

ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದಕ್ಕಾಗಿ ಶಾಸಕ ಮುಕುಲ್ ರಾಯ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯ ಶಾಸಕಾಂಗ ಸದಸ್ಯತ್ವದಿಂದ ಅನರ್ಹಗೊಳಿಸಿ ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ರಾಯ್ ಅವರಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಪರಿಶೀಲಿಸಿ ಸಾಬೀತುಪಡಿಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.
ಈಗ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ವಿಡಿಯೋ ಹಾಗೂ ಚಿತ್ರಗಳ ನೈಜತೆ ಸಂದೇಹಾಸ್ಪದವಾಗಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಪರಿಶೀಲಿಸಬೇಕಿದೆ ಎಂದು ಸಿಜೆಐ ಸೂರ್ಯ ಕಾಂತ್ ತಿಳಿಸಿದರು.
ಮುಕುಲ್ ರಾಯ್ ಅವರು ಬಿಜೆಪಿ ಟಿಕೆಟ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಜೂನ್ 2021ರಲ್ಲಿ ಅವರು ಟಿಎಂಸಿ ಸೇರಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಪ್ರಶ್ನಿಸಿ ರಾಜ್ಯದ ವಿಪಕ್ಷದ ನಾಯಕ ಸುವೇಂದು ಅಧಿಕಾರಿ ಹಾಗೂ ಬಿಜೆಪಿ ಶಾಸಕ ಅಂಬಿಕಾ ರಾಯ್ ಅವರು ಅರ್ಜಿ ಸಲ್ಲಿಸಿದ್ದರು. ಮುಕುಲ್ ರಾಯ್ ಅವರನ್ನು ಅನರ್ಹಗೊಳಿಸಬೇಕೆಂದು ಅವರು ಕೋರಿದ್ದರು.
2022ರಲ್ಲಿ ವಿಧಾನಸಭಾ ಸ್ಪೀಕರ್ ಅರ್ಜಿ ತಿರಸ್ಕರಿಸಿದ್ದರು. ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯನ್ನು ಮರುಪರಿಶೀಲಿಸುವಂತೆ ಸ್ಪೀಕರ್ ಅವರಿಗೆ ಸೂಚಿಸಿತ್ತು. ಆದರೆ ರಾಯ್ ಪಕ್ಷಾಂತರಗೊಂಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಜೂನ್ 2022ರಲ್ಲಿ ಸ್ಪೀಕರ್ ಮತ್ತೊಮ್ಮೆ ತೀರ್ಪು ನೀಡಿದರು.
ಇದನ್ನು ಸುವೇಂದು ಅಧಿಕಾರಿ ಮತ್ತು ಅಂಬಿಕಾ ರಾಯ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಜೂನ್ 11, 2021ರಂದು ಮುಕುಲ್ ರಾಯ್ ಟಿಎಂಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ದಾಖಲೆಗಳ ಆಧಾರದ ಮೇಲೆ ಅವರು ಪಕ್ಷಾಂತರ ಮಾಡಿದ್ದಾರೆ ಎಂದು ನವೆಂಬರ್ 2025ರಲ್ಲಿ ನ್ಯಾಯಮೂರ್ತಿ ದೇಬಾಂಗ್ಸು ಬಸಕ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ಶಬ್ಬರ್ ರಶೀದಿ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿತು. ಸಂವಿಧಾನದ ಹತ್ತನೇ ಪರಿಚ್ಛೇದದಡಿ ಅವರು ಅನರ್ಹರು ಎಂದು ಘೋಷಿಸಿದ ಅದು ರಾಯ್ ಅವರ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಸ್ಥಾನವನ್ನೂ ರದ್ದುಗೊಳಿಸಿತು.
ತೀರ್ಪನ್ನು ಮುಕುಲ್ ರಾಯ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಅಗರ್ವಾಲ್ ತಡೆ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಇನ್ನಷ್ಟು ಪರಿಶೀಲಿಸಬೇಕಿದೆ ಎಂಬ ಕಾರಣ ನೀಡಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿದೆ.
ಇದೇ ವೇಳೆ ನ್ಯಾಯಾಲಯ ಪ್ರತಿವಾದಿಗಳಾದ ಸುವೇಂದು ಅಧಿಕಾರಿ ಮತ್ತು ಅಂಬಿಕಾ ರಾಯ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು ನಾಲ್ಕು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಪ್ರಕರಣ ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಬರಲಿದೆ.