಇತರ ರಾಜ್ಯಗಳ ನ್ಯಾಯಾಲಯಗಳಲ್ಲಿರುವ ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದು ನ್ಯಾಯಾಲಯ ನಿಯೋಜಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಬಂಧ 2021ರ ಆಗಸ್ಟ್‌ 7ರಂದು ಸರ್ಕಾರ ಆದೇಶ ಹೊರಡಿಸಿತ್ತು. ವಿಶೇಷ ಮನವಿ ಸಲ್ಲಿಸಬೇಕೆ ಅಥವಾ ವರ್ಗಾವಣೆ ಮನವಿ ಸಲ್ಲಿಸಬೇಕೆ ಎಂಬ ಗೊಂದಲವಿದ್ದ ಕಾರಣ, ಸೆಪ್ಟೆಂಬರ್‌ 21ರಂದು ತಿದ್ದೋಲೆ (ಕೊರಿಜಂಡಂ) ಹೊರಡಿಸಲಾಗಿತ್ತು ಎಂದು ವಿವರಿಸಿದರು.

ಇವೆಲ್ಲದರ ಆಧಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಗ್ರಹಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಯಾವುದೇ ಉದ್ದೇಶ ಅಧಿಕಾರಿಗೆ ಇರಲಿಲ್ಲ. ಮಾಡಿದ ತಪ್ಪಿಗೆ ಅವರು ಬೇಷರತ್ ಕ್ಷಮೆ ಯಾಚಿಸಿದ್ದು, ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಎಚ್ಚರವಹಿಸಲಿದ್ದಾರೆ. 2022ರ ಜನವರಿ 5ರಂದು ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಮನವಿ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಸಮಜಾಯಿಷಿ ನೀಡಲು ಮುಂದಾದರು.

Also Read
ಅಗ್ರಿ ಗೋಲ್ಡ್‌ ವಂಚನೆ: ಪ್ರಕರಣಗಳ ವಿಚಾರಣೆಗೆ ನೋಡಲ್‌ ರಾಜ್ಯ, ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಅಧಿಕಾರಿಗೆ ಎಚ್ಚರಿಕೆ

ಆಗ ಪೀಠವು ಹೈಕೋರ್ಟ್ ಎಂದರೆ ಎಷ್ಟು ಲಘುವಾಗಿ ಪರಿಗಣಿಸಿದ್ದೀರಿ ಎನ್ನುವುದು ಇದೆಲ್ಲದರಿಂದ ಅರ್ಥವಾಗುತ್ತಿದೆ. ಇದಕ್ಕೆ ಕೇವಲ ಅಧಿಕಾರಿ ಮಾತ್ರವಲ್ಲ, ನೀವೂ ಸಹ ಹೊಣೆಯಾಗಿದ್ದೀರಿ ಎಂದು ಸರ್ಕಾರದ ಪರ ವಕೀಲರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿತು.

ಅಂತಿಮವಾಗಿ ಉಪ ವಿಭಾಗಾಧಿಕಾರಿಯ ಅಫಿಡವಿಟ್‌ ದಾಖಲಿಸಿಕೊಂಡ ಪೀಠವು ಉದ್ದೇಶಪೂರ್ವವಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿಲ್ಲ ಎಂಬ ಅಧಿಕಾರಿಯ ವಿವರಣೆಯನ್ನು ಪರಿಗಣಿಸಿ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆದರೆ, ರಾಮನಗರ ಉಪ ವಿಭಾಗಾಧಿಕಾರಿ ಸಿ ಮಂಜುನಾಥ್ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡುತ್ತಿದೆ. ಭವಿಷ್ಯದಲ್ಲಿ ಅವರು ಮತ್ತಷ್ಟು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು.

Related Stories

No stories found.