
ಕೃತಕ ಬುದ್ಧಿಮತ್ತೆ ಸಾಧನಗಳು ಚೀನಾ ಬಳಿಯೇ ಇರಲಿ ಅಥವಾ ಅಮೆರಿಕನ್ನರ ಬಳಿಯೇ ಇರಲಿ ಅವು ಅಪಾಯಕಾರಿಯಾಗಿದ್ದು ಯಾವ ದೇಶದ ಕೈಯಲ್ಲಿ ಅವು ಇವೆ ಎಂಬುದು ಗೌಣವಾದುದು ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.
ಚೀನಾದ ಕೃತಕ ಬುದ್ಧಿಮತ್ತೆ ಕಂಪನಿ ಡೀಪ್‌ಸೀಕ್ ಬಳಕೆ ನಿರ್ಬಂಧಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅಂತೆಯೇ ಅರ್ಜಿ ಸಂಬಂಧ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಸಂಬಂಧಪಟ್ಟ ವಕೀಲರಿಗೆ ಅದು ಸೂಚಿಸಿತು.
ಪ್ರಕರಣವನ್ನು ಪರಿಗಣಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿತು.
ಕೃತಕ ಬುದ್ಧಿಮತ್ತೆ ಸಾಧನಗಳು ಚೀನಾ ಬಳಿಯೇ ಇರಲಿ ಅಥವಾ ಅಮೆರಿಕನ್ನರ ಬಳಿಯೇ ಇರಲಿ ವ್ಯತ್ತಾಸವಿಲ್ಲದೆಯೇ ಅವು ಅಪಾಯಕಾರಿ ಸಾಧನಗಳಾಗಿವೆ. ಸರ್ಕಾರಕ್ಕೆ ಈ ವಿಚಾರ ತಿಳಿದಿಲ್ಲ ಎಂದಲ್ಲ. ಅದಕ್ಕೆ ಚೆನ್ನಾಗಿಯೇ ತಿಳಿದಿದೆ ಎಂದು ನ್ಯಾ. ಗಡೇಲಾ ತಿಳಿಸಿದರು.
ಡೀಪ್ ಸೀಕ್ ಕೃತಕ ಬುದ್ಧಿಮತ್ತೆ ಬಳಕೆ ಆರಂಭವಾದಾಗಿನಿಂದ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಳವಳ ಇದೆ ಎಂದು ಅರ್ಜಿ ದೂರಿತ್ತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ.