ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ನಿಂದನೆ: ಸೂಲಿಬೆಲೆ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 505 ಹಾಗೂ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್‌ 3(2) (v-a) ಅಡಿ ಪ್ರಕರಣ ದಾಖಲಿಸಿ, ಅದನ್ನು ರಾಯಚೂರು ಜಿಲ್ಲೆಯ ಸಿರಿವಾರ ಠಾಣೆಗೆ ವರ್ಗಾಯಿಸಲಾಗಿದೆ.
Chakravarti Sulibele and Karnataka HC -Kalburgi Bench
Chakravarti Sulibele and Karnataka HC -Kalburgi BenchFacebook

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿ ಜಾತಿ ನಿಂದನೆ ಪ್ರಕರಣ ಎದುರಿಸುತ್ತಿರುವ ನಮೋ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಅಲಿಯಾಸ್‌ ಮಿಥುನ್‌ ಚಕ್ರವರ್ತಿ ದೇವಿದಾಸ್‌ ಸೇಟ್‌ ವಿರುದ್ಧದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಂಗಳವಾರ ತಡೆಯಾಜ್ಞೆ ನೀಡಿದೆ.

ರಾಜಕೀಯ ಕಾರಣಕ್ಕಾಗಿ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು ವಾದಿಸಿ, ರಾಜಕೀಯ ಕಾರಣಕ್ಕಾಗಿ ದುರುದ್ದೇಶದಿಂದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ದೂರುದಾರರು ಕೆಪಿಸಿಸಿಯ ಪದಾಧಿಕಾರಿಯಾಗಿದ್ದು, ಸೂಲಿಬೆಲೆಗೆ ಮುಜುಗರ ಉಂಟು ಮಾಡಲು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಪ್ರಕರಣ ದಾಖಲು ಮಾಡಲಾಗಿದೆ ಎಂದರು. ಇದಕ್ಕೆ ಸರ್ಕಾರದ ವಕೀಲರು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಎಫ್‌ಐಆರ್‌ಗೆ ತಡೆ ನೀಡಿ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ನಮೋ ಬ್ರಿಗೇಡ್‌ ವತಿಯಿಂದ ಜನವರಿ 18ರಂದು ರಾಯಚೂರಿನ ಸಿರಿವಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಭಾಗವಹಿಸಿದ್ದ ಸೂಲಿಬೆಲೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ನಿಂದಿಸಿದ್ದಲ್ಲದೇ ಆಧಾರರಹಿತವಾಗಿ ಸುಳ್ಳು ಭಾಷಣ ಮಾಡಿದ್ದಾರೆ. ಈ ಮೂಲಕ ಕೋಮು ದ್ವೇಷ ಹರಡು ಪ್ರಯತ್ನ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಕೃತ್ಯದಲ್ಲಿ ಸೂಲಿಬೆಲೆ ಭಾಗವಹಿಸಿದ್ದು, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಸೂಲಿಬೆಲೆ ಭಾಷಣದ ಡಿವಿಡಿಗಳನ್ನು ಒಳಗೊಂಡ ದೂರನ್ನು ಕಲಬುರ್ಗಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್‌ ಗುತ್ತೇದಾರ್‌ ಕಾಳಗಿ ಅವರು ಕಲಬರ್ಗಿಯ ಬ್ರಹ್ಮಾಪುರ ಠಾಣೆಯಲ್ಲಿ ದೂರು ನೀಡಿದ್ದರು.

Also Read
ಕೋಮು ದ್ವೇಷ: ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಇದರ ಆಧಾರದಲ್ಲಿ ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 505 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್‌ 3(2) (v-a) ಅಡಿ ಪ್ರಕರಣ ದಾಖಲಿಸಿ, ಅದನ್ನು ರಾಯಚೂರು ಜಿಲ್ಲೆಯ ಸಿರಿವಾರ ಠಾಣೆಗೆ ವರ್ಗಾಯಿಸಲಾಗಿದೆ.

Kannada Bar & Bench
kannada.barandbench.com