
ಕಳೆದ ಜೂನ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಘಟನೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ವಿಮಾನ ಚಲಾಯಿಸುತ್ತಿದ್ದ ಏರ್ ಇಂಡಿಯಾ ಪೈಲಟ್-ಇನ್-ಕಮಾಂಡ್ ಸುಮೀತ್ ಸಭರವಾಲ್ ಅವರ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಅಪಘಾತದ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ತಾಂತ್ರಿಕವಾಗಿ ಉತ್ತಮ ರೀತಿಯ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಾಯುಯಾನ ವಲಯದ ಸ್ವತಂತ್ರ ತಜ್ಞರ ಸಮಿತಿ ರಚಿಸುವಂತೆ ಸುಮೀತ್ ಅವರ ತಂದೆ ಪುಷ್ಕರಾಜ್ ಸಭರವಾಲ್ ಕೋರಿದ್ದಾರೆ.
ಜೂನ್ 12 ರಂದು ಅಹಮದಾಬಾದ್‌ನಿಂದ ಟೇಕಾಫ್ ಆಗುತ್ತಿದ್ದಾಗ ವಿಮಾನ ಅಪಘಾತಕ್ಕೀಡಾಗಿ 260 ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಪೈಲಟ್‌ಗಳ ಲೋಪವೇ ಕಾರಣ ಎಂದು ಈಗ ನಡೆಯುತ್ತಿರುವ ತನಿಖೆ ಮತ್ತು ಜೂನ್ 15ರಂದು ಸಲ್ಲಿಸಲಾದ ಪ್ರಾಥಮಿಕ ವರದಿ ಹೇಳುತ್ತಿದ್ದು ತನಿಖೆಯಲ್ಲಿ ಗಂಭೀರ ದೋಷಗಳಿವೆ ಎಂದು ಸಭರ್‌ವಾಲ್ ಮತ್ತು ಭಾರತೀಯ ಪೈಲಟ್‌ಗಳ ಒಕ್ಕೂಟ ಜಂಟಿಯಾಗಿ ಸಲ್ಲಿಸಿದ ಅರ್ಜಿ ಹೇಳಿದೆ.
ಸಿಬ್ಬಂದಿಯ ಸೂಚನೆಗೂ ಮುನ್ನವೇ ರ‍್ಯಾಮ್ ಏರ್ ಟರ್ಬೈನ್ (ಆರ್‌ಎಟಿ) ಚಾಲನೆಗೊಂಡಿದ್ದು, ವಿದ್ಯುತ್ ವೈಫಲ್ಯ, ವಿನ್ಯಾಸ ಲೋಪ, ಇಂಧನ ಸ್ವಿಚ್ ಸಮಸ್ಯೆ ಹಾಗೂ ಇದೇ ರೀತಿಯ ಬೋಯಿಂಗ್ 787ನಲ್ಲಿ ಉಂಟಾದ ಸಮಸ್ಯೆಗಳನ್ನು ಪ್ರಾಥಮಿಕ ತನಿಖೆ ವೇಳೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅರ್ಜಿ ಹೇಳಿದೆ.
ಅಪಘಾತದ ನಿಖರವಾದ ಕಾರಣವನ್ನು ಗುರುತಿಸದೆ ಅಪೂರ್ಣ ಮತ್ತು ಪೂರ್ವಾಗ್ರಹ ಪೀಡಿತ ತನಿಖೆ ನಡೆಸಿರುವುದು ಭವಿಷ್ಯದಲ್ಲಿ ಪ್ರಯಾಣಿಕರ ಜೀವಕ್ಕೆ, ವೈಮಾನಿಕ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತದೆ. ಹೀಗೆ ಮಾಡುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮನವಿ ತಿಳಿಸಿದೆ.
ತನಿಖೆಯ ಪ್ರಸ್ತುತ ವಿಧಾನದಲ್ಲಿ ಬೋಯಿಂಗ್ 787 ವಿಮಾನಕ್ಕೆ ಸಂಬಂಧಿಸಿದ ಹೆಚ್ಚಿನ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಅಂಶಗಳನ್ನು ಸರಿಯಾಗಿ ಪರಿಶೀಲಿಸಿಲ್ಲ.
ಆಯ್ದ ಮಾಹಿತಿಯನ್ನಷ್ಟೇ ಬಹಿರಂಗಪಡಿಸುವ ಮೂಲಕ ದಿಕ್ಕು ತಪ್ಪಿಸಿರುವ ಬಗ್ಗೆ ಅರ್ಜಿಯುಲ್ಲಿ ಒತ್ತು ನೀಡಲಾಗಿದೆ. ತಮ್ಮನ್ನು ಸಮರ್ಥಿಸಿಕೊಳ್ಳಲಾಗದ ಮೃತ ಸಿಬ್ಬಂದಿಯ ವಿರುದ್ಧ ಬೆರಳು ಮಾಡಿರುವ ಬಗ್ಗೆ ತೀವ್ರ ಅಸಮಾಧಾನವನ್ನು ಅರ್ಜಿ ದಾಖಲಿಸಿದೆ.
ಹೀಗೆ ಮಾಡಿರುವುದು ಘಟನೆಯ ಮೂಲ ಕಾರಣ ಪತ್ತೆಗೆ ಅಡ್ಡಿ ಉಂಟುಮಾಡುತ್ತದೆ. ಭವಿಷ್ಯದ ವಿಮಾನ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಹೀಗಾಗಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಅಗತ್ಯವಿದೆ ಎಂದು ಅರ್ಜಿ ಹೇಳಿದೆ. ಅರ್ಜಿಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಿಲ್ಲ.
ಇದಾಗಲೇ ಸರ್ಕಾರೇತರ ಸಂಸ್ಥೆ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಈ ಸಂಬಂಧ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ.