ಅಗ್ರಿ ಗೋಲ್ಡ್‌ ವಂಚನೆ: ಪ್ರಕರಣಗಳ ವಿಚಾರಣೆಗೆ ನೋಡಲ್‌ ರಾಜ್ಯ, ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ.
Agri Gold Scam
Agri Gold Scam

ವಿವಿಧ ರಾಜ್ಯಗಳಿಗೆ ವಿಸ್ತರಿಸಿರುವ ಆಗ್ರಿ ಗೋಲ್ಡ್‌ ಬಹುಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಒಂದೇ ನೋಡಲ್‌ ರಾಜ್ಯದಲ್ಲಿ ನಡೆಸುವ ಅಗತ್ಯವಿದ್ದು, ಇದಕ್ಕಾಗಿ ಒಂದೇ ನ್ಯಾಯಾಲಯ ಸ್ಥಾಪಿಸಲು ಅಗತ್ಯ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದೆ

ನೂರಾರು ಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ರಿ ಗೋಲ್ಡ್ ಕಂಪೆನಿ ವಿರುದ್ಧ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಬದಲಾಗಿ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಒಂದೇ ನೋಡಲ್ ರಾಜ್ಯದಲ್ಲಿ ಮಾಡಬೇಕು ಎನ್ನುವ ಬೇಡಿಕೆ ಇದೆ.

ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಕುರಿತಾದ ಮಾಹಿತಿ ನೀಡಿದರು. ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

Also Read
ಪ್ರಾಮಾಣಿಕ ಅರ್ಜಿದಾರರು ಎನಿಸಿಕೊಳ್ಳಲು ಈಗಲ್ಟನ್‌ನಿಂದ ಕಾನೂನು ಹೋರಾಟ; ₹928 ಕೋಟಿ ಪಾವತಿಸಲು ಹೈಕೋರ್ಟ್‌ ಆದೇಶ

ಈ ಹಿಂದೆ, ಜುಲೈ 6ರಂದು ನಡೆದ ವಿಚಾರಣೆಯ ವೇಳೆ ಸಕ್ಷಮ ಪ್ರಾಧಿಕಾರದ ಅಧಿಕಾರಿಯು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅಗ್ರಿ ಗೋಲ್ಡ್ ಕಂಪೆನಿಯ ಅವ್ಯವಹಾರ ನಡೆದಿದ್ದು, ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಂಪೆನಿಗೆ ಸೇರಿದ ಕರ್ನಾಟಕದಲ್ಲಿರುವ ಒಟ್ಟು 290 ಆಸ್ತಿಗಳನ್ನು ತೆಲಂಗಾಣ ಸರ್ಕಾರ ಜಪ್ತಿ ಮಾಡಿದೆ. ಕಂಪೆನಿಯಲ್ಲಿ ಅಂದಾಜು 32 ಲಕ್ಷ ಹೂಡಿಕೆದಾರರಿದ್ದು, ಈ ಪೈಕಿ ಕರ್ನಾಟಕದ 8.8 ಲಕ್ಷ ಹೂಡಿಕೆದಾರರು ರಾಜ್ಯದಲ್ಲಿನ ವಿವಿಧ ಶಾಖೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಎಲ್ಲಾ ಪ್ರಕರಣಗಳ ವಿಚಾರಣೆಗೆ ಒಂದೇ ನೋಡಲ್ ರಾಜ್ಯವನ್ನು ಮಾಡಬೇಕು ಹಾಗೂ ಒಂದೇ ನ್ಯಾಯಾಲಯ ಸ್ಥಾಪಿಸಲು ಅಗತ್ಯ ನಿರ್ದೇಶನ ನೀಡುಬೇಕು ಎಂದು ಕೋರಿ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರ ಅರ್ಜಿ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಸರ್ಕಾರದ ವಾದವನ್ನು ಪರಿಗಣಿಸಿದ್ದ ಪೀಠವು ಕರ್ನಾಟಕದಲ್ಲಿ 8.5 ಲಕ್ಷ ಹೂಡಿಕೆದಾರರು ಇರುವ ಕಾರಣ ಅವರ ಹಿತರಕ್ಷಣೆಗಾಗಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com